ನವದೆಹಲಿ: ಭಾರತ ವಿರುದ್ಧದ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ (NZC) ತನ್ನ ತಂಡವನ್ನು (New Zealand Cricket Squad) ಪ್ರಕಟಿಸಿದೆ. ನವೆಂಬರ್ 13ರಂದು ನಡೆಯಲಿರುವ ನಾಲ್ಕನೇ ಏಕದಿನ ಪಂದ್ಯಕ್ಕೂ ಮುನ್ನ ಈ ಪ್ರಕಟಣೆ ಹೊರಬಿದ್ದಿದೆ. ಉಳಿದ ಎರಡು ಪಂದ್ಯಗಳಲ್ಲೂ ಮಿಚೆಲ್ ಸ್ಯಾಂಟ್ನರ್ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ.
ತಂಡದ ಪ್ರಕಟಣೆಯಲ್ಲಿ ಪ್ರಮುಖವಾಗಿ ಗಮನ ಸೆಳೆದಿರುವುದು 31 ವರ್ಷದ ವೇಗಿ ಬ್ರೆಟ್ ರಾಂಡೆಲ್ ಅವರಿಗೆ ಮೊದಲ ಬಾರಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಕ್ಕಿರುವುದು. ದೇಶಿ ಕ್ರಿಕೆಟ್ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ರಾಂಡೆಲ್ ಇದೇ ಮೊದಲ ಬಾರಿ ನ್ಯೂಜಿಲೆಂಡ್ ಏಕದಿನ ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ರಾಂಡೆಲ್ ಇತ್ತೀಚೆಗೆ ಡರ್ಬಿಶೈರ್ ತಂಡದ ಪರ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಆಡಿದ ಅನುಭವದೊಂದಿಗೆ ತವರಿಗೆ ಮರಳಿದ್ದಾರೆ. ಅವರ ದೇಶಿ ಕ್ರಿಕೆಟ್ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಸಮಿತಿ ಈ ಅವಕಾಶ ನೀಡಿದೆ.
ಇದರ ಜೊತೆಗೆ ಜಾಶ್ ಕ್ಲಾರ್ಕ್ಸನ್ ಅವರನ್ನು ಕೂಡ ಕೊನೆಯ ಎರಡು ಪಂದ್ಯಗಳಿಗೆ ತಂಡಕ್ಕೆ ಮರಳಿ ಕರೆಸಿಕೊಳ್ಳಲಾಗಿದೆ. ಅವರು ನ್ಯೂಜಿಲೆಂಡ್ ಪರ ಆರು ಏಕದಿನ ಪಂದ್ಯಗಳನ್ನು ಆಡಿದ್ದಾರೆ. 2026ರ ಏಪ್ರಿಲ್ನಲ್ಲಿ ಬಾಂಗ್ಲಾದೇಶ ವಿರುದ್ಧ ಆಡಿದ್ದೇ ಅವರ ಕೊನೆಯ ಏಕದಿನ ಪಂದ್ಯವಾಗಿತ್ತು.
IND vs NZ: ನಾಲ್ಕನೇ ಒಡಿಐಗೆ ತಂಡಗಳ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್ ವಿವರ!
ತಂಡದ ಆಯ್ಕೆ ಕುರಿತು ರಾಬ್ ವಾಲ್ಟರ್ ಹೇಳಿದ್ದೇನು?
ತಂಡದ ಆಯ್ಕೆ ಕುರಿತು ನ್ಯೂಜಿಲೆಂಡ್ ಮುಖ್ಯ ಕೋಚ್ ರಾಬ್ ವಾಲ್ಟರ್ ಸಂತಸ ವ್ಯಕ್ತಪಡಿಸಿದ್ದಾರೆ. ಬ್ರೆಟ್ ರಾಂಡೆಲ್ ಅವರ ಮೊದಲ ಅಂತಾರಾಷ್ಟ್ರೀಯ ಕರೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ದೇಶಿ ಕ್ರಿಕೆಟ್ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡಿರುವ ರಾಂಡೆಲ್ ಈ ಅವಕಾಶಕ್ಕೆ ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.
"ಯಾವುದೇ ಆಟಗಾರನಿಗೆ ಮೊದಲ ಬಾರಿ ಅಂತಾರಾಷ್ಟ್ರೀಯ ತಂಡಕ್ಕೆ ಕರೆ ಬರುವುದು ವಿಶೇಷ ಕ್ಷಣ. ಬ್ರೆಟ್ಗೆ ಈ ಅವಕಾಶ ಸಿಕ್ಕಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ. ಅವರು ಕಳೆದ ಕೆಲವು ಸಮಯದಿಂದ ದೇಶಿ ಕ್ರಿಕೆಟ್ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಈ ಅವಕಾಶವನ್ನು ಸಂಪೂರ್ಣವಾಗಿ ಅರ್ಹತೆಯ ಆಧಾರದ ಮೇಲೆ ಪಡೆದುಕೊಂಡಿದ್ದಾರೆ."
"ಈ ಸರಣಿಯುದ್ದಕ್ಕೂ ತಂಡದಲ್ಲಿ ಕೆಲವು ಬದಲಾವಣೆಗಳಾಗಿವೆ. ಆದ್ದರಿಂದ ಬ್ರೆಟ್ ಮತ್ತು ಜಾಶ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸಾಧ್ಯವಾಗಿರುವುದು ಸಂತಸದ ವಿಚಾರ. ಈ ವಾರಾಂತ್ಯದಲ್ಲಿ ಹವಾಮಾನ ಉತ್ತಮವಾಗಿರುವ ನಿರೀಕ್ಷೆಯಿದೆ. ಸರಣಿಯನ್ನು ಉತ್ತಮ ರೀತಿಯಲ್ಲಿ ಮುಕ್ತಾಯಗೊಳಿಸುವ ವಿಶ್ವಾಸ ನಮಗಿದೆ," ಎಂದು ರಾಬ್ ವಾಲ್ಟರ್ ಅವರನ್ನು ಉಲ್ಲೇಖಿಸಿ ಕ್ರಿಕ್ಬಜ್ ವರದಿ ಮಾಡಿದೆ.
ಭಾರತ ಈಗಾಗಲೇ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯ ಮಳೆಯಿಂದ ರದ್ದಾಗಿತ್ತು. ಇದೀಗ ಉಳಿದ ಎರಡು ಪಂದ್ಯಗಳನ್ನು ಗೆದ್ದು ಸರಣಿಯನ್ನು ಸಮಬಲಗೊಳಿಸುವ ಸವಾಲು ನ್ಯೂಜಿಲೆಂಡ್ ಮುಂದಿದೆ.
ನಾಲ್ಕನೇ ಒಡಿಐಗೆ ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಆಲೆನ್, ಮೈಕಲ್ ಬ್ರೇಸ್ವೆಲ್, ಕ್ರಿಸ್ಟಿಯಾನ್ ಕ್ಲಾರ್ಕ್, ಜೇಕಬ್ ಡಫಿ, ಮ್ಯಾಟ್ ಫಿಷರ್, ಡಿಯಾನ್ ಫಾಕ್ಸ್ಕ್ರಾಫ್ಟ್, ಮಿಚ್ ಹೇ (ವಿಕೆಟ್ ಕೀಪರ್), ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ನಿಕ್ ಕೆಲ್ಲಿ, ಬ್ರೆಟ್ ರಾಂಡೆಲ್, ಟಿಮ್ ಸೈಫರ್ಟ್ (ವಿಕೆಟ್ ಕೀಪರ್), ವಿಲ್ ಯಂಗ್
ಐದನೇ ಏಕದಿನ ಪಂದ್ಯಕ್ಕೆ ನ್ಯೂಜಿಲೆಂಡ್ ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಆಲೆನ್, ಮೈಕಲ್ ಬ್ರೇಸ್ವೆಲ್, ಕ್ರಿಸ್ಟಿಯಾನ್ ಕ್ಲಾರ್ಕ್, ಜಾಶ್ ಕ್ಲಾರ್ಕ್ಸನ್, ಜೇಕಬ್ ಡಫಿ, ಮ್ಯಾಟ್ ಫಿಷರ್, ಡಿಯಾನ್ ಫಾಕ್ಸ್ಕ್ರಾಫ್ಟ್, ಮಿಚ್ ಹೇ (ವಿಕೆಟ್ ಕೀಪರ್), ಕೈಲ್ ಜೇಮಿಸನ್, ನಿಕ್ ಕೆಲ್ಲಿ, ಬ್ರೆಟ್ ರಾಂಡೆಲ್, ಟಿಮ್ ಸೈಫರ್ಟ್ (ವಿಕೆಟ್ ಕೀಪರ್), ವಿಲ್ ಯಂಗ್