ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs ENG: ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲಿರುವ ವಿರಾಟ್‌ ಕೊಹ್ಲಿ?

ಸ್ನಾಯು ಸೆಳೆತದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರು ಇಂಗ್ಲೆಂಡ್‌ ವಿರುದ್ಧದ ಮುಂಬರುವ ಏಕದಿನ ಸರಣಿಯಲ್ಲಿ ಆಡಬಹುದೆಂದು ಹೇಳಲಾಗುತ್ತಿದೆ. ಅವರು ನಿರೀಕ್ಷೆಯಂತೆ ಅವರು ಗಾಯದಿಂದ ಗುಣಮುಖರಾಗುತ್ತಿದ್ದು, ಸರಣಿಗೂ ಮುನ್ನ ಸಂಪೂರ್ಣ ಫಿಟ್ನೆಸ್‌ಗೆ ಮರಳಿದರೆ, ಭಾರತ ತಂಡಕ್ಕೆ ಮರಳಲಿದ್ದಾರೆ.

ಇಂಗ್ಲೆಂಡ್‌ ಎದುರು ಏಕದಿನ ಸರಣಿ ಆಡಲಿರುವ ವಿರಾಟ್‌ ಕೊಹ್ಲಿ?

ನವದೆಹಲಿ: ಭಾರತದ ಸ್ಟಾರ್ ಬ್ಯಾಟರ್ ವಿರಾಟ್‌ ಕೊಹ್ಲಿ(Virat Kohli) ಅವರ ಗಾಯದ ಚೇತರಿಕೆ ನಿರೀಕ್ಷೆಗಿಂತ ಉತ್ತಮವಾಗಿ ಸಾಗುತ್ತಿದ್ದು, ಎಲ್ಲವೂ ಯೋಜನೆಯಂತೆ ನಡೆದರೆ ಮುಂದಿನ ತಿಂಗಳು (ಜುಲೈ) ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ (IND vs ENG) ಅವರು ಸಂಪೂರ್ಣ ಫಿಟ್ ಆಗುವ ಸಾಧ್ಯತೆಯಿದೆ. ಐದು ಟಿ20 ಪಂದ್ಯಗಳ ಸರಣಿಯ ಬಳಿಕ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಪಂದ್ಯಗಳು ಜುಲೈ 14, 16 ಮತ್ತು 19ರಂದು ಕ್ರಮವಾಗಿ ಬರ್ಮಿಂಗ್‌ಹ್ಯಾಮ್‌, ಕಾರ್ಡಿಫ್‌ ಹಾಗೂ ಲಾರ್ಡ್ಸ್‌ನಲ್ಲಿ ನಡೆಯಲಿವೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಮೇ 31ರಂದು 2026ರ ಐಪಿಎಲ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ಒಳಗಾಗಿದ್ದ ಕೊಹ್ಲಿ, ಸರಣಿ ಆರಂಭವಾಗುವ ವೇಳೆಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ. ಕೊಹ್ಲಿಯ ಫಿಟ್‌ನೆಸ್ ಬಗ್ಗೆ ಭಾರತೀಯ ತಂಡದ ವೈದ್ಯಕೀಯ ವಿಭಾಗ ನಿರಂತರ ನಿಗಾ ವಹಿಸಿದ್ದು, ಅವರು ಶೀಘ್ರದಲ್ಲೇ ಪೂರ್ಣ ಪ್ರಮಾಣದ ಅಭ್ಯಾಸಕ್ಕೆ ಮರಳುವ ಸಾಧ್ಯತೆಯಿದೆ. ಅವರ ಲಭ್ಯತೆ ಭಾರತ ತಂಡಕ್ಕೆ ದೊಡ್ಡ ಬಲ ನೀಡಲಿದೆ.

ವಿರಾಟ್‌ ಕೊಹ್ಲಿಗೆ ವಿದಾಯದ ಟೆಸ್ಟ್‌ ಪಂದ್ಯ ನೀಡಬೇಕಾಗಿತ್ತೆಂದ ಕೆ ಶ್ರೀಕಾಂತ್‌!

“ವಿರಾಟ್‌ ಕೊಹ್ಲಿ ಈಗಾಗಲೇ ಪುನಶ್ಚೇತನ (ರಿಹ್ಯಾಬಿಲಿಟೇಷನ್) ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಅವರ ಗಾಯ ನಿರೀಕ್ಷೆಗಿಂತ ವೇಗವಾಗಿ ಗುಣಮುಖವಾಗುತ್ತಿದೆ. ಶೀಘ್ರದಲ್ಲೇ ಅವರು ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ತೆರಳಿ ಫಿಟ್‌ನೆಸ್ ಪರೀಕ್ಷೆ ಮತ್ತು ಅಂತಿಮ ಅನುಮೋದನೆ ಪಡೆಯುವ ನಿರೀಕ್ಷೆಯಿದೆ. ಅವರ ಚೇತರಿಕೆ ಇದೇ ರೀತಿ ಮುಂದುವರಿದರೆ, ಇಂಗ್ಲೆಂಡ್ ವಿರುದ್ಧದ ಮುಂಬರುವ ಏಕದಿನ ಸರಣಿಯಲ್ಲಿ ಕೊಹ್ಲಿ ಮತ್ತೆ ಭಾರತ ತಂಡಕ್ಕೆ ಮರಳುವ ಸಾಧ್ಯತೆ ಇದೆ. ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಯ ಸಭೆ ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ನಡೆಯಲಿದೆ,” ಎಂದು ಬಿಸಿಸಿಐ ಮೂಲವನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ವಿರಾಟ್‌ ಕೊಹ್ಲಿ ಅವರಿಗೆ ಗಾಯವಾಗುವುದು ಅಪರೂಪ. ಆದ್ದರಿಂದ ಅವರು ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೆ ಒಳಗಾದ ಸುದ್ದಿ ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಆದರೆ 37ನೇ ವಯಸ್ಸಿನಲ್ಲಿ ದೇಹದಲ್ಲಿ ಸಹಜವಾಗಿಯೇ ಆಯಾಸ ಮತ್ತು ಒತ್ತಡದ ಲಕ್ಷಣಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದಾಗ್ಯೂ, ಫಿಟ್‌ನೆಸ್‌ಗೆ ಹೆಸರಾಗಿರುವ ಕೊಹ್ಲಿ ಅವರ ವೇಗವಾದ ಚೇತರಿಕೆ ಅವರ ಅಸಾಧಾರಣ ದೈಹಿಕ ಸಾಮರ್ಥ್ಯ ಮತ್ತು ಶಿಸ್ತುಬದ್ಧ ಜೀವನಶೈಲಿಗೆ ಸಾಕ್ಷಿಯಾಗಿದೆ.

2030ರವರೆಗೂ ವಿರಾಟ್‌ ಕೊಹ್ಲಿ ಆರ್‌ಸಿಬಿ ಪರ ಆಡಲಿದ್ದಾರೆಂದ ರಾಜೇಶ್‌ ಮೆನನ್‌!

ಟಿ20ಐ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ, ಕೊಹ್ಲಿ ಅವರ ಆಟದಲ್ಲಿ ಯಾವುದೇ ಕುಂದು ಕಾಣಿಸಿಲ್ಲ. ಅವರು ಇನ್ನೂ ಭಾರತದ ಏಕದಿನ ತಂಡದ ಪ್ರಮುಖ ಆಧಾರಸ್ತಂಭವಾಗಿದ್ದು, ಮುಂದಿನ ವರ್ಷ ನಡೆಯುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯನ್ನು ಗುರಿಯಾಗಿಸಿಕೊಂಡಿರುವ ಭಾರತದ ಯೋಜನೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.

ವಿರಾಟ್‌ ಕೊಹ್ಲಿ ಅವರ ಇತ್ತೀಚಿನ ಏಕದಿನ ಕ್ರಿಕೆಟ್‌ ಫಾರ್ಮ್‌ ಅದ್ಭುತವಾಗಿದೆ. ಕಳೆದ ಏಳು ಏಕದಿನ ಪಂದ್ಯಗಳಲ್ಲಿ ಅವರು 123.20ರ ಸರಾಸರಿಯಲ್ಲಿ 616 ರನ್‌ಗಳನ್ನು ಗಳಿಸಿದ್ದು, ಇದರಲ್ಲಿ ಮೂರು ಶತಕಗಳು ಸೇರಿವೆ. ಇದರ ಬಳಿಕವೂ ಅವರು 2026ರ ಐಪಿಎಲ್ ಟೂರ್ನಿಯಲ್ಲಿಯೂ ಅದೇ ಲಯವನ್ನು ಮುಂದುವರಿಸಿ, 675 ರನ್‌ಗಳನ್ನು ಕಲೆಹಾಕಿದ್ದರು.