ವೆಲ್ಲಿಂಗ್ಟನ್: ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ (IND vs NZ) ಮೊದಲ ದಿನ ನ್ಯೂಜಿಲೆಂಡ್ ಬ್ಯಾಟರ್ ಹೆನ್ರಿ ನಿಕೋಲ್ಸ್ (Henry Nicholls) ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ (Dinesh karthik), ನಿಕೋಲ್ಸ್ ಅವರ ಬ್ಯಾಟಿಂಗ್ನಲ್ಲಿ ಮಾಜಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರ ಆಟದ ಶೈಲಿಯನ್ನು ಕಂಡಿದ್ದಾರೆ. ನಿಕೋಲ್ಸ್ ಅವರ ಪ್ರದರ್ಶನವನ್ನು ನೋಡಿದರೆ ಕೇನ್ ವಿಲಿಯಮ್ಸನ್ ಕೂಡ ಹೆಮ್ಮೆಪಡುತ್ತಾರೆ ಎಂದು ಕಾರ್ತಿಕ್ ಹೇಳಿದ್ದಾರೆ.
ಕ್ರಿಕ್ಬಝ್ ಜೊತೆ ಮಾತನಾಡಿದ ದಿನೇಶ್ ಕಾರ್ತಿಕ್, ನಿಕೋಲ್ಸ್ ಅವರ ಬ್ಯಾಟಿಂಗ್ ಶೈಲಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಇಂದು ಹೆನ್ರಿ ನಿಕೋಲ್ಸ್ ಎಷ್ಟು ಉತ್ತಮವಾಗಿ ಆಡಿದರು ಎಂಬುದನ್ನು ನೋಡಿದರೆ ಕೇನ್ ವಿಲಿಯಮ್ಸನ್ ಕೂಡ ಹೆಮ್ಮೆಪಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಇಂದಿನ ಪಂದ್ಯದವರೆಗೂ ಭಾರತ ವಿರುದ್ಧ ಅವರ ಸರಾಸರಿ ಉತ್ತಮವಾಗಿರಲಿಲ್ಲ. ಆದರೆ ತಮಗೆ ಚೆನ್ನಾಗಿ ಪರಿಚಯವಿರುವ ಮೈದಾನದಲ್ಲಿ ಅವರು ಅತ್ಯುತ್ತಮವಾಗಿ ಆಡಿದರು. ವೆಲ್ಲಿಂಗ್ಟನ್ನಲ್ಲಿ ಅವರು ಶತಕ ದಾಖಲಿಸಿದ್ದಾರೆ,” ಎಂದು ಕಾರ್ತಿಕ್ ಶ್ಲಾಘಿಸಿದ್ದಾರೆ.
ಭಾರತ ವಿರುದ್ಧ 'ತ್ರಿ' ಶತಕ: ಗ್ಲೆನ್ ಫಿಲಿಪ್ಸ್ ವಿಶ್ವ ದಾಖಲೆ
“ಕೇನ್ ವಿಲಿಯಮ್ಸನ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಾಗ, ಅವರ ಸ್ಥಾನ ತುಂಬುವುದು ದೊಡ್ಡ ಸವಾಲು ಎಂದು ನಿಕೋಲ್ಸ್ ಹೇಳಿದ್ದನ್ನು ನನಗೆ ನೆನಪಿದೆ. ಆದರೆ ಇಲ್ಲಿಯವರೆಗೆ ಅವರು ಆ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಅವರ ಇಂದಿನ ಬ್ಯಾಟಿಂಗ್ ಶೈಲಿ ಸಂಪೂರ್ಣವಾಗಿ ಕೇನ್ ವಿಲಿಯಮ್ಸನ್ ಅವರನ್ನು ನೆನಪಿಸುವಂತಿತ್ತು. ಮೊದಲ ಅವಧಿಯಲ್ಲಿ ಅವರು ಎಚ್ಚರಿಕೆಯಿಂದ ಬ್ಯಾಟ್ ಮಾಡಿದರು. ಸಾಕಷ್ಟು ಎಸೆತಗಳನ್ನು ಬಿಟ್ಟರು, ಚೆಂಡಿನ ಹತ್ತಿರ ಹೋಗಿ ತಡವಾಗಿ ಆಡಿದರು. ಬ್ಯಾಕ್ಫುಟ್ ಪಂಚ್ಗಳು ಮತ್ತು ಥರ್ಡ್ ಮ್ಯಾನ್ ಕಡೆಗೆ ಚೆಂಡನ್ನು ಗೈಡ್ ಮಾಡಿದ ರೀತಿ ಎಲ್ಲವೂ ಕೇನ್ ವಿಲಿಯಮ್ಸನ್ ಅವರ ಆಟದಂತೆಯೇ ಇತ್ತು. ಒಂದೇ ವ್ಯತ್ಯಾಸವೆಂದರೆ ಎಡಗೈ ಬ್ಯಾಟರ್ ಅದೇ ಶೈಲಿಯನ್ನು ಪ್ರದರ್ಶಿಸಿದ್ದು,” ಎಂದು ಕಾರ್ತಿಕ್ ವಿವರಿಸಿದ್ದಾರೆ.
ನಿಕೋಲ್ಸ್-ಫಿಲಿಪ್ಸ್ ಅನುಸರಿಸಿದ್ದು ಅದೇ ಬ್ಯಾಟಿಂಗ್ ಸೂತ್ರ: ಕಾರ್ತಿಕ್
ಹೆನ್ರಿ ನಿಕೋಲ್ಸ್ ಮತ್ತು ಗ್ಲೆನ್ ಫಿಲಿಪ್ಸ್ ನಡುವಿನ ಜೊತೆಯಾಟದ ಬಗ್ಗೆಯೂ ದಿನೇಶ್ ಕಾರ್ತಿಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊದಲ ಅವಧಿಯಲ್ಲಿ ವಿಕೆಟ್ ಉಳಿಸಿಕೊಂಡು, ಎರಡನೇ ಅವಧಿಯಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡು, ಮೂರನೇ ಅವಧಿಯಲ್ಲಿ ರನ್ ಗಳಿಸುವುದು ಸಾಮಾನ್ಯವಾಗಿ ಅನುಸರಿಸುವ ಬ್ಯಾಟಿಂಗ್ ತಂತ್ರ. ನಿಕೋಲ್ಸ್ ಮತ್ತು ಫಿಲಿಪ್ಸ್ ಕೂಡ ಇದೇ ಸೂತ್ರವನ್ನು ಅನುಸರಿಸಿದರು ಎಂದು ಅವರು ಹೇಳಿದ್ದಾರೆ.
“ಮೊದಲ ಅವಧಿಯಲ್ಲಿ ವಿಕೆಟ್ ಉಳಿಸಿಕೊಳ್ಳಲು ಪ್ರಯತ್ನಿಸಿದರು. ಮಧ್ಯದ ಅವಧಿಯಲ್ಲಿ ಕೆಲವು ವಿಕೆಟ್ಗಳನ್ನು ಕಳೆದುಕೊಂಡರೂ, ವೆಲ್ಲಿಂಗ್ಟನ್ನಲ್ಲಿ ಇಂದು ಸಾಮಾನ್ಯಕ್ಕಿಂತ ಹೆಚ್ಚು ಬಿಸಿಲು ಇತ್ತು. ಪಿಚ್ ಬಿಸಿಯಾಗುತ್ತಿದ್ದಂತೆ ಬ್ಯಾಟಿಂಗ್ ಮಾಡಲು ಹೆಚ್ಚು ಅನುಕೂಲಕರವಾಯಿತು. ಇಂತಹ ಪರಿಸ್ಥಿತಿಯಲ್ಲಿ ಹೆನ್ರಿ ನಿಕೋಲ್ಸ್ ಮತ್ತು ಗ್ಲೆನ್ ಫಿಲಿಪ್ಸ್ ಜೊತೆಯಾಟ ನಿರ್ಮಿಸಿದ್ದು ಬಹಳ ಮುಖ್ಯವಾಗಿತ್ತು. ನಿಕೋಲ್ಸ್ ಅವರ ಕಥೆ ನಿಜಕ್ಕೂ ಅದ್ಭುತವಾಗಿದೆ,” ಎಂದು ಕಾರ್ತಿಕ್ ತಿಳಿಸಿದ್ದಾರೆ.
ಭಾರತದ ವಿರುದ್ಧ ಇತಿಹಾಸ ಸೃಷ್ಟಿಸಿದ ಹೆನ್ರಿ ನಿಕೋಲ್ಸ್
ತಂಡದಿಂದ ಕೈಬಿಡಲ್ಪಟ್ಟ ಬಳಿಕ ದೇಶಿ ಕ್ರಿಕೆಟ್ಗೆ ಮರಳಿ ರನ್ಗಳ ಮಳೆ ಸುರಿಸಿದ ನಿಕೋಲ್ಸ್ ಮತ್ತೆ ತಂಡದಲ್ಲಿ ಸ್ಥಾನ ಪಡೆದಿದ್ದನ್ನು ಕಾರ್ತಿಕ್ ವಿಶೇಷವಾಗಿ ಉಲ್ಲೇಖಿಸಿದ್ದಾರೆ.
“ತಂಡದಿಂದ ಕೈಬಿಟ್ಟ ಬಳಿಕ ಅವರು ದೇಶಿ ಕ್ರಿಕೆಟ್ಗೆ ಮರಳಿದರು. ಅಲ್ಲಿ ಸಾಕಷ್ಟು ರನ್ ಗಳಿಸಿದರು. ಅವರು ಗಳಿಸಿದ ರನ್ಗಳ ಕಾರಣದಿಂದಲೇ ನ್ಯೂಜಿಲೆಂಡ್ ತಂಡ ಅವರನ್ನು ಮತ್ತೆ ಆಯ್ಕೆ ಮಾಡಬೇಕಾಯಿತು. ಇಂಗ್ಲೆಂಡ್ ಪ್ರವಾಸದಲ್ಲೂ ಅವರು ಉತ್ತಮ ಪ್ರದರ್ಶನ ನೀಡಿದರು. ಇಂತಹ ಪರಿಸ್ಥಿತಿಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವುದು ಸುಲಭವಲ್ಲ. ಮೊದಲ ಅವಧಿಯಲ್ಲಿ ತಾಳ್ಮೆಯಿಂದ ಆಡಿದ ಪರಿಣಾಮ ಅವರಿಗೆ ನಂತರ ರನ್ ಗಳಿಸಲು ಸಾಧ್ಯವಾಯಿತು. ಅಂತಿಮವಾಗಿ ಶತಕವನ್ನೂ ಪೂರೈಸಿದರು. ಸದ್ಯ ಅವರು ಉತ್ತಮ ಆತ್ಮವಿಶ್ವಾಸದಲ್ಲಿದ್ದಾರೆ,” ಎಂದು ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಗ್ಲೆನ್ ಫಿಲಿಪ್ಸ್ ಅವರ ಬ್ಯಾಟಿಂಗ್ಗೂ ಕಾರ್ತಿಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಂಡ ಸಂಕಷ್ಟದಲ್ಲಿದ್ದಾಗ ಫಿಲಿಪ್ಸ್ ತೋರಿದ ಆತ್ಮವಿಶ್ವಾಸ, ಆಕ್ರಮಣಕಾರಿ ಆಟ ಮತ್ತು ಅದ್ಭುತ ಹೊಡೆತಗಳ ಆಯ್ಕೆ ಗಮನ ಸೆಳೆಯಿತು ಎಂದು ಹೇಳಿದ್ದಾರೆ.