ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs ENG: ʻತಂಡದಲ್ಲಿ ನೀವು ಸ್ಥಾನವನ್ನು ಕಳೆದುಕೊಳ್ಳುತ್ತೀರಿʼ-ಸಂಜು ಸ್ಯಾಮ್ಸನ್‌ಗೆ ಆಕಾಶ್‌ ಚೋಪ್ರಾ ವಾರ್ನಿಂಗ್‌!

ಐರ್ಲೆಂಡ್‌ ವಿರುದ್ಧದ ಟಿ20ಐ ಸರಣಿಯ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಭಾರತ ತಂಡದ ಆರಂಭಿಕ ಸಂಜು ಸ್ಯಾಮ್ಸನ್‌ಗೆ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ ಎಚ್ಚರಿಕೆಯನ್ನು ನೀಡಿದ್ದಾರೆ. ಒಮ್ಮೆ ಇವರನ್ನು ಪ್ಲೇಯಿಂಗ್‌ XIನಿಂದ ಕೈ ಬಿಟ್ಟರೆ, ಅವರು ಭಾರತ ತಂಡದಲ್ಲಿ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂಜು ಸ್ಯಾಮ್ಸನ್‌ಗೆ ಆಕಾಶ್‌ ಚೋಪ್ರಾ ಎಚ್ಚರಿಕೆ.

ನವದೆಹಲಿ: ಐರ್ಲೆಂಡ್‌ ವಿರುದ್ಧದ ಟಿ20ಐ ಸರಣಿಯ (IND vs IRE) ಎರಡೂ ಪಂದ್ಯಗಳಲ್ಲಿ ಸತತವಾಗಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ಗೆ (Sanju Samson) ಟೆಸ್ಟ್‌ ಮಾಜಿ ಆರಂಭಿಕ ಆಕಾಶ್‌ ಚೋಪ್ರಾ (Aakash Chopra) ಎಚ್ಚರಿಕೆ ನೀಡಿದ್ದಾರೆ. ಸಂಜು ಪ್ಲೇಯಿಂಗ್‌ Xiನಲ್ಲಿ ಸ್ಥಾನವನ್ನು ಕಳೆದುಕೊಂಡರೆ, ಅವರು ತಂಡದಲ್ಲಿಯೇ ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಸಂಜು ಸ್ಯಾಮ್ಸನ್‌ ಮಹತ್ತರ ಪಾತ್ರವನ್ನು ವಹಿಸಿದ್ದರು. ಆದರೆ, ಅವರು ಐರ್ಲೆಂಡ್‌ ಎದುರು ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದಾರೆ.

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಔಟಾದ ಸಂಜು ಸ್ಯಾಮ್ಸನ್ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

"ಸಂಜು ಮೊದಲ ಎಸೆತದಲ್ಲೇ ಔಟಾದರು. ಈಗ ಅವರ ಬಗ್ಗೆ ನನಗೆ ಸ್ವಲ್ಪ ಆತಂಕವಾಗುತ್ತಿದೆ. ಏಕೆಂದರೆ ತಂಡದಲ್ಲಿ ಯಾರನ್ನಾದರೂ ಕೈಬಿಡಬೇಕಾದರೆ ಮೊದಲಿಗೆ ಗುರಿಯಾಗುವ ಆಟಗಾರ ಸಂಜು ಸ್ಯಾಮ್ಸನ್ ಅವರೇ. ಅಂತಿಮ ಹನ್ನೊಂದರಿಂದ ಹೊರಗುಳಿಯುವ ಅಪಾಯ ಮೊದಲು ಅವರ ಮೇಲೆಯೇ ಬರುತ್ತದೆ. ಆದ್ದರಿಂದ ಅವರು ಉತ್ತಮ ರನ್ ಗಳಿಸಲಿ ಎಂದು ನಾನು ಮನಸ್ಸಿನಲ್ಲೇ ಆಶಿಸುತ್ತಿದ್ದೆ. ವಿಶೇಷವಾಗಿ ಮೊದಲ ಪಂದ್ಯದಲ್ಲಿ ಬೇಗ ಔಟಾದ ನಂತರ ಎರಡನೇ ಪಂದ್ಯದಲ್ಲಿ ಅವರು ದೊಡ್ಡ ಇನಿಂಗ್ಸ್ ಆಡಬೇಕು ಎಂದು ಬಯಸಿದ್ದೆ," ಎಂದು ಚೋಪ್ರಾ ಹೇಳಿದ್ದಾರೆ.

'ಗಂಭೀರ್‌ ಕೋಚಿಂಗ್ ನಮಗೆ ಬೇಡ'; ಟ್ರೋಲ್‌ ಮಾಡಿದ ಐರ್ಲೆಂಡ್‌ ಕ್ರಿಕೆಟ್‌ ಮಂಡಳಿ

ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಆರಂಭಿಕ ವೈಫಲ್ಯ ಅನುಭವಿಸಿದ್ದರೂ, ಸಂಜು ಸ್ಯಾಮ್ಸನ್ ಅವರ ಸಾಮರ್ಥ್ಯದ ಬಗ್ಗೆ ಯಾವುದೇ ಅನುಮಾನವಿಲ್ಲ. 2026ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅವರು ಭಾರತದ ಪ್ರಶಸ್ತಿ ಗೆಲುವಿನ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರು. ಬಲಗೈ ಬ್ಯಾಟರ್ ಸಂಜು, ಟೂರ್ನಿಯ ನಿರ್ಣಾಯಕ ಹಂತಗಳಲ್ಲಿ ಸತತ ಮೂರು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರದರ್ಶನ ನೀಡಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಮಹತ್ವದ ಪಾತ್ರವಹಿಸಿದರು.

ಸೂಪರ್-8ರ ಹಂತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 196 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಸಂಜು ಅಜೇಯ 50 ಎಸೆತಗಳಲ್ಲಿ 97 ರನ್ ಸಿಡಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಇದಾದ ಬಳಿಕ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಕೇವಲ 42 ಎಸೆತಗಳಲ್ಲಿ 89 ರನ್ ಬಾರಿಸಿ ಮತ್ತೊಮ್ಮೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಅಷ್ಟೇ ಅಲ್ಲದೆ, ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲೂ 46 ಎಸೆತಗಳಲ್ಲಿ ಸ್ಫೋಟಕ 89 ರನ್ ಗಳಿಸಿ ಭಾರತದ ಪ್ರಶಸ್ತಿ ಗೆಲುವಿನಲ್ಲಿ ನಿರ್ಣಾಯಕ ಕೊಡುಗೆ ನೀಡಿದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವಂತೆ ಬೆನ್‌ ಸ್ಟೋಕ್ಸ್‌ ಮೇಲೆ ಒತ್ತಡ? ಸ್ಪಷ್ಟನೆ ನೀಡಿದ ಮಾಜಿ ನಾಯಕ!

ಈ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್‌ಗೆ ಭಾರತ ತಂಡದಲ್ಲಿ ದೀರ್ಘಾವಧಿ ಅವಕಾಶಗಳನ್ನು ನೀಡಲಿದೆ. ದೀರ್ಘಾವಧಿ ನೀಡಿದ ಅವಕಾಶಗಳಲ್ಲಿ ಅವರು ಉತ್ತಮ ಪ್ರದರ್ಶನವನ್ನು ತೋರುವಲ್ಲಿ ವಿಫಲರಾದರೆ, ಆಗ ಅವರ ಸ್ಥಾನಕ್ಕೆ ಬೇರೆ ಆಟಗಾರನನ್ನು ಆಡಿಸಬಹುದು. ಐರ್ಲೆಂಡ್‌ ಟಿ20ಐ ಸರಣಿಯಲ್ಲಿ ಬೆಂಚ್‌ ಕಾದಿದ್ದ ವೈಭವ್‌ ಸೂರ್ಯವಂಶಿಗೆ ಭಾರತ ತಂಡದಲ್ಲಿ ಅವಕಾಶ ನೀಡಬಹುದು.

ಭಾರತದ ಇಂಗ್ಲೆಂಡ್‌ ಪ್ರವಾಸ

ಭಾರತ ತಂಡ ಜುಲೈ 1ರಿಂದ 19ರವರೆಗೆ ಇಂಗ್ಲೆಂಡ್ ಪ್ರವಾಸ ಕೈಗೊಂಡು 5 ಟಿ20ಐ ಮತ್ತು 3 ಏಕದಿನ (ODI) ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಪ್ರವಾಸವು ಮೊದಲಿಗೆ ಟಿ20 ಸರಣಿಯೊಂದಿಗೆ ಆರಂಭವಾಗಲಿದ್ದು, ಬಳಿಕ ಏಕದಿನ ಪಂದ್ಯಗಳು ನಡೆಯಲಿವೆ. ಟಿ20ಐ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಅವರು ಭಾರತ ತಂಡದ ನಾಯಕತ್ವವನ್ನು ಮುಂದುವರಿಸಲಿದ್ದಾರೆ.