ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (IPL 2026) ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ವಿಶ್ವದ ಗಮನ ಸೆಳೆದಿದ್ದ 15ರ ಪ್ರಾಯದ ವೈಭವ್ ಸೂರ್ಯವಂಶಿಗೆ (Vaibhav Sooryavanshi) ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಆಡಲು ಅವಕಾಶ ನೀಡಬೇಕೆಂದು ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ ವಿಲಿಯರ್ಸ್ (AB De Viliers) ಆಗ್ರಹಿಸಿದ್ದಾರೆ. ಅಲ್ಲದೆ ಐರ್ಲೆಂಡ್ ಎದುರು ಎರಡು ಪಂದ್ಯಗಳ ಟಿ20ಐ ಸರಣಿಯಲ್ಲಿ ಎಡಗೈ ಬ್ಯಾಟ್ಸ್‌ಮನ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅವಕಾಶ ನೀಡದ ಬಗ್ಗೆ ಆರ್‌ಸಿಬಿ ಮಾಜಿ ಬ್ಯಾಟ್ಸ್‌ಮನ್ ಬೇಸರ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ವೈಭವ್ ಸೂರ್ಯವಂಶಿ ಅವರು ತಮ್ಮ ಅಪಾಯಕಾರಿ ಬ್ಯಾಟಿಂಗ್ ಮೂಲಕ 776 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಅವರು ಆರೆಂಜ್ ಕ್ಯಾಪ್ ಗೆದ್ದಿದ್ದರು. ಇದರ ಫಲವಾಗಿ ಭಾರತ ತಂಡದಲ್ಲಿ ಚೊಚ್ಚಲ ಅವಕಾಶವನ್ನು ಪಡೆದಿದ್ದಾರೆ. ಅವರು ಭಾರತ ತಂಡ ಯುಕೆ ಪ್ರವಾಸದಲ್ಲಿ ಇಲ್ಲಿಯವರೆಗೂ ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿಯೂ ಆಡಲು ಅವಕಾಶ ಸಿಕ್ಕಿಲ್ಲ. ಆದರೆ, ಓಪನರ್ ಸಂಜು ಸ್ಯಾಮ್ಸನ್ ಸತತ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ಅವರ ಸ್ಥಾನದಲ್ಲಿ ವೈಭವ್‌ಗೆ ಆಡಲು ಅವಕಾಶ ನೀಡಬಹುದು.
ʻಭಾರತ ತಂಡವನ್ನು ತೊರೆದು ಶಾಲೆಗೆ ಹೋಗಿʼ: ವೈಭವ್ ಸೂರ್ಯವಂಶಿಗೆ ಡ್ಯಾರಿಲ್ ಕುಲ್ಲಿನನ್ ಸಲಹೆ!
ವೈಭವ್‌ಗೆ ಸ್ಥಾನ ನೀಡದ ಬಗ್ಗೆ ಬ್ಯಾಟಿಂಗ್ ಕೋಚ್ ರಯಾನ್ ಡಿಶ್ಕಾಡೆ ಅವರು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದರು. ಟಿ20 ವಿಶ್ವಕಪ್ ಗೆದ್ದಿದ್ದ ಆಟಗಾರರನ್ನು ತಂಡದಲ್ಲಿ ಬೆಂಬಲಿಸಬೇಕು ಹಾಗೂ ಅವರಿಗೆ ಹೆಚ್ಚಿನ ಅವಕಾಶಗಳನ್ನು ಪಡೆಯಲು ಅವರು ಅರ್ಹರು ಎಂದು ಹೇಳಿದ್ದರು. ಹಾಗಾಗಿ ವೈಭವ್ ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ ಎಂದಿದ್ದರು. ಆದರೆ, ಇವರ ಮಾತನ್ನು ಎಬಿ ಡಿವಿಲಿಯರ್ಸ್ ತಿರಸ್ಕರಿಸಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಪ್ರಕ್ರಿಯೆಗಳಿಗೆ ವೇಗವನ್ನು ನೀಡಬೇಕೆಂದು ಹೇಳಿದ್ದಾರೆ.
ವೈಭವ್‌ಗೆ ಯಾವಾಗ ಅವಕಾಶ ನೀಡುತ್ತೀರಿ?
“ಅವರಿಗೆ (ವೈಭವ್ ಸೂರ್ಯವಂಶಿ) ಅವಕಾಶ ಯಾವಾಗ ಸಿಗುತ್ತೆ? ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅನುಭವ ಪಡೆಯಲು ಐರ್ಲೆಂಡ್ ವಿರುದ್ಧದ ಸರಣಿಯೇ ಸೂಕ್ತ ವೇದಿಕೆ ಎಂದು ನಾನು ಭಾವಿಸಿದ್ದೆ. ಆದರೆ ಅವರಿಗೆ ಒಂದೇ ಒಂದು ಅವಕಾಶವೂ ಸಿಗದಿರುವುದು ದುರದೃಷ್ಟಕರ ಸಂಗತಿ,” ಎಂದು ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಎಬಿ ಡಿ ವಿಲಿಯರ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.
IND vs ENG: ವೈಭವ್ ಸೂರ್ಯವಂಶಿ ಪದಾರ್ಪಣೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಶ್ರೇಯಸ್ ಅಯ್ಯರ್!
“ವೈಭವ್ ಸೂರ್ಯವಂಶಿ ಕೂಡ ಇತರ ಆಟಗಾರರಂತೆ ಎಲ್ಲಾ ಹಂತಗಳನ್ನು ದಾಟಿಯೇ ಬರಬೇಕು ಎಂಬ ರಿಯಾನ್ ಟೆನ್ ಡಶ್ಕಾಟೆ ಅವರ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ. ಐಪಿಎಲ್ ಟೂರ್ನಿಯಲ್ಲಿ ಅವರು ತೋರಿದ ಪ್ರದರ್ಶನದ ನಂತರ, ವಿಶೇಷವಾಗಿ ಐರ್ಲೆಂಡ್‌ನಂತಹ ದುರ್ಬಲ ತಂಡದ ವಿರುದ್ಧ ಅವರನ್ನು ನೇರವಾಗಿ ಕಣಕ್ಕಿಳಿಸಿ ಪರೀಕ್ಷಿಸಬೇಕಾಗಿತ್ತು," ಎಂದು ಅವರು ತಿಳಿಸಿದ್ದಾರೆ.
ಭಾರತ ತಂಡಕ್ಕೆ ಹೆಚ್ಚಿನ ಸುಧಾರಣೆ ಅಗತ್ಯ
ಐರ್ಲೆಂಡ್ ವಿರುದ್ಧದ ಸರಣಿ ಸೋಲಿನ ಬಳಿಕ ಭಾರತ ತಂಡ ಇನ್ನೂ ಸಾಕಷ್ಟು ಸುಧಾರಣೆ ಮಾಡಬೇಕಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. ಇಂಗ್ಲೆಂಡ್ ಪರಿಸ್ಥಿತಿಗಳಿಗೆ ತಕ್ಕಂತೆ ಭಾರತ ತನ್ನ ಆಟದ ತಂತ್ರವನ್ನು ಮರುರೂಪಿಸಿಕೊಳ್ಳಬೇಕಾಗಿದೆ ಎಂದು ಅವರು ಸಲಹೆ ನೀಡಿದ್ದಾರೆ.
"ಭಾರತ ತಂಡಕ್ಕೆ ಇನ್ನೂ ಸಾಕಷ್ಟು ಕೆಲಸ ಬಾಕಿಯಿದೆ. ತಂಡ ಮತ್ತೆ ಒಗ್ಗೂಡಿ, ಹೊಸ ಯೋಜನೆ ರೂಪಿಸಿಕೊಂಡು, ಇಂಗ್ಲೆಂಡ್ ಪರಿಸ್ಥಿತಿಗಳಲ್ಲಿ ಹೇಗೆ ಆಡಬೇಕು ಎಂಬುದಕ್ಕೆ ಸೂಕ್ತ ಮಾರ್ಗ ಕಂಡುಕೊಳ್ಳಬೇಕು. ಅಲ್ಲಿನ ಪರಿಸ್ಥಿತಿಯಲ್ಲಿ ಐಪಿಎಲ್‌ನಂತೆ ಪ್ರತಿಯೊಂದು ಪಂದ್ಯದಲ್ಲೂ 250-260 ರನ್‌ಗಳನ್ನು ಕಲೆ ಹಾಕಲು ಸಾಧ್ಯವಿಲ್ಲ. ಅಲ್ಲಿ ಆಟ ಹೆಚ್ಚು ತಂತ್ರಗಾರಿಕೆ ಮತ್ತು ಯೋಜನೆ ಆಧಾರಿತವಾಗಿರುತ್ತದೆ. ಕೆಲವೊಮ್ಮೆ 140 ಅಥವಾ 160 ರನ್‌ಗಳೇ ಪಂದ್ಯ ಗೆಲ್ಲಲು ಸಾಕಾಗಬಹುದು," ಎಂದು ಡಿ ವಿಲಿಯರ್ಸ್ ಹೇಳಿದ್ದಾರೆ.