ನವದೆಹಲಿ: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟಿ20ಐ ಪಂದ್ಯದಲ್ಲಿಯೂ (IND vs ENG) ಸೋಲು ಅನುಭವಿಸಿದ ಬಳಿಕ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ (Parthiv Patel), ಭಾರತ ತಂಡದ ಯೋಜನೆಯನ್ನು ಟೀಕಿಸಿದ್ದಾರೆ. ಭಾರತ ತಂಡವು ಕಳೆದ ಒಂದು ದಶಕದಿಂದಲೂ ಆಗಾಗ ಜಸ್‌ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಮೇಲೆಯೇ ಅವಲಂಬಿತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರತೀ ಬಾರಿ ಅವರೇ ತಂಡವನ್ನು ಸಂಕಷ್ಟದಿಂದ ಪಾರು ಮಾಡುತ್ತಾರೆ ಎಂಬ ನಿರೀಕ್ಷೆಯೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಬ್ರಿಸ್ಟಲ್‌ನ ಕೌಂಟಿ ಗ್ರೌಂಡ್‌ನಲ್ಲಿ ನಡೆದಿದ್ದ ನಾಲ್ಕನೇ ಟಿ20ಐ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ವೈಫಲ್ಯದಿಂದಾಗಿ 9 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಈ ಸೋಲಿನ ಮೂಲಕ ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಟೀಮ್ ಇಂಡಿಯಾ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಟಿ20ಐ ಸರಣಿಯನ್ನು 0-3 ಅಂತರದಲ್ಲಿ ಹೀನಾಯ ಸೋಲು ಅನುಭವಿಸಿತು. ಭಾರತ ನೀಡಿದ್ದ 159 ರನ್‌ಗಳ ಗುರಿಯನ್ನು ಇಂಗ್ಲೆಂಡ್ ಕೇವಲ 13.5 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ ತಲುಪಿತು. ಈ ಪಂದ್ಯದ ಬಳಿಕ ಭಾರತ ತಂಡದ ಯೋಜನೆ ಸೇರಿದಂತೆ ಒಟ್ಟಾರೆ ವೈಫಲ್ಯಕ್ಕೆ ಪಾರ್ಥಿವ್ ಪಟೇಲ್ ಕಾರಣ ತಿಳಿಸಿದ್ದಾರೆ.
ಶ್ರೇಯಸ್ ಏಕಾಂಗಿ ಹೋರಾಟ ವ್ಯರ್ಥ, ಇಂಗ್ಲೆಂಡ್ ಎದುರು ಟಿ20ಐ ಸರಣಿ ಕಳೆದುಕೊಂಡ ಭಾರತ!
"ಬ್ಯಾಟ್ಸ್‌ಮನ್‌ಗಳು ಔಟ್ ಆದ ಹಾದಿಯನ್ನು ನೋಡಿದಾಗ, ಇದು ಯಾರೊಬ್ಬರ ಬ್ಯಾಟಿಂಗ್ ಕೌಶಲದ ಸಮಸ್ಯೆ ಇದಲ್ಲ . ಆದರೆ, ಚೆಂಡು ನಿಮ್ಮ ಪುಲ್ ಶಾಟ್‌ಗೆ ಇಲ್ಲವಾದಲ್ಲಿ ನೀವು ಅದನ್ನು ಹೊಡೆಯಬಾರದು. ಇಲ್ಲಿ ಪ್ರಶ್ನೆ ಏನೆಂದರೆ ಶಾಟ್ ಸೆಲೆಕ್ಷನ್. ಇದು ಎಲ್ಲವೂ ಯೋಜನೆಯಿಂದ ಕೂಡಿರುತ್ತದೆ. ಹೌದು, ಇಂಗ್ಲೆಂಡ್ ತಂಡ ನಮಗಿಂತ ಉತ್ತಮವಾಗಿ ಆಡಿದೆ ಹಾಗೂ ಭಾರತ ತಂಡ ಯೋಜನೆಯಂತೆ ಆಡಿಲ್ಲ," ಎಂದು ಜಿಯೊ ಹಾಟ್‌ಸ್ಟಾರ್ ಜೊತೆ ಪಾರ್ಥಿವ್ ಪಟೇಲ್ ಹೇಳಿದ್ದಾರೆ.
ಐಪಿಎಲ್‌ನಲ್ಲಿ ಆಡಿದ ಹಾಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಸಾಧ್ಯವಿಲ್ಲ
"ಚೆಂಡು ಆಫ್‌ಸ್ಟಂಪ್‌ನ ಹೊರಗಡೆ ಸಾಗುತ್ತಿದ್ದಾಗ ಅದನ್ನು ಲೆಗ್ ಸೈಡ್‌ಗೆ ಅಟ್ಟಲು ಪ್ರಯತ್ನಿಸಿದರೆ ಯಶಸ್ಸು ಸಿಗುವುದಿಲ್ಲ. ಐಪಿಎಲ್‌ನಲ್ಲಿ ಇದೇ ರೀತಿಯ ಎಸೆತಗಳು ಮೈದಾನದಾಚೆ ಸಿಕ್ಸರ್‌ಗಳಾಗುತ್ತಿರಬಹುದು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಈ ಬಗ್ಗೆ ಹಲವು ಪ್ರಶ್ನೆಗಳು ಎದುರಾಗುತ್ತಿವೆ. ಕಳೆದ ಹತ್ತು ವರ್ಷಗಳಿಂದಲೂ ನಾವು ಒಂದೇ ಮಾತು ಹೇಳುತ್ತಾ ಬಂದಿದ್ದೇವೆ. ಜಸ್‌ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ತಂಡಕ್ಕೆ ಬಂದರೆ ಎಲ್ಲವೂ ಸರಿಯಾಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ," ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ತಂಡ ಪರಿವರ್ತನೆಯ ಹಂತದಲ್ಲಿದೆ; ಸರಣಿ ಸೋಲಿನ ಬೆನ್ನಲ್ಲೇ ಅಯ್ಯರ್ ಹೇಳಿಕೆ
2028ರ ಟಿ20 ವಿಶ್ವಕಪ್‌ಗೆ ಸೂಕ್ತ ಯೋಜನೆ ಮಾಡಿ: ಪಾರ್ಥಿವ್
"ಪಂದ್ಯ ಮುಗಿದ ತಕ್ಷಣವೇ ಆಳವಾದ ವಿಶ್ಲೇಷಣೆಗೆ ಇಳಿಯಬಾರದು. ಒಂದು ದಿನ ಸಮಯ ತೆಗೆದುಕೊಳ್ಳುವುದು ಉತ್ತಮ. ಕಳೆದ ಎರಡು ಪಂದ್ಯಗಳಲ್ಲಿ ಸಾಕಷ್ಟು ತಪ್ಪುಗಳು ನಡೆದಿವೆ. ಆದ್ದರಿಂದ ಪಂದ್ಯ ಮುಗಿದ ದಿನವೇ (ಗುರುವಾರ) ಅತಿಯಾಗಿ ಯೋಚಿಸುವ ಅಗತ್ಯವಿಲ್ಲ. ನಂತರ ತಂಡದ ಅಲ್ಪಾವಧಿ ಹಾಗೂ ದೀರ್ಘಾವಧಿಯ ಯೋಜನೆಗಳ ಬಗ್ಗೆ ಚಿಂತನೆ ನಡೆಸಬೇಕು," ಎಂದು ಪಾರ್ಥಿವ್ ಪಟೇಲ್ ಸಲಹೆ ನೀಡಿದ್ದಾರೆ.
"ಈ ಸರಣಿ ಈಗಾಗಲೇ ಕೈತಪ್ಪಿದೆ. ಈಗ ಒಂದು ಪಂದ್ಯ ಗೆದ್ದರೂ ದೊಡ್ಡ ಬದಲಾವಣೆ ಆಗುವುದಿಲ್ಲ. ನಿಮ್ಮ ಗುರಿ 2028ರ ಟಿ20 ವಿಶ್ವಕಪ್ ಆಗಿದ್ದರೆ, ಈ ತಂಡದಲ್ಲಿರುವ ಎಷ್ಟು ಆಟಗಾರರು ಅಷ್ಟರವರೆಗೆ ತಂಡದಲ್ಲಿ ಮುಂದುವರಿಯುವ ಸಾಧ್ಯತೆ ಇದೆ ಎಂಬುದನ್ನು ಮೊದಲು ನಿರ್ಧರಿಸಬೇಕು. ಅವರು ಆ ಯೋಜನೆಗೆ ಹೊಂದಿಕೆಯಾಗದಿದ್ದರೆ, ಸ್ಪಷ್ಟ ನಿರ್ಧಾರ ತೆಗೆದುಕೊಂಡು ಅದಕ್ಕೆ ಬದ್ಧರಾಗಿರಬೇಕು," ಎಂದು ಅವರು ಅಭಿಪ್ರಾಯಪಟ್ಟರು.