ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಸಿಂಹಗಳಂತೆ ಆಡೋಣʼ: ಮೊದಲನೇ ಟಿ20ಐಗೂ ಮುನ್ನ ಆಟಗಾರರಿಗೆ ಶ್ರೇಯಸ್‌ ಅಯ್ಯರ್‌ ಸಲಹೆ!

IND vs IRE: ಐರ್ಲೆಂಡ್‌ ವಿರುದ್ಧದ ಟಿ20ಐ ಸರಣಿಗೂ ಮುನ್ನ ಶ್ರೇಯಸ್‌ ಅಯ್ಯರ್‌ ಅವರು ಭಾರತ ತಂಡಕ್ಕೆ ನೂತನ ನಾಯಕನಾಗಿ ಜವಾಬ್ದಾರಿ ತೆಗೆದುಕೊಂಡರು. ಮೊದಲನೇ ಟಿ20ಐ ಪಂದ್ಯ ಜೂನ್‌ 26 ರಂದು ನಡೆಯಲಿದೆ. ಈ ಪಂದ್ಯದ ನಿಮಿತ್ತ ಶ್ರೇಯಸ್‌ ಅಯ್ಯರ್‌ ತಮ್ಮ ಸಹ ಆಟಗಾರರಿಗೆ ಮಹತ್ವದ ಸಂದೇಶವನ್ನು ರವಾನಿಸಿದ್ದಾರೆ.

ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಸಹ ಆಟಗಾರರಿಗೆ ಶ್ರೇಯಸ್‌ ಅಯ್ಯರ್‌ ಸಂದೇಶ.

ನವದೆಹಲಿ: ಭಾರತ ಹಾಗೂ ಐರ್ಲೆಂಡ್‌ (IND vs IRE) ನಡುವಣ ಎರಡು ಪಂದ್ಯಗಳ ಟಿ20ಐ ಸರಣಿಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮೊದಲನೇ ಟಿ20ಐ ಪಂದ್ಯ ಜೂನ್‌ 26 ರಂದು ಬೆಲ್‌ಫಾಸ್ಟ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಭಾರತ ಟಿ20 ತಂಡದ ಜವಾಬ್ದಾರಿಯನ್ನು ಶ್ರೇಯಸ್‌ ಅಯ್ಯರ್‌ (Shreyas Iyer) ವಹಿಸಿಕೊಂಡರು ಹಾಗೂ ತಂಡದ ಸಹ ಆಟಗಾರರಿಗೆ ವಿಶೇಷ ಸಂದೇಶವನ್ನು ನೀಡಿದ್ದಾರೆ. ಎಲ್ಲರೂ ತಂಡದಲ್ಲಿ ಸಿಂಹಗಳಂತೆ ಆಡಬೇಕು ಹಾಗೂ ತಂಡದಲ್ಲಿ೮ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಬೇಕೆಂದು ಆಗ್ರಹಿಸಿದ್ದಾರೆ.

ಭಾರತದ ಟಿ20 ತಂಡವನ್ನು ಮೊದಲ ಬಾರಿ ನಾಯಕನಾಗಿ ಮುನ್ನಡೆಸುವುದಕ್ಕೂ ಮುನ್ನ ಶ್ರೇಯಸ್ ಅಯ್ಯರ್ ಅವರು ಬೆಲ್‌ಫಾಸ್ಟ್‌ನಲ್ಲಿ ನಡೆದ ಅಭ್ಯಾಸ ಶಿಬಿರದ ವೇಳೆ ತಂಡದ ಸಭೆಯಲ್ಲಿ ಉತ್ಸಾಹಭರಿತ ಭಾಷಣ ಮಾಡಿದರು. ಟಿ20 ವಿಶ್ವಕಪ್ ವಿಜೇತ ನಾಯಕ ಸೂರ್ಯಕುಮಾರ್ ಯಾದವ್ ಅವರ ಸ್ಥಾನವನ್ನು ಅಲಂಕರಿಸಿರುವ ಅಯ್ಯರ್, ನಾಯಕತ್ವ ವಹಿಸಿಕೊಂಡ ಬಳಿಕ ಅಭ್ಯಾಸದ ಮೊದಲ ದಿನವೇ ತಮ್ಮ ನಾಯಕತ್ವದ ಶೈಲಿಯ ಝಲಕ್ ಅನ್ನು ತಂಡಕ್ಕೆ ತೋರಿಸಿದರು.

ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಅಯ್ಯರ್ ಅವರನ್ನು ಹೊಸ ನಾಯಕನಾಗಿ ಅಭಿನಂದಿಸಿದ ಬಳಿಕ, ಅಯ್ಯರ್ ತಂಡದ ಸಂಸ್ಕೃತಿ ಮತ್ತು ಒಗ್ಗಟ್ಟಿನ ಮಹತ್ವವನ್ನು ಒತ್ತಿ ಹೇಳಿದರು. ತಂಡದೊಳಗೆ ಸದಾ ಸಕಾರಾತ್ಮಕ ವಾತಾವರಣ ನಿರ್ಮಿಸಿ, ಎಲ್ಲ ಆಟಗಾರರು ಆತ್ಮವಿಶ್ವಾಸದಿಂದ ಆಡಲು ಅವಕಾಶ ಕಲ್ಪಿಸುವುದು ತಮ್ಮ ಪ್ರಮುಖ ಗುರಿಯಾಗಿದೆ ಎಂದು ಅವರು ತಿಳಿಸಿದರು.

ಟಿ20 ವಿಶ್ವಕಪ್‌ನಲ್ಲಿ ಭಾರತೀಯ ದಾಖಲೆ ನಿರ್ಮಿಸಿದ ಶ್ರೀ ಚರಣಿ

"ಮುಂದಿನ ದಿನಗಳಲ್ಲಿ ನಾವು ಬಲಿಷ್ಠ ತಂಡದ ಸಂಸ್ಕೃತಿಯನ್ನು ನಿರ್ಮಿಸಲು ಪ್ರಯತ್ನಿಸೋಣ. ಭಾರತ ತಂಡದ ನಾಯಕತ್ವ ವಹಿಸುವುದು ನನಗೆ ಮೊದಲ ಅವಕಾಶ. ಗೌತಿ ಭಾಯ್ (ಗಂಭೀರ್‌) ಹೇಳಿದಂತೆ, ಇದು ನನಗೆ ಅಪಾರ ಗೌರವ ಮತ್ತು ಹೆಮ್ಮೆಯ ವಿಷಯ. ದೇಶವನ್ನು ಮುನ್ನಡೆಸುವುದು ದೊಡ್ಡ ಜವಾಬ್ದಾರಿಯೂ ಹೌದು. ಮುಂದಿನ ದಿನಗಳಲ್ಲಿ ಯಾವುದೇ ಪರಿಸ್ಥಿತಿಯಲ್ಲೂ ನಾವು ಪರಸ್ಪರ ರಕ್ಷಿಸಿಕೊಳ್ಳುವ, ಬೆಂಬಲಿಸುವ ಮತ್ತು ಜೊತೆಯಾಗಿ ನಿಲ್ಲುವ ಸಂಸ್ಕೃತಿಯನ್ನು ಬೆಳೆಸಲು ಬಯಸುತ್ತೇನೆ. ಅದಕ್ಕಿಂತ ಮುಖ್ಯವಾಗಿ, ಮೈದಾನದಲ್ಲಿ ಇರುವಾಗ ಸಾಧ್ಯವಾದಷ್ಟು ಆಟವನ್ನು ಆನಂದಿಸಬೇಕು," ಎಂದು ಹೇಳಿದ್ದಾರೆ.

"ಇದು ನಮಗೆ ದೊರೆತಿರುವ ಅದ್ಭುತ ಅವಕಾಶ. ಈ ತಂಡ ಒಂದು ಕುಟುಂಬ. ಸಿಂಹಗಳಂತೆ ಹೋರಾಡೋಣ. ಪ್ರತಿಯೊಂದು ಪಂದ್ಯವನ್ನೂ ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಎದುರಿಸೋಣ ಮತ್ತು ನಮ್ಮ ಕಡೆಯಿಂದ ಅತ್ಯುತ್ತಮ ಪ್ರದರ್ಶನ ನೀಡೋಣ. ಪರಸ್ಪರ ಉತ್ತೇಜಿಸುವ, ಒಬ್ಬರ ಯಶಸ್ಸನ್ನು ಮತ್ತೊಬ್ಬರು ಸಂಭ್ರಮಿಸುವ ವಾತಾವರಣವನ್ನು ನಿರ್ಮಿಸೋಣ," ಎಂದು ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.

ಬೆಲ್‌ಫಾಸ್ಟ್‌ನಲ್ಲಿ ನಡೆಯಲಿರುವ ಸರಣಿಯ ಮೊದಲ ಟಿ20ಐ ಪಂದ್ಯಕ್ಕೂ ಮುನ್ನ ಭಾರತ ತಂಡ ಕಠಿಣ ಅಭ್ಯಾಸವನ್ನು ನಡೆಸಿತು. ಈ ವೇಳೆ ಕೇವಲ 15ರ ವಯಸ್ಸಿನ ಪ್ರತಿಭಾವಂತ ವೈಭವ್ ಸೂರ್ಯವಂಶಿ ಅವರತ್ತ ಎಲ್ಲರ ಗಮನ ನೆಟ್ಟಿತ್ತು. ಎರಡು ಪಂದ್ಯಗಳ ಸರಣಿಯೊಂದರಲ್ಲಿ ಅವರು ಭಾರತ ಪರ ಪದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ.

ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ ಅಭ್ಯಾಸದ ವಿಡಿಯೊ ಹಂಚಿಕೊಂಡ ಬಿಸಿಸಿಐ

ಅಭ್ಯಾಸದ ವೇಳೆ ವೈಭವ್ ಸುಮಾರು ಒಂದು ಗಂಟೆಗಳ ಕಾಲ ನೆಟ್ಸ್‌ನಲ್ಲಿ ಬ್ಯಾಟಿಂಗ್ ನಡೆಸಿದರು. ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಅವರ ಕಣ್ಗಾವಲಿನಲ್ಲಿ ಯುವ ಬ್ಯಾಟರ್ ತಮ್ಮ ಕೌಶಲವನ್ನು ಪ್ರದರ್ಶಿಸಿದರು.

ಐಪಿಎಲ್‌ನಲ್ಲಿ ಹಲವು ವರ್ಷಗಳಿಂದ ಪರಿಣಾಮಕಾರಿ ನಾಯಕನಾಗಿ ಗುರುತಿಸಿಕೊಂಡಿರುವ ಶ್ರೇಯಸ್ ಅಯ್ಯರ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳನ್ನು ಫೈನಲ್‌ಗೆ ಮುನ್ನಡೆಸಿದ್ದರು. ಬಳಿಕ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಟ್ಟು ತಮ್ಮ ನಾಯಕತ್ವ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಆದರೆ ಕಳೆದ ಎರಡು ವರ್ಷಗಳಿಂದ ತೀವ್ರ ಪೈಪೋಟಿಯ ಕಾರಣ ಭಾರತ ಟಿ20 ತಂಡದಲ್ಲಿ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಸತತ ಎರಡು ಯಶಸ್ವಿ ಐಪಿಎಲ್ ಋತುಗಳು ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಮಿಂಚಿನ ಪ್ರದರ್ಶನದ ಮೂಲಕ ಶ್ರೇಯಸ್ ಆಯ್ಕೆಗಾರರ ಗಮನ ಸೆಳೆದು ಮತ್ತೆ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದು, ಇದೀಗ ನಾಯಕತ್ವದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.