ಮುಂಬೈ: ಇಂಗ್ಲೆಂಡ್ ವಿರುದ್ಧ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ(IND vs ENG) ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ (Sanju Samson) ಅರ್ಧಶತಕವನ್ನು ಬಾರಿಸಿದರು. ಆ ಮೂಲಕ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 253 ರನ್‌ಗಳನ್ನು ಕಲೆ ಹಾಕಲು ನೆರವು ನೀಡಿದ್ದಾರೆ. ಇದರೊಂದಿಗೆ ಆರಂಭಿಕ ಬ್ಯಾಟ್ಸ್‌ಮನ್ ಈ ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕವನ್ನು ಪೂರ್ಣಗೊಳಿಸುವ ಮೂಲಕ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಈ ದಾಖಲೆಯ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
ಗುರುವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡದ ಪರ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಆಡಿದ 42 ಎಸೆತಗಳಲ್ಲಿ 8 ಫೋರ್ಸ್ ಮತ್ತು 7 ಸಿಕ್ಸರ್‌ಗಳ ಮೂಲಕ 89 ರನ್‌ಗಳನ್ನು ಬಾರಿಸಿದರು. ಟಿ20 ವಿಶ್ವಕಪ್ ಟೂರ್ನಿಯ ನಾಕ್‌ಔಟ್ ಪಂದ್ಯದಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ಜತೆ ಹಂಚಿಕೊಂಡಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ 2016ರ ಐಸಿಸಿ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 89 ರನ್ ಗಳಿಸಿದ್ದರು. ಇದೀಗ ಸಂಜು ಕೂಡ ಇಷ್ಟೇ ರನ್‌ಗಳನ್ನು ಗಳಿಸಿ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿದೂಗಿಸಿದ್ದಾರೆ.
IND vs ENG: ಹ್ಯಾರಿ ಬ್ರೂಕ್ ನೀಡಿದ ಜೀವದಾನ ಸದುಪಯೋಗಪಡಿಸಿಕೊಂಡು 89 ರನ್ ಚಚ್ಚಿದ ಸಂಜು ಸ್ಯಾಮ್ಸನ್!
ಒಟ್ಟಾರೆ, ಟಿ20 ವಿಶ್ವಕಪ್ ನಾಕ್ಔಟ್ ಪಂದ್ಯದಲ್ಲಿ ಇದು ಮೂರನೇ ವೈಯಕ್ತಿಕ ಗರಿಷ್ಠ ಮೊತ್ತ ಇದಾಗಿದೆ. ಈ ದಾಖಲೆ ಫಿನ್ ಆಲೆನ್ ಅವರ ಹೆಸರಿನಲ್ಲಿದೆ. ಅವರು ಕೇವಲ ಒಂದು ದಿನದ ಹಿಂದೆ ಟಿ20 ವಿಶ್ವಕಪ್ ಮೊದಲ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಪರ ದಕ್ಷಿಣ ಆಫ್ರಿಕಾ ವಿರುದ್ಧ 33 ಬಾಲ್‌ಗಳಲ್ಲಿ 100 ರನ್ ಬಾರಿಸಿದ್ದರು.
ಟಿ20 ವಿಶ್ವಕಪ್ ಟೂರ್ನಿಯ ನಾಕ್‌ಔಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಸ್
ಫಿನ್ ಆಲೆನ್ (ನ್ಯೂಜಿಲೆಂಡ್)- 100* vs ದಕ್ಷಿಣ ಆಫ್ರಿಕಾ, 2026 ಸೆಮಿಫೈನಲ್
ತಿಲಕರತ್ನೆ ದಿಲ್ಷಾನ್ (ಶ್ರೀಲಂಕಾ) - 96 vs ವೆಸ್ಟ್ ಇಂಡೀಸ್, 2009 ಸೆಮಿಫೈನಲ್
ವಿರಾಟ್ ಕೊಹ್ಲಿ (ಭಾರತ)- 89* vs ವೆಸ್ಟ್ ಇಂಡೀಸ್, 2016 ಸೆಮಿಫೈನಲ್
ಸಂಜು ಸ್ಯಾಮ್ಸನ್ (ಭಾರತ)- 89 vs ವೆಸ್ಟ್ ಇಂಡೀಸ್, 2026 ಸೆಮಿಫೈನಲ್
ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್)- 86* vs ಭಾರತ, 2022 ಸೆಮಿಫೈನಲ್
253 ರನ್ ಗಳಿಸಿದ ಟೀಮ್ ಇಂಡಿಯಾ
ಸೆಮಿ-ಫೈನಲ್‌ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ಭಾರತವನ್ನು ಆಹ್ವಾನಿಸಿತು. ಸನ್ ಸ್ಯಾಮ್ಸನ್ ಅವರ 89 ರನ್‌ಗಳೊಂದಿಗೆ ತಂಡವನ್ನು ಮುನ್ನಡೆಸಿದರು. ಆ ಮೂಲಕ ಭಾರತ ತಂಡ 20 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 253 ರನ್ ಗಳಿಸಿತು. ಎಲ್ಲಾ ಭಾರತೀಯ ಬ್ಯಾಟ್ಸ್‌ಮನ್‌ಗಳು ರನ್‌ಗಳ ಕೊಡುಗೆ ನೀಡಿದರು. ಶಿವಂ ದುಬೆ 43, ಇಶಾನ್ ಕಿಶಾನ್ 39 ರನ್ ಗಳಿಸಿದರು, ಮತ್ತು ಹಾರ್ದಿಕ್ ಪಾಂಡ್ಯ ಹಾಗೂ ತಿಲಕ್ ವರ್ಮಾ ಪ್ರಮುಖ ಇನಿಂಗ್ಸ್ ಆಡಿದರು. ಇದು ಟಿ20 ವಿಶ್ವಕಪ್ ನಾಕ್ಔಟ್ ಪಂದ್ಯದ ಇತಿಹಾಸದಲ್ಲಿ ಅತ್ಯಧಿಕ ರನ್ ಗಳಿಸಿದ ತಂಡ ಎಂಬ ದಾಖಲೆಯನ್ನು ಭಾರತ ಬರೆಯಿತು.