ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ಮೊದಲನೇ ಟಿ20ಐ ಪಂದ್ಯದಲ್ಲಿ ಇಶಾನ್‌ ಕಿಶನ್‌ ಚಾನ್ಸ್‌ ಇದೆಯಾ? ಸೂರ್ಯಕುಮಾರ್‌ ಯಾದವ್ ಸ್ಪಷ್ಟನೆ!

ಎರಡೂವರೆ ವರ್ಷಗಳಿಂದ ಭಾರತ ಟಿ20 ತಂಡದಿಂದ ದೂರ ಉಳಿದಿದ್ದ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ತಿಲಕ್ ವರ್ಮಾ ಅಲಭ್ಯತೆಯ ನಡುವೆ ಇಶಾನ್ ಕಿಶನ್ ಅವರಿಗೆ ಅವಕಾಶ ನೀಡಲಾಗಿದೆ ಎಂದು ನಾಯಕ ಸೂರ್ಯಕುಮಾರ್ ಖಚಿತಪಡಿಸಿದ್ದಾರೆ.

ಇಶಾನ್‌ ಕಿಶನ್‌ ಆಡುವ ಬಗ್ಗೆ ಸೂರ್ಯ ಸ್ಪಷ್ಟನೆ.

ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಏಕದಿನ ಸರಣಿ (IND vs NZ) ಕಳೆದುಕೊಂಡಿರುವ ಭಾರತ ತಂಡ ಇದೀಗ ಐದು ಪಂದ್ಯಗಳ ಟಿ20 ಸರಣಿಗೆ ಸಜ್ಜಾಗುತ್ತಿದೆ. ಸರಣಿಯ ಮೊದಲ ಪಂದ್ಯ ಜನವರಿ 21 ರಂದು ನಾಗ್ಪುರದಲ್ಲಿ ನಡೆಯಲಿದೆ. ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ (Ishan Kishan) ತಂಡಕ್ಕೆ ಮರಳಲಿದ್ದಾರೆ ಎಂದು ನಾಯಕ ಸೂರ್ಯಕುಮಾರ್ (Suryakumar Yadav) ಮಾಹಿತಿ ನೀಡಿದ್ದಾರೆ. ತಿಲಕ್‌ ವರ್ಮಾ ವಿಜಯ ಹಝಾರೆ ಟ್ರೋಫಿ ಟೂರ್ನಿಯ ಸಂದರ್ಭದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಹಾಗಾಗಿ ಆರಂಭಿಕ ಮೂರು ಪಂದ್ಯಗಳ ತಿಲಕ್‌ ವರ್ಮಾ ಅಲಭ್ಯರಾಗಿದ್ದಾರೆ.

ಇಶಾನ್ ಕಿಶನ್ ಭಾರತ ತಂಡದ ಪರವಾಗಿ 2023ರ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟಿ20 ಪಂದ್ಯವನ್ನಾಡಿದ್ದರು. ದೀರ್ಘ ಕಾಲ ತಂಡದಿಂದ ದೂರ ಉಳಿದಿದ್ದ ಕಿಶನ್ ಇದೀಗ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು ಈ ಕುರಿತು ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಅಲಭ್ಯರಾಗಿರುವುದರಿಂದ ಇಶಾನ್ ಕಿಶನ್ ಅವರು ತಂಡಕ್ಕೆ ಮರಳಿದ್ದಾರೆ ಎಂದು ಹೇಳಿದ್ದಾರೆ.

ಮೊದಲ ಟಿ20 ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, "ಹೌದು, ಇಶಾನ್ 3ನೇ ಸ್ಥಾನದಲ್ಲಿ ಆಡಲಿದ್ದಾರೆ. ಅವರು ನಮ್ಮ ವಿಶ್ವಕಪ್ ಯೋಜನೆಗಳ ಭಾಗವಾಗಿದ್ದಾರೆ ಮತ್ತು ನಾವು ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದೇವೆ. ಅವರು ಬಹಳ ಸಮಯದಿಂದ ಭಾರತ ಪರ ಆಡಿಲ್ಲ, ಆದರೆ ದೇಶಿ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಸುಮಾರು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಭಾರತ ಪರ ಆಡಿಲ್ಲ, ಆದ್ದರಿಂದ ಅವರು ಈ ಅವಕಾಶಕ್ಕೆ ಅರ್ಹರು," ಎಂದು ತಿಳಿಸಿದ್ದಾರೆ.

WPL 2026: ಚೊಚ್ಚಲ ಅರ್ಧಶತಕ ಬಾರಿಸಿದ ಗೌತಮಿ ನಾಯಕ್‌ಗೆ ಹಾರ್ದಿಕ್‌ ಪಾಂಡ್ಯ ವಿಶೇಷ ಸಂದೇಶ!

"ಇದು ನಂ.4 ಅಥವಾ ನಂ.5 ಆಗಿದ್ದರೆ, ಪರಿಸ್ಥಿತಿ ಬೇರೆಯೇ ಇರುತ್ತಿತ್ತು. ಆದರೆ ದುರದೃಷ್ಟವಶಾತ್, ತಿಲಕ್ ಲಭ್ಯವಿಲ್ಲ ಮತ್ತು ನಾನು ಇಶಾನ್ ನಂ.3 ರಲ್ಲಿ ಅತ್ಯುತ್ತಮ ಆಯ್ಕೆ ಎಂದು ಭಾವಿಸುತ್ತೇನೆ," ಎಂದು ಸೂರ್ಯಕುಮಾರ್ ಹೇಳಿದ್ದಾರೆ.

ದೇಶಿ ಕ್ರಿಕೆಟ್‌ನಲ್ಲಿ ಮಿಂಚಿನ ಪ್ರದರ್ಶನ

2025ರ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಾರ್ಖಂಡ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಇಶಾನ್ ಕಿಶನ್ ಪ್ರಮುಖ ಪಾತ್ರ ವಹಿಸಿದರು. ಈ ಟೂರ್ನಿಯಲ್ಲಿ ಅವರು 10 ಇನಿಂಗ್ಸ್‌ಗಳಲ್ಲಿ 57.44ರ ಸರಾಸರಿಯಲ್ಲಿ ಹಾಗೂ 197ರ ಸ್ಟ್ರೈಕ್ ರೇಟ್‌ನಲ್ಲಿ 517 ರನ್ ಗಳಿಸುವ ಮೂಲಕ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಹರಿಯಾಣ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಅವರು ಕೇವಲ 49 ಎಸೆತಗಳಲ್ಲಿ ಅದ್ಭುತ 101 ರನ್‌ಗಳ ಆಕರ್ಷಕ ಶತಕ ಸಿಡಿಸಿದರು. ಆ ಪಂದ್ಯದಲ್ಲಿ ಕಿಶನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದಾಗಿ ತಂಡವು 262 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ ಎದುರಾಳಿ ತಂಡವನ್ನು ಮಣಿಸಿ ಟ್ರೋಫಿ ಎತ್ತಿ ಹಿಡಿಯಿತು.

vs NZ: ಇಶಾನ್‌ ಕಿಶನ್‌ ಇನ್‌, ಮೊದಲನೇ ಟಿ20ಐ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ರವಿ ಬಿಷ್ಣೋಯ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

ನ್ಯೂಜಿಲೆಂಡ್ ಟಿ20 ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ (ವಿಕೆಟ್ ಕೀಪರ್), ಜಾಕೋಬ್ ಡಫಿ, ಝ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಬೆವೊನ್ ಜೇಕಬ್ಸ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಟಿಮ್ ರಾಬಿನ್ಸನ್, ಇಶ್ ಸೋಧಿ, ಮೈಕೆಲ್ ಬ್ರೇಸ್‌ವೆಲ್.

ಭಾರತ vs ನ್ಯೂಜಿಲೆಂಡ್ ಟಿ20 ಸರಣಿ ವೇಳಾಪಟ್ಟಿ

ಮೊದಲ ಟಿ20 ಪಂದ್ಯ – ಜನವರಿ 21 ನಾಗ್ಪುರ

ಎರಡನೇ ಟಿ20 ಪಂದ್ಯ – ಜನವರಿ 23, ರಾಯ್ಪುರ

ಮೂರನೇ ಟಿ20 ಪಂದ್ಯ – ಜನವರಿ 25, ಗುವಾಹಟಿ

ನಾಲ್ಕನೇ ಟಿ20 ಪಂದ್ಯ – ಜನವರಿ 28, ವಿಶಾಖಪಟ್ಟಣ

ಐದನೇ ಟಿ20 ಪಂದ್ಯ – ಜನವರಿ 31, ತಿರುವನಂತಪುರಂ