ಮ್ಯಾಂಚೆಸ್ಟರ್: ಜೋ ರೂಟ್ ಶತಕ (150) ಹಾಗೂ ಬೆನ್ ಸ್ಟೋಕ್ಸ್ (77*) ಅವರ ಅರ್ಧಶತಕದ ಬಲದಿಂದ ಇಂಗ್ಲೆಂಡ್ ತಂಡ, ಭಾರತದ ಎದುರು ನಾಲ್ಕನೇ ಟೆಸ್ಟ್ ಪಂದ್ಯದ (IND vs ENG) ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಮೂರನೇ ದಿನ ಬೌಲಿಂಗ್ ವೈಫಲ್ಯ ಅನುಭವಿಸಿದ ಪ್ರವಾಸಿ ಟೀಮ್ ಇಂಡಿಯಾ(India) ಭಾರಿ ಹಿನ್ನಡೆಯನ್ನು ಅನುಭವಿಸಿದೆ. ಇಂಗ್ಲೆಂಡ್ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 135 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 544 ರನ್‌ಗಳನ್ನು ಕಲೆ ಹಾಕಿದೆ ಹಾಗೂ 186 ರನ್‌ಗಳ ಮುನ್ನಡೆಯನ್ನು ಸಾಧಿಸಿದೆ. ಇದರೊಂದಿಗೆ ಆತಿಥೇಯರು (England) ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಸುಭದ್ರ ಸ್ಥಿತಿಯಲ್ಲಿದ್ದಾರೆ.
ಶುಕ್ರವಾರ ಇಲ್ಲಿನ ಓಲ್ಡ್ ಟ್ರಾಫರ್ಡ್‌ನಲ್ಲಿ ಎರಡು ವಿಕೆಟ್ ಕಳೆದುಕೊಂಡು 225 ರನ್‌ಗಳಿಂದ ಮೂರನೇ ದಿನದಾಟವನ್ನು ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಆಸರೆಯಾದರು. ಜೋ ರೂಟ್ ಜೊತೆ ಮೂರನೇ ದಿನ ಬ್ಯಾಟಿಂಗ್‌ಗೆ ಬಂದ ಒಲ್ಲಿ ಪೋಪ್ 128 ಎಸೆತಗಳಲ್ಲಿ 71 ರನ್ ಗಳಿಸಿದರು ಹಾಗೂ ಮೂರನೇ ವಿಕೆಟ್‌ಗೆ 144 ರನ್‌ಗಳ ಜತೆಯಾಟವನ್ನು ಆಡಿದ್ದರು. ಚೆಂಡು ಕೈಗೆತ್ತಿಕೊಂಡ ವಾಷಿಂಗ್ಟನ್ ಸುಂದರ್, ಒಲ್ಲಿ ಪೋಪ್ ಅವರನ್ನು ಔಟ್ ಮಾಡಿ ದೊಡ್ಡ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ನಂತರ ಕ್ರೀಸ್‌ಗೆ ಬಂದ ಹ್ಯಾರಿ ಬ್ರೂಕ್ ಅವರಿಗೂ ಕೂಡ ವಾಷಿಂಗ್ಟನ್ ಸುಂದರ್ ಪೆವಿಲಿಯನ್ ಹಾದಿ ತೋರಿಸಿದರು.
IND vs ENG: ರಾಹುಲ್ ದ್ರಾವಿಡ್ ಬೆನ್ನಲ್ಲೆ ರಿಕಿ ಪಾಂಟಿಂಗ್ ದಾಖಲೆ ಮುರಿದ ಜೋ ರೂಟ್!
ಜೋ ರೂಟ್-ಬೆನ್ ಸ್ಟೋಕ್ಸ್ ಜುಗಲ್‌ಬಂದಿ
ಐದನೇ ವಿಕೆಟ್‌ಗೆ ಜೊತೆಯಾದ ಬೆನ್ ಸ್ಟೋಕ್ಸ್ ಹಾಗೂ ಜೋ ರೂಟ್ ದೀರ್ಘಾವಧಿ ಭಾರತೀಯ ಬೌಲರ್‌ಗಳನ್ನು ಕಾಡಿದರು. ಈ ಇಬ್ಬರೂ 150 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಇಂಗ್ಲೆಂಡ್ ಮೊತ್ತವನ್ನು 500ರ ಸನಿಹ ತಂದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಮಾಜಿ ನಾಯಕ ಜೋ ರೂಟ್, ತಮ್ಮ ಟೆಸ್ಟ್ ವೃತ್ತಿ ಜೀವನದ 38ನೇ ಶತಕವನ್ನು ಬಾರಿಸಿದರು.
England pile on the runs to get a handy lead at the end of Day 3 at Manchester 👊#WTC27 | #ENGvIND 📝: https://t.co/FGxBigH5Wh pic.twitter.com/hfpMFwujrq
— ICC (@ICC) July 25, 2025
38ನೇ ಶತಕ ಬಾರಿಸಿದ ಜೋ ರೂಟ್
ಅದ್ಭುತ ಬ್ಯಾಟ್ ಮಾಡಿದ ಜೋ ರೂಟ್, 248 ಎಸೆತಗಳಲ್ಲಿ 14 ಬೌಂಡರಿಯೊಂದಿಗೆ 150 ರನ್‌ಗಳನ್ನು ಗಳಿಸಿದರು. ಅಂತಿಮವಾಗಿ ರವೀಂದ್ರ ಜಡೇಜಾಗೆ ಸ್ಟಂಪ್ ಔಟ್ ಆದರು. ಆದರೂ ತಮ್ಮ ವೃತ್ತಿ ಜೀವನದ 38ನೇ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದರು. ಇದರ ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 13409 ರನ್ ಗಳಿಸುವ ಮೂಲಕ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ ಹಾಗೂ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿದ್ದಾರೆ.
With many stalwarts now behind him, only Sachin Tendulkar remains in Joe Root’s path 👏
— ICC (@ICC) July 25, 2025
#WTC27 | #ENGvIND | ➡️ https://t.co/ZxLl2veHTh pic.twitter.com/FndKFXXdEv
ಬೆನ್ ಸ್ಟೋಕ್ಸ್ ಅರ್ಧಶತಕ
ಇನ್ನು ಜೋ ರೂಟ್ ಜೊತೆ ಭರ್ಜರಿ ಜೊತೆಯಾಟವನ್ನು ಆಡಿದ್ದ ಬೆನ್ ಸ್ಟೋಕ್ಸ್ ಕೂಡ ಮೂರನೇ ದಿನ ಮಿಂಚಿದರು. ಅವರು ಮೂರನೇ ದಿನದಾಟದ ಅಂತ್ಯಕ್ಕೆ 134 ಎಸೆತಗಳಲ್ಲಿ ಅಜೇಯ 77 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ ಲಿಯಾಮ್ ಡಾಸನ್ (21*) ಇದ್ದಾರೆ.
ಭಾರತ ತಂಡದ ಬೌಲರ್‌ಗಳ ಪಾಲಿಗೆ ಮೂರನೇ ದಿನ ಅತ್ಯಂತ ಕಠಿಣವಾಗಿತ್ತು. ಆದರೆ, ವಾಷಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜಾ ತಲಾ ಎರಡೆರಡು ವಿಕೆಟ್ ಕಿತ್ತಿದ್ದರೆ, ಮೊಹಮ್ಮದ್ ಸಿರಾಜ್ ಒಂದು ವಿಕೆಟ್ ಪಡೆದಿದ್ದಾರೆ.