ಅಹಮದಾಬಾದ್: ಶಿವಂ ದುಬೆ (Shivam Dube) ಅರ್ಧಶತಕ ಹಾಗೂ ವರುಣ್ ಚಕ್ರವರ್ತಿ ಅವರ ಸ್ಪಿನ್ ಮೋಡಿಯ ನೆರವಿನಿಂದ ಭಾರತ ತಂಡ, ಎ ಗುಂಪಿನ ಕೊನೆಯ ಪಂದ್ಯದಲ್ಲಿಯೂ (IND vs NED) ನೆದರ್ಲೆಂಡ್ಸ್ ವಿರುದ್ಧ 17 ರನ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ನಾಲ್ಕೂ ಪಂದ್ಯಗಳನ್ನು ಜಯಿಸಿ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಸೂಪರ್-8ಕ್ಕೆ ವಿಶ್ವಾಸವನ್ನು ಹೆಚ್ಚಿಸಿಕೊಂಡಿತು. ಇನ್ನು ಈ ಪಂದ್ಯದಲ್ಲಿನ ಸೋಲಿನ ಮೂಲಕ ಎದುರಾಳಿ ನೆದರ್ಲೆಂಡ್ಸ್ ತಂಡ, ಚುಟುಕು ವಿಶ್ವಕಪ್ ಟೂರ್ನಿಯ ಅಭಿಯಾನವನ್ನು ಮುಗಿಸಿತು.
ಬುಧವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ನೀಡಿದ್ದ 194 ರನ್‌ಗಳ ಗುರಿಯನ್ನು ಹಿಂಬಾಲಿಸಿದ ನೆದರ್ಲೆಂಡ್ಸ್ ತಂಡ, ವರುಣ್ ಚಕ್ರವರ್ತಿ ಸ್ಪಿನ್ ಮೋಡಿಗೆ ನಲುಗಿತು. ಆ ಮೂಲಕ 20 ಓವರ್‌ಗಳನ್ನು ಮುಗಿಸಿದರೂ 7 ವಿಕೆಟ್ ಕಳೆದುಕೊಂಡು 176 ರನ್‌ಗಳಿಗೆ ಸೀಮಿತವಾಯಿತು. ಮೈಕಲ್ ಲೆವಿಟ್ (24), ಮ್ಯಾಕ್ಸ್ ಒಡೌಡ್ (20), ಬಾಸ್ ಡಿ ಲೀಡೆ (33), ಕಾಲಿನ್ ಅಕಿರ್ಮನ್ (23), ಝ್ಯಾಜ್ ಕಾಚೆಟ್ (26) ಹಾಗೂ ನೋಹ್ ಕ್ರೋಸ್ (25) ಅವರು ಉತ್ತಮ ಆರಂಭ ಪಡೆದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯುವಲ್ಲಿ ವಿಫಲರಾದರು. ಇವರೆಲ್ಲರ ಬ್ಯಾಟಿಂಗ್ ಸಹಾಯದಿಂದ ಡಚ್ಚರು ಕಠಿಣ ಹೋರಾಟ ನಡೆಸಿದರೂ ಅಂತಿಮವಾಗಿ ಕೇವಲ 17 ರನ್‌ನಿಂದ ಸೋಲಿ ಒಪ್ಪಿಕೊಂಡರು.
ಭಾರತ ಸೇರಿದಂತೆ 9 ತಂಡಗಳು 2028ರ ಟಿ20 ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆ!
ಭಾರತದ ಪರ ವರುಣ್ ಚಕ್ರವರ್ತಿ 3 ವಿಕೆಟ್ ಕಿತ್ತರೆ, ಶಿವಂ ದುಬೆ ಎರಡು ವಿಕೆಟ್ ಪಡೆದರು.
193 ರನ್ ಕಲೆ ಹಾಕಿದ್ದ ಭಾರತ
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡ ಭಾರತ ತಂಡ, ಶಿವಂ ದುಬೆ ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 193 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ನೆದರ್ಲೆಂಡ್ಸ್ ತಂಡಕ್ಕೆ 194 ರನ್‌ಗಳ ಗುರಿಯನ್ನು ನೀಡಿತ್ತು. ಭಾರತದ ಪರ ದುಬೆ 66 ರನ್ ಸಿಡಿಸಿದರೆ, ತಿಲಕ್ ವರ್ಮಾ 31 ರನ್ ಹಾಗೂ ಹಾರ್ದಿಕ್ ಪಾಂಡ್ಯ 30 ರನ್‌ಗಳನ್ನು ಬಾರಿಸಿದ್ದರು.
ಭಾರತದ ಪರ ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ ಮತ್ತೊಮ್ಮೆ ಡಕ್‌ಔಟ್ ಆದರು. ಈ ಟೂರ್ನಿಯಲ್ಲಿ ಸತತ ಮೂರನೇ ಬಾರಿ ಎಡಗೈ ಬ್ಯಾಟ್ಸ್‌ಮನ್ ಡಕ್‌ಔಟ್ ಆಗಿ ಆಘಾತ ನೀಡಿದರು. ಆದರೆ, 7 ಎಸೆತಗಳಲ್ಲಿ 18 ರನ್ ಸಿಡಿಸಿದ ಬಳಿಕ ಇಶಾನ್ ಕಿಶನ್ ಅವರನ್ನು ಆರ್ಯನ್ ದತ್ ಔಟ್ ಮಾಡಿದರು. ಆ ಮೂಲಕ ಇಬ್ಬರೂ ಆರಂಭಿಕರನ್ನು ಆರ್ಯನ್ ಪೆವಿಲಿಯನ್‌ಗೆ ಕಳುಹಿಸಿದರು. ಸೂರ್ಯಕುಮಾರ್ ಯಾದವ್ ಹಾಗೂ ತಿಲಕ್ ವರ್ಮಾ ಕ್ರಮವಾಗಿ 31 ರನ್ ಹಾಗೂ 34 ರನ್ ಬಾರಿಸಿದರು.
ಶಿವಂ ದುಬೆ ಸ್ಪೋಟಕ ಅರ್ಧಶತಕ
ಇನ್ನು ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಶಿವಂ ದುಬೆ 31 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 66 ರನ್‌ಗಳನ್ನು ಚಚ್ಚಿದರು. ಆ ಮೂಲಕ ಭಾರತದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೆ ಹಾರ್ದಿಕ್ ಪಾಂಡ್ಯ ಜೊತೆಗೆ 76 ರನ್‌ಗಳ ಜೊತೆಯಾಟವನ್ನು ಆಡಿದರು. ಹಾರ್ದಿಕ್ 21 ಎಸೆತಗಳಲ್ಲಿ 31 ರನ್ ಗಳಿಸಿದರು.