ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs NZ: 4 ವಿಕೆಟ್‌ ಕಿತ್ತು ವೆಲ್ಲಿಂಗ್ಟನ್‌ನಲ್ಲಿ ಇತಿಹಾಸ ಬರೆದ ಗುರ್ನೂರ್‌ ಬ್ರಾರ್‌!

ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಗುರ್ನೂರ್‌ ಬ್ರಾರ್ 30 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಗಮನ ಸೆಳೆದಿದ್ದಾರೆ. ನ್ಯೂಜಿಲೆಂಡ್ ನೆಲದಲ್ಲಿ ಭಾರತೀಯ ವೇಗಿಗಳ ಪೈಕಿ ಎರಡನೇ ಅತ್ಯುತ್ತಮ ಬೌಲಿಂಗ್ ಸಾಧನೆ ಮಾಡಿದ ಅವರು, ಸರಣಿಯಲ್ಲಿ 7 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.

4 ವಿಕೆಟ್‌ ಕಿತ್ತು ವೆಲ್ಲಿಂಗ್ಟನ್‌ನಲ್ಲಿ ಇತಿಹಾಸ ಬರೆದ ಗುರ್ನೂರ್‌ ಬ್ರಾರ್‌.

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್ ವಿರುದ್ಧ ಶನಿವಾರ ಇಲ್ಲಿನ ಹೆನ್ರಿ ಸ್ಟೇಡಿಯಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ (IND vs NZ) ಭಾರತದ ಯುವ ವೇಗದ ಬೌಲರ್ ಗುರ್ನೂರ್‌ ಬ್ರಾರ್ (Gurnoor Brar) ಅಮೋಘ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ನ್ಯೂಜಿಲೆಂಡ್ ನೆಲದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಭಾರತೀಯ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಬ್ರಾರ್‌ ಎರಡನೇ ಸ್ಥಾನ ಪಡೆದಿದ್ದಾರೆ.

10 ಓವರ್‌ಗಳಲ್ಲಿ ಕೇವಲ 30 ರನ್ ನೀಡಿ 4 ವಿಕೆಟ್ ಕಬಳಿಸಿದ ಗುರ್ನೂರ್‌ ಬ್ರಾರ್‌, ಆತಿಥೇಯ ತಂಡದ ಪ್ರಮುಖ ಬ್ಯಾಟರ್‌ಗಳಾದ ಟಾಮ್ ಲೇಥಮ್, ಗ್ಲೆನ್ ಫಿಲಿಪ್ಸ್ ಹಾಗೂ ನಾಯಕ ಮಿಚೆಲ್ ಸ್ಯಾಂಟ್ನರ್ ಅವರ ವಿಕೆಟ್‌ಗಳನ್ನು ಪಡೆಯುವ ಮೂಲಕ ಭಾರತದ ಮೇಲುಗೈಗೆ ಕಾರಣರಾದರು.

ನ್ಯೂಜಿಲೆಂಡ್ ನೆಲದಲ್ಲಿ ಭಾರತೀಯ ವೇಗದ ಬೌಲರ್‌ನ ಅತ್ಯುತ್ತಮ ಬೌಲಿಂಗ್ ದಾಖಲೆ ಇಂದಿಗೂ ಮಾಜಿ ವೇಗಿ ಹಾಗೂ ಕನ್ನಡಿಗ ಜಾವಗಲ್ ಶ್ರೀನಾಥ್ ಅವರ ಹೆಸರಿನಲ್ಲಿದೆ. 2003ರಲ್ಲಿ ಆಕ್ಲೆಂಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಶ್ರೀನಾಥ್ 23 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಇದೀಗ ಗುರ್ನೂರ್‌ ಬ್ರಾರ್‌ 4/30 ಸಾಧನೆಯೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದಾರೆ.

Syed Mushtaq Ali Trophy: 15ನೇ ವಯಸ್ಸಿನಲ್ಲಿ ಬಿಹಾರ ತಂಡಕ್ಕೆ ನಾಯಕನಾದ ವೈಭವ್‌ ಸೂರ್ಯವಂಶಿ!

ಇದುವರೆಗೆ 11 ಏಕದಿನ ಪಂದ್ಯಗಳನ್ನಾಡಿರುವ ಬ್ರಾರ್ 31.19ರ ಸರಾಸರಿಯಲ್ಲಿ ಒಟ್ಟು 21 ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಏಕದಿನ ಸರಣಿಯಲ್ಲೂ ಗುರ್ನೂರ್‌ ಬ್ರಾರ್‌ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಎರಡು ಪಂದ್ಯಗಳಿಂದ 10.57ರ ಸರಾಸರಿಯಲ್ಲಿ 7 ವಿಕೆಟ್ ಕಬಳಿಸಿದ್ದಾರೆ.

ನ್ಯೂಜಿಲೆಂಡ್ ಬ್ಯಾಟಿಂಗ್ ಕುಸಿತ

ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತೀಯ ವೇಗಿಗಳ ಸಂಘಟಿತ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ತಂಡ ಕೇವಲ 53 ರನ್‌ಗಳಿಗೆ 5 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.



ಈ ಹಂತದಲ್ಲಿ ಡ್ಯಾರಿಲ್ ಮಿಚೆಲ್ ಹಾಗೂ ನಾಯಕ ಮಿಚೆಲ್ ಸ್ಯಾಂಟ್ನರ್ 6ನೇ ವಿಕೆಟ್‌ಗೆ 59 ರನ್‌ಗಳ ಜೊತೆಯಾಟವಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಡ್ಯಾರಿಲ್ ಮಿಚೆಲ್ 104 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 55 ರನ್ ಗಳಿಸಿದರೆ, ಸ್ಯಾಂಟ್ನರ್ 38 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 31 ರನ್ ಗಳಿಸಿದರು.

IND vs NZ: ವೆಲ್ಲಿಂಗ್ಟನ್‌ನಲ್ಲಿ ಸೋಲುವ ದವಡೆಗೆ ಸಿಲುಕಿದ್ದ ಭಾರತ ತಂಡವನ್ನು ಗೆಲ್ಲಿಸಿದ ಮಳೆರಾಯ!

ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ನ್ಯೂಜಿಲೆಂಡ್ ಮತ್ತೆ ಕುಸಿತ ಕಂಡಿತು. 5 ವಿಕೆಟ್‌ಗೆ 112 ರನ್ ಗಳಿಸಿದ್ದ ತಂಡ ಕೇವಲ 22 ರನ್‌ಗಳ ಅಂತರದಲ್ಲಿ ಉಳಿದ ಐದು ವಿಕೆಟ್‌ಗಳನ್ನು ಕಳೆದುಕೊಂಡು 134 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಗುರ್ನೂರ್‌ ಬ್ರಾರ್ 4 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್, ಆಕಿಬ್ ನಬಿ ಹಾಗೂ ಅನ್ಶುಲ್ ಕಾಂಬೋಜ್ ತಲಾ 2 ವಿಕೆಟ್ ಕಬಳಿಸಿದರು. ಇದೀಗ ಪಂದ್ಯ ಗೆದ್ದು ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡ 2-0 ಮುನ್ನಡೆ ಸಾಧಿಸಿದೆ.