ನವದೆಹಲಿ: ಭಾರತ ಟಿ20 ತಂಡದ ನಾಯಕನಾಗಿ ನೇಮಕಗೊಂಡಿರುವುದು ತಮಗೆ ಯಾವುದೇ ಅಚ್ಚರಿಯ ವಿಷಯವಾಗಿರಲಿಲ್ಲ ಎಂದು ಶ್ರೇಯಸ್ ಅಯ್ಯರ್ (Shreyas Iyer) ತಿಳಿಸಿದ್ದಾರೆ. 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಗೆದ್ದ ನಂತರ ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ತಂಡದಿಂದ ಕೈ ಬಿಡಲಾಗಿದ್ದು, ಅವರ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ತರಲಾಗಿದೆ. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತ ತಂಡ, ಐರ್ಲೆಂಡ್ ಎದುರು ಟಿ20ಐ ಸರಣಿಯನ್ನು ಕಳೆದುಕೊಂಡಿದ್ದರೂ, ಇದೀಗ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದೆ.
ಇಂಡಿಯಾ ಟುಡೆಗೆ ಮೂಲಗಳ ಪ್ರಕಾರ ಸೂರ್ಯಕುಮಾರ್ ಯಾದವ್ ಅವರ ಉತ್ತರಾಧಿಕಾರಿಗೆ ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ ಕೂಡ ಸ್ಪರ್ಧೆಯಲ್ಲಿದ್ದರು. ಆದರೆ ಅಂತಿಮವಾಗಿ ಇಂಗ್ಲೆಂಡ್ ಪ್ರವಾಸಕ್ಕಾಗಿ ಶ್ರೇಯಸ್ ಅಯ್ಯರ್ ಅವರಿಗೆ ನಾಯಕತ್ವ ನೀಡಲಾಯಿತು. ಈ ಪ್ರವಾಸದಲ್ಲಿ ಐರ್ಲೆಂಡ್ ವಿರುದ್ಧ ಎರಡು ಹಾಗೂ ಇಂಗ್ಲೆಂಡ್ ವಿರುದ್ಧ ಐದು ಟಿ20 ಪಂದ್ಯಗಳು ನಡೆಯಲಿವೆ. ಇದೇ ವರ್ಷ ನಡೆಯಲಿರುವ ಏಷ್ಯನ್ ಗೇಮ್ಸ್‌ಗೂ ಭಾರತ ಪುರುಷರ ಕ್ರಿಕೆಟ್ ತಂಡದ ನಾಯಕನಾಗಿ ಅಯ್ಯರ್ ಅವರನ್ನು ಆಯ್ಕೆ ಮಾಡಲಾಗಿದೆ.
ಐಪಿಎಲ್‌ನಲ್ಲಿ ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿದ್ದರೂ, ಮೂರು ವರ್ಷಗಳ ಕಾಲ ಟಿ20 ತಂಡದಿಂದ ಹೊರಗುಳಿದಿದ್ದ ಅಯ್ಯರ್ ಅವರಿಗೆ ಸೂರ್ಯಕುಮಾರ್ ಅವರ ಸ್ಥಾನ ಸಿಗಲಿದೆ ಎಂದು ಹೆಚ್ಚಿನವರು ನಿರೀಕ್ಷಿಸಿರಲಿಲ್ಲ. ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ತಂಡಕ್ಕೆ ಮರಳಿದ್ದರೂ, ಅಂತಿಮ ಟೂರ್ನಿಯ ತಂಡದಲ್ಲಿ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ.
IND vs ENG: ವೈಭವ್ ಸೂರ್ಯವಂಶಿ ಪದಾರ್ಪಣೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಶ್ರೇಯಸ್ ಅಯ್ಯರ್!
"ನಿಜ ಹೇಳಬೇಕೆಂದರೆ, ಇದು ನನಗೆ ಅಚ್ಚರಿಯ ಸಂಗತಿಯಾಗಿರಲಿಲ್ಲ. ಒಂದಲ್ಲ ಒಂದು ದಿನ ಈ ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆ ನನಗಿತ್ತು. ಹಿಂದಿನ ಐಪಿಎಲ್ ಟೂರ್ನಿಗಳಲ್ಲಿ ಹಾಗೂ ಭಾರತ ತಂಡವನ್ನು ಪ್ರತಿನಿಧಿಸಿದಾಗ ಉತ್ತಮ ಪ್ರದರ್ಶನ ನೀಡಿದ್ದೆ. ಆದ್ದರಿಂದ ಈ ನಿರ್ಧಾರ ನನಗೆ ಅಚ್ಚರಿ ಉಂಟು ಮಾಡಲಿಲ್ಲ. ಅದೇ ವೇಳೆ, ಟಿ20 ವಿಶ್ವಕಪ್ ಗೆದ್ದ ತಂಡದ ಆಟಗಾರರು, ತಂಡದ ನಿರ್ವಹಣೆ, ಸಹಾಯಕ ಸಿಬ್ಬಂದಿ ಹಾಗೂ ಅನುಭವಿ ಆಟಗಾರರಿಂದ ಕಲಿಯಲು ಇದು ನನಗೆ ದೊರೆತ ಅತ್ಯುತ್ತಮ ಅವಕಾಶ ಎಂದು ಭಾವಿಸುತ್ತೇನೆ," ಎಂದು ಅಯ್ಯರ್ ಬಿಸಿಸಿಐ ಟಿವಿಗೆ ತಿಳಿಸಿದ್ದಾರೆ.
2025ರ ಐಪಿಎಲ್‌ನಲ್ಲಿ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರೊಂದಿಗೆ ಕೈಜೋಡಿಸಿದ್ದ ಅಯ್ಯರ್, ಪಂಜಾಬ್ ಕಿಂಗ್ಸ್ ತಂಡವನ್ನು ಒಂದು ದಶಕಕ್ಕೂ ಹೆಚ್ಚು ಅವಧಿಯ ಬಳಿಕ ಮೊದಲ ಬಾರಿ ಫೈನಲ್‌ಗೆ ಮುನ್ನಡೆಸಿದ್ದರು. 2026ರ ಐಪಿಎಲ್‌ನಲ್ಲಿ ಪಂಜಾಬ್ ಉತ್ತಮ ಆರಂಭ ಪಡೆದರೂ, ನಂತರ ಲಯ ಕಳೆದುಕೊಂಡು ಪ್ಲೇಆಫ್ ಪ್ರವೇಶಿಸಲು ವಿಫಲವಾಯಿತು.
ವೈಯಕ್ತಿಕ ಪ್ರದರ್ಶನದಲ್ಲೂ ಅಯ್ಯರ್ ನಿರಂತರ ಯಶಸ್ಸು ಕಂಡಿದ್ದಾರೆ. ಕಳೆದ ಎರಡು ಐಪಿಎಲ್ ಋತುಗಳಲ್ಲಿ ಅವರು 145ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 992 ರನ್‌ಗಳನ್ನು ಗಳಿಸಿದ್ದಾರೆ. 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಮೂರನೇ ಐಪಿಎಲ್ ಪ್ರಶಸ್ತಿ ತಂದುಕೊಟ್ಟಿದ್ದ ಅವರು, ಎರಡು ವಿಭಿನ್ನ ಫ್ರಾಂಚೈಸಿಗಳನ್ನು ಐಪಿಎಲ್ ಫೈನಲ್‌ಗೆ ಮುನ್ನಡೆಸಿದ ಮೊದಲ ನಾಯಕ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.
IND vs ENG: ಇಂಗ್ಲೆಂಡ್‌ಗೆ ಭೀತಿ ಹುಟ್ಟಿಸಿರುವ ಆಟಗಾರನನ್ನು ಹೆಸರಿಸಿದ ಗ್ರೇಮ್ ಸ್ವಾನ್!
ಟಿ20 ತಂಡದಲ್ಲಿ ಹೆಚ್ಚಿನ ಅವಕಾಶಗಳು ಸಿಗದಿದ್ದರೂ, ಏಕದಿನ ತಂಡದಲ್ಲಿ ಅಯ್ಯರ್ ಪ್ರಮುಖ ಆಟಗಾರನಾಗಿ ಸ್ಥಾನ ಗಟ್ಟಿಗೊಳಿಸಿಕೊಂಡಿದ್ದು, ದೇಶಿ ಕ್ರಿಕೆಟ್‌ನಲ್ಲೂ ನಿರಂತರವಾಗಿ ರನ್‌ಗಳನ್ನು ಸಿಡಿಸುತ್ತಿದ್ದಾರೆ.
"ಬಾಲ್ಯದಿಂದಲೇ ಭಾರತ ತಂಡದ ಪರ ಆಡುವ ಕನಸು ಇರುತ್ತದೆ. ಈಗ ಅದೇ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿರುವುದು ನನ್ನ ಪಾಲಿಗೆ ಕೇಕ್ ಮೇಲಿನ ಐಸ್ ಇಟ್ಟಂತಿದೆ. ಇದು ನನ್ನ ಪಾಲಿಗೆ ಅಮೂಲ್ಯವಾದ ಗೌರವ," ಎಂದು ಅಯ್ಯರ್ ಹೇಳಿದರು.
"ನಾನು ಮಾಡಿದ ಕಠಿಣ ಪರಿಶ್ರಮ ಹಾಗೂ ಅಭಿಮಾನಿಗಳು, ಕುಟುಂಬ ಮತ್ತು ಸ್ನೇಹಿತರಿಂದ ದೊರೆತ ಬೆಂಬಲದ ಫಲವೇ ಈ ಸಾಧನೆ," ಎಂದು ಅವರು ತಿಳಿಸಿದ್ದಾರೆ.