ಅಹಮದಾಬಾದ್: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ (IND vs NZ) ನಡುವಣ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 8 ರಂದು ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಮಹತ್ವದ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav), ಅವಕಾಶ ಸಿಕ್ಕರೆ ನಮ್ಮ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಕೂಡ ಪ್ಯಾಡ್ ಕಟ್ಟಿ ಬ್ಯಾಟ್ ಮಾಡಲು ಸಿದ್ದರಾಗಿದ್ದಾರೆಂದು ಹಾಸ್ಯಸ್ಪದ ಹೇಳಿಕೆಯನ್ನು ನೀಡಿದ್ದಾರೆ.
ಮಾರ್ಚ್ 5ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಇಂಗ್ಲೆಂಡ್ ವಿರುದ್ಧ 7 ರನ್ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಭಾರತ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 253 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ 254 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡ, ಜಾಕೋಬ್ ಬೆಥೆಲ್ ಅದ್ಭುತ ಶತಕದ ಹೊರತಾಗಿಯೂ ಡೆತ್ ಓವರ್‌ಗಳಲ್ಲಿ ಹಿನ್ನಡೆ ಅನುಭವಿಸಿದ ಕಾರಣ ಕೇವಲ 7 ರನ್‌ಗಳಿಂದ ಸೋಲು ಅನುಭವಿಸಿತ್ತು.
ಪಂದ್ಯ ಪೂರ್ವ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸೂರ್ಯಕುಮಾರ್ ಯಾದವ್, "ಗೌತಮ್ ಗಂಭೀರ್ ಕೈಯಲ್ಲಿ ಅಧಿಕಾರ ಇದ್ದಿದ್ದರೆ, ಅವರೇ ಸ್ವತಃ ಪ್ಯಾಡ್ ಕಟ್ಟಿಕೊಂಡು ಬ್ಯಾಟ್ ಮಾಡಲು ಮೈದಾನಕ್ಕೇ ಇಳಿಯುತ್ತಿದ್ದರು. ಅವರು ಇಂತಹ ಸಂದರ್ಭಗಳಲ್ಲಿ ಈಗಾಗಲೇ ಆಡಿದ್ದಾರೆ ಮತ್ತು ವಿಶ್ವಕಪ್‌ಗಳನ್ನು ಗೆದ್ದ ಅನುಭವವನ್ನೂ ಹೊಂದಿದ್ದಾರೆ," ಎಂದು ತಿಳಿಸಿದ್ದಾರೆ.
IND vs NZ: ʻಅಹಮದಬಾದ್ ಪ್ರೇಕ್ಷಕರನ್ನು ಮೌನಗೊಳಿಸುತ್ತೇವೆʼ-ಸ್ಯಾಂಟ್ನರ್ ಹೇಳಿಕೆಗೆ ಸೂರ್ಯ ತಿರುಗೇಟು!
ಗೌತಮ್ ಗಂಭೀರ್‌ರನ್ನು ಶ್ಲಾಘಿಸಿದ ಸೂರ್ಯಕುಮಾರ್
ಭಾರತ ತಂಡದಲ್ಲಿ ರೂಢಿಸಿಕೊಂಡಿರುವ ಕ್ರಿಕೆಟ್ ಶೈಲಿಗೆ ನಾಯಕ ಸೂರ್ಯಕುಮಾರ್ ಯಾದವ್ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಶ್ಲಾಘಿಸಿದರು. ಗಂಭೀರ್ ತಂಡದಲ್ಲಿ ವೈಯಕ್ತಿಕ ಸ್ಟಾರ್ ಸಂಸ್ಕೃತಿಯನ್ನು ದೂರ ಮಾಡಿದ್ದಾರೆ ಎಂದು ಹೇಳಿದರು. ತಂಡದ ಪ್ರತಿಯೊಬ್ಬ ಆಟಗಾರರಿಂದಲೂ ಅತ್ಯುತ್ತಮ ಪ್ರದರ್ಶನ ಪಡೆಯುವುದು ಮತ್ತು ಅವರಿಗೆ ನೀಡಿರುವ ಪಾತ್ರವನ್ನು ಸರಿಯಾಗಿ ನಿರ್ವಹಿಸುವುದರ ಮೇಲೆ ಗಂಭೀರ್ ಗಮನ ಹರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
“ಇಂತಹ ಮಹತ್ವದ ಪಂದ್ಯದಲ್ಲಿ ಪ್ರತಿಯೊಬ್ಬರ ಕೊಡುಗೆ ನೀಡಬೇಕಯ ಎಂಬುದೇ ಅವರ (ಗಂಭೀರ್) ಮಂತ್ರ. ಒಬ್ಬರು ಅಥವಾ ಇಬ್ಬರು ಆಟಗಾರರ ಪ್ರದರ್ಶನದಿಂದ ಮಾತ್ರ ಟೂರ್ನಿಯನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದು ಅವರ ನಂಬಿಕೆ. ಪ್ರತಿಯೊಬ್ಬ ಆಟಗಾರರಿಂದಲೂ ಅತ್ಯುತ್ತಮ ಪ್ರದರ್ಶನ ಪಡೆಯುವುದರ ಮೇಲೆ ಅವರು ಗಮನಹರಿಸಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಎಲ್ಲರೂ ಕೇಂದ್ರೀಕೃತವಾಗಿರಬೇಕು ಎಂದು ಅವರು ಬಯಸುತ್ತಾರೆ. ಪ್ರಮುಖವಾಗಿ, ಅವರು ತಂಡದಿಂದ ವೈಯಕ್ತಿಕ ಮೈಲುಗಲ್ಲುಗಳ ಬಗ್ಗೆ ಇರುವ ಕಲ್ಪನೆಯನ್ನು ದೂರ ಮಾಡಿದ್ದಾರೆ. ಇದು ಟೀಮ್ ಗೇಮ್,” ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.
IND vs NZ: 2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯ ಗೆಲ್ಲುವ ತಂಡ ಯಾವುದು? ಲೆಕ್ಕಾಚಾರ ಏನು ಹೇಳುತ್ತೆ?
ತಂಡದ ಆಟಗಾರರನ್ನು ಶ್ಲಾಘಿಸಿದ ಸೂರ್ಯ
ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಕ್ರಮ ಯಶಸ್ವಿಯಾಯಿತು. ಅಭಿಷೇಕ್ ಶರ್ಮಾ ಮಾತ್ರ 9 ರನ್ ಗಳಿಸಿ ಔಟಾಗಿದ್ದು ಬಿಟ್ಟರೆ, ಇನ್ನುಳಿದ ಯಾವ ಬ್ಯಾಟರ್‌ಗೂ 170 ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್ ಇರಲಿಲ್ಲ. ಈ ಪಂದ್ಯದಲ್ಲಿ ಆಟಗಾರರು ನೀಡಿದ ಸಣ್ಣ-ಸಣ್ಣ ಕೊಡುಗೆಗಳು ಕೂಡ ತಂಡಕ್ಕೆ ನೆರವಾಗಿದೆ ಎಂದರು.
“ನೀವು ಕೊನೆಯ ಪಂದ್ಯವನ್ನು ನೋಡಿದರೆ, ತಿಲಕ್ ವರ್ಮಾ 7 ಎಸೆತಗಳಲ್ಲಿ 18 ರನ್ ಗಳಿಸಿದರು. ನಮ್ಮ ಡ್ರೆಸ್ಸಿಂಗ್ ರೂಮ್‌ನಲ್ಲಿ ನಾವು ಅದನ್ನೂ ಅರ್ಧಶತಕ ಅಥವಾ ಶತಕದಷ್ಟೇ ಮಹತ್ವದಿಂದ ನೋಡುತ್ತೇವೆ. ಇದೇ ನಮ್ಮ ತಂಡದ ಸಂಸ್ಕೃತಿ,” ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.