ನವದೆಹಲಿ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಅವರ ಅಬ್ಬರ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟಿ20ಐ ಸರಣಿಯಲ್ಲಿಯೂ (IND vs NZ) ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಪ್ರವಾಸಿ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದಾರೆ. ಜನವರಿ 25 ರಂದು ನಡೆದಿದ್ದ ಮೂರನೇ ಟಿ20ಐ ಪಂದ್ಯದಲ್ಲಿ ಅವರು ಸ್ಪೋಟಕ ದಾಖಲೆಯ ಅರ್ಧಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಭಾರತ ತಂಡ 8 ವಿಕೆಟ್ ಗೆಲುವಿಗೆ ನೆರವು ನೀಡಿದರು. ಅಂದ ಹಾಗೆ ಈ ಪಂದ್ಯದಲ್ಲಿ ಕಿವೀಸ್ (New Zealand) ಆಟಗಾರರು, ಎಡಗೈ ಆಟಗಾರನ ಬ್ಯಾಟ್ ಅನ್ನು ಪರಿಶೀಲಿಸಿದ ಘಟನೆ ನಡೆಯಿತು.
ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ನೀಡಿದ್ದ 154 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಆಡಿದ ಕೇವಲ 20 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 68 ರನ್‌ಗಳನ್ನು ಬಾರಿಸಿದರು. ಅಲ್ಲದೆ, 340ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಬಾರಿಸಿದ್ದು ಕಿವೀಸ್ ಬೌಲರ್‌ಗಳಿಗೆ ನಡುಕ ಹುಟ್ಟಿಸಿತ್ತು. ಬೌಲರ್‌ಗಳು ಯಾವುದೇ ಎಸೆತವನ್ನು ಹಾಕಿದರೂ ಅಭಿಷೇಕ್ ಶರ್ಮಾ ಲೀಲಾಜಾಲವಾಗಿ ಬೌಂಡರಿ ಅಥವಾ ಸಿಕ್ಸರ್‌ಗೆ ಚೆಂಡನ್ನು ಕಳುಹಿಸುತ್ತಿದ್ದರು.ಇದರಿಂದ ಪ್ರವಾಸಿ ಬೌಲರ್‌ಗಳು ಒತ್ತಡಕ್ಕೆ ಒಳಗಾಗಿದ್ದರು.
IND vs NZ: ಟಿ20ಐ ಸರಣಿಯ ಕೊನೆಯ ಎರಡು ಪಂದ್ಯಗಳಿಂದಲೂ ತಿಲಕ್ ವರ್ಮಾ ಔಟ್!
ಅಭಿಷೇಕ್ ಬ್ಯಾಟ್ ಮಾಡುತ್ತಿದ್ದ ವೇಳೆ ಕಿವೀಸ್ ಆಟಗಾರರು ಅನುಮಾನಗೊಂಡರು. ಅಭಿಷೇಕ್ ಶರ್ಮಾ ಬ್ಯಾಟ್‌ನಲ್ಲಿ ಸ್ಪ್ರಿಂಗ್ ಇರಬಹುದೆಂದು ಪ್ರವಾಸಿ ಆಟಗಾರರಾದ ಮಿಚೆಲ್ ಸ್ಯಾಂಟ್ನರ್ ಹಾಗೂ ಡೆವೋನ್ ಕಾನ್ವೇ ಪರಿಶೀಲಸಿದರು ಹಾಗೂ ಟೀಮ್ ಇಂಡಿಯಾ ಆರಂಭಿಕನನ್ನು ನೀಡಿ ನಕ್ಕರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದಹಾಗೆ 2003ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಭಾರತದ ಎದುರು ಆಸ್ಟ್ರೇಲಿಯಾ ನಾಯಕ ರಿಕಿ ಪಾಟಿಂಗ್ ಅಜೇಯ 140 ರನ್‌ಗಳನ್ನು ಬಾರಿಸಿದ್ದರು. ಈ ವೇಳೆಯೂ ಪಾಂಟಿಂಗ್ ಬ್ಯಾಟ್‌ನಲ್ಲಿ ಸ್ಪ್ರಿಂಗ್ ಇರಬಹುದೆಂದು ಊಹೆ ಮಾಡಲಾಗಿತ್ತು.
ಅಭಿಷೇಕ್ ಶರ್ಮಾ ಜೊತೆ ಮತ್ತೊಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್ ಮಾಡಿದ್ದ ನಾಯಕ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 57 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಭಾರತ ತಂಡ 154 ರನ್‌ಗಳ ಗುರಿಯನ್ನು ಕೇವಲ 10 ಓವರ್‌ಗಳಿಗೆ ಚೇಸ್ ಮಾಡಿ ಗೆದ್ದು ಬೀಗಿತು ಹಾಗೂ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಟೀಮ್ ಇಂಡಿಯಾ ಟಿ20ಐ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿತು.
ಎರಡನೇ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ
ಅಭಿಷೇಕ್ ಶರ್ಮಾ ಅವರು ಕೇವಲ 14 ಎಸೆತಗಳಲ್ಲಿ ಅರ್ಧಶತಕವನ್ನು ಬಾರಿಸಿದರು. ಆ ಮೂಲಕ ಟಿ20ಐ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ ಅರ್ಧಶತಕ ಸಿಡಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಈ ಸಾಧಕರ ಪಟ್ಟಿಯಲ್ಲಿ ಯುವರಾಜ್ ಸಿಂಗ್ ಅಗ್ರ ಸ್ಥಾನದಲ್ಲಿದ್ದಾರೆ. ಇವರು 2007ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ 12 ಎಸೆತಗಳಲ್ಲಿ ಮಾಜಿ ಆಲ್‌ರೌಂಡರ್ ಅರ್ಧಶತಕವನ್ನು ಸಿಡಿಸಿದ್ದರು. ಇದೇ ಇನಿಂಗ್ಸ್‌ನಲ್ಲಿ ಯುವರಾಜ್ ಸಿಂಗ್, ಸ್ಟುವರ್ಟ್ ಬ್ರಾಡ್ ಅವರ ಏಕೈಕ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ್ದರು.