ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಇದಿನ್ನೂ ಟ್ರೇಲರ್‌, ಮುಂದೆ ಇದೆ ನಿಮಗೆ ಮಾರಿ ಹಬ್ಬʼ: ಮೊಹಮ್ಮದ್‌ ಸಿರಾಜ್‌ರನ್ನು ಕೈ ಬಿಟ್ಟಿದ್ದಕ್ಕೆ ಆರ್‌ ಅಶ್ವಿನ್‌ ಕಿಡಿ!

ನ್ಯೂಜಿಲೆಂಡ್‌ ಎದುರು ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XIನಿಂದ ಮೊಹಮ್ಮದ್‌ ಸಿರಾಜ್‌ ಹಾಗೂ ರವೀಂದ್ರ ಜಡೇಜಾ ಅವರನ್ನು ಕೈ ಬಿಟ್ಟಿರುವುದಕ್ಕೆ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಕಿಡಿ ಕಾರಿದ್ದಾರೆ. 2027ರ ಏಕದಿನ ವಿಶ್ವಕಪ್‌ ಟೂರ್ನಿಯಿಂದಲೂ ಸಿರಾಜ್‌ ಅವರನ್ನು ಕೈಬಿಡಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಸಿರಾಜ್‌, ಜಡೇಜಾರನ್ನು ಕಡೆಗಣಿಸಿದ ಗಿಲ್‌, ಗಂಭೀರ್‌ ವಿರುದ್ಧ ಅಶ್ವಿನ್‌ ಕಿಡಿ.

ನವದೆಹಲಿ: ನ್ಯೂಜಿಲೆಂಡ್‌ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯಕ್ಕೆ (IND vs NZ) ಭಾರತ ತಂಡದ ಪ್ಲೇಯಿಂಗ್‌ XIನಿಂದ ಮೊಹಮ್ಮದ್‌ ಸಿರಾಜ್‌ (Mohammed Siraj) ಹಾಗೂ ರವೀಂದ್ರ ಜಡೇಜಾ (Ravindra Jadeja) ಅವರನ್ನು ಕೈಬಿಟ್ಟಿರುವುದಕ್ಕೆ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವೆಂಬರ್‌ 19 ರಂದು ವೆಲ್ಲಿಂಗ್ಟನ್‌ನಲ್ಲಿ ಮೊದಲನೇ ಟೆಸ್ಟ್‌ ಆರಂಭವಾಗಿದ್ದು, ಹಲವು ವರ್ಷಗಳ ಕಾಲ ಭಾರತ ಟೆಸ್ಟ್‌ ತಂಡದಲ್ಲಿ ನಿಯಮಿತವಾಗಿ ಆಡುತ್ತಿದ್ದ ಸಿರಾಜ್‌ ಹಾಗೂ ಜಡೇಜಾ ಅವರನ್ನು ಕೈಬಿಟ್ಟಿರುವ ನಾಯಕ ಶುಭಮನ್‌ ಗಿಲ್‌ ಹಾಗೂ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರನ್ನು ಟೀಕಿಸಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅಶ್ವಿನ್, ಪಂದ್ಯದ ಆರಂಭಕ್ಕೂ ಮುನ್ನ ಸಿರಾಜ್ ತಂಡದಲ್ಲಿ ಆಡುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ರವೀಂದ್ರ ಜಡೇಜಾ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಟ್ಟಿರುವ ನಿರ್ಧಾರ ಮಾತ್ರ ಅನಿರೀಕ್ಷಿತವಾಗಿತ್ತು ಎಂದು ಹೇಳಿದ್ದಾರೆ. ಸಿರಾಜ್ ಅವರನ್ನು ತಂಡದಿಂದ ಕೈಬಿಡಲು ಕಳೆದ ಒಂದು ತಿಂಗಳಿನಿಂದಲೇ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿರುವ ಅಶ್ವಿನ್, 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಸಿರಾಜ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು ಎಂಬುದನ್ನು ನೆನಪಿಸಿದ್ದಾರೆ.

ಭಾರತದ ಬೌಲರ್‌ಗಳಿಗೆ ನಿಕೋಲ್ಸ್‌, ಫಿಲಿಪ್ಸ್‌ ಕಡಿವಾಣ; ಹಿಡಿತ ಸಾಧಿಸಿದ ನ್ಯೂಜಿಲೆಂಡ್‌

"ಸಿರಾಜ್ ಅವರನ್ನು ತಂಡದಿಂದ ಕೈಬಿಡಲು ಒಂದು ವಾರದಿಂದ ಯಾಕೆ ಇಂತಹ ವಾತಾವರಣ ಸೃಷ್ಟಿಸಲಾಗುತ್ತಿದೆ? ಇದು ಕೇವಲ ಒಂದು ವಾರದ ಕಥೆಯಲ್ಲ, ಕಳೆದ ಒಂದು ತಿಂಗಳಿನಿಂದಲೇ ಈ ಪ್ರಯತ್ನ ನಡೆಯುತ್ತಿದೆ. ಮೊದಲು ಏಕದಿನ ಪಂದ್ಯಗಳಲ್ಲಿ ಅವರಿಗೆ ಅವಕಾಶ ನೀಡಲಿಲ್ಲ. ಮುಂದೆ ಏಕದಿನ ವಿಶ್ವಕಪ್ ಇದೆ. ಹಾಗಾದರೆ ನಿಮಗೆ ಸಿರಾಜ್ ಬೇಡವೇ? 2023ರ ವಿಶ್ವಕಪ್‌ ಟೂರ್ನಿಯಲ್ಲಿ ಅವರು ಎಷ್ಟು ಅದ್ಭುತವಾಗಿ ಬೌಲ್‌ ಮಾಡಿದ್ದರು ಎಂಬುದನ್ನು ಮರೆಯಬಾರದು. ಆಶ್ಚರ್ಯಪಡಬೇಡಿ, ಇದು ಕೇವಲ ಟ್ರೇಲರ್ ಅಷ್ಟೇ. ಮುಂದೆಯೂ ಇದೇ ರೀತಿಯ ಘಟನೆ ನಡೆಯಲಿದೆ," ಎಂದು ಅಶ್ವಿನ್ ಹೇಳಿದ್ದಾರೆ.

ಬುಮ್ರಾ, ಸಿರಾಜ್ ಮೊದಲ ಆಯ್ಕೆಯಾಗಬೇಕು

ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರ ಸ್ಥಾನವನ್ನು ತಂಡದಲ್ಲಿ ಪ್ರಶ್ನಿಸುವ ಅಗತ್ಯವೇ ಇಲ್ಲ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ಈ ಇಬ್ಬರು ವೇಗಿಗಳನ್ನು ಮೊದಲು ತಂಡಕ್ಕೆ ಆಯ್ಕೆ ಮಾಡಬೇಕು. ನಂತರ ಉಳಿದ ಇಬ್ಬರು ವೇಗದ ಬೌಲರ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

"ಮೊದಲು ಮೊಹಮ್ಮದ್ ಸಿರಾಜ್ ಮತ್ತು ಜಸ್‌ಪ್ರೀತ್‌ ಬುಮ್ರಾ ಅವರ ಹೆಸರುಗಳನ್ನು ಬರೆಯಿರಿ. ಬಳಿಕ ಉಳಿದ ಇಬ್ಬರು ವೇಗದ ಬೌಲರ್‌ಗಳನ್ನು ಆಯ್ಕೆ ಮಾಡಿ. ಇಲ್ಲಿ ಸ್ಪರ್ಧೆ ಎಲ್ಲಿದೆ? ನನಗಂತೂ ಅರ್ಥವಾಗುತ್ತಿಲ್ಲ," ಎಂದು ಅಶ್ವಿನ್ ತಿಳಿಸಿದ್ದಾರೆ.

ಮೊಹಮ್ಮದ್ ಸಿರಾಜ್ ಕೈಬಿಟ್ಟ ವಿವಾದಾತ್ಮಕ ನಿರ್ಧಾರ ಸಮರ್ಥಿಸಿಕೊಂಡ ಭಾರತ

ಸಿರಾಜ್‌ರಂತಹ ಬೌಲರ್‌ಗಳ ಅಗತ್ಯವಿತ್ತು

ಪಂದ್ಯದ ಪಿಚ್‌ನಲ್ಲಿ ಮಧ್ಯಮ ಓವರ್‌ಗಳಲ್ಲಿ ಸಿರಾಜ್‌ರಂತಹ ಆಕ್ರಮಣಕಾರಿ ಮನೋಭಾವದ ಬೌಲರ್‌ನ ಅಗತ್ಯವಿತ್ತು ಎಂದು ಅಶ್ವಿನ್ ಹೇಳಿದ್ದಾರೆ. ಕೆಂಪು ಕೂಕಬುರಾ ಚೆಂಡಿನ ತೇವಾಂಶ ಕಡಿಮೆಯಾದ ಬಳಿಕ ಹಾಗೂ ಚೆಂಡಿನ ಹೊಳಪು ಮತ್ತು ಸೀಮ್ ಪರಿಣಾಮ ಕುಗ್ಗಿದಾಗ ಬೌಲರ್‌ಗಳಿಗೆ ಹೆಚ್ಚಿನ ನೆರವು ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ನಿರಂತರವಾಗಿ ವೇಗವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಸಿರಾಜ್ ತಂಡಕ್ಕೆ ನೆರವಾಗುತ್ತಿದ್ದರು ಎಂದು ತಿಳಿಸಿದ್ದಾರೆ.

"ನನ್ನನ್ನು ಹೆಚ್ಚು ಅಚ್ಚರಿಗೊಳಿಸಿದ್ದು ಭಾರತದ ತಂಡದ ಆಯ್ಕೆ. ಕೆಂಪು ಕೂಕಬುರಾ ಚೆಂಡಿನ ತೇವಾಂಶ ಕಡಿಮೆಯಾದಾಗ ಮತ್ತು ಸೀಮ್ ಪರಿಣಾಮ ಕುಗ್ಗಿದಾಗ, ಹಳೆಯ ಚೆಂಡಿನಲ್ಲಿ ಏನೂ ನೆರವು ಸಿಗದ ಮಧ್ಯಮ ಓವರ್‌ಗಳಲ್ಲಿ ನಿಮಗೆ ಒಬ್ಬ ಬೌಲರ್ ಬೇಕಾಗಿತ್ತು. ಮೊಹಮ್ಮದ್ ಸಿರಾಜ್ ಅವರಂತಹ ಆಕ್ರಮಣಕಾರಿ ಮನೋಭಾವದ ಬೌಲರ್ ಅಗತ್ಯವಿತ್ತು. ಅವರು ಐದು ವಿಕೆಟ್ ಪಡೆಯುತ್ತಿದ್ದರು ಎಂದು ನಾನು ಹೇಳುತ್ತಿಲ್ಲ. ಆದರೆ ನಿರಂತರವಾಗಿ ಓಡಿ ಬಂದು ಬೌಲಿಂಗ್ ಮಾಡುವ ಉತ್ಸಾಹಿ ಆಟಗಾರ ತಂಡದಲ್ಲಿರಬೇಕು. ಸಿರಾಜ್ ಕೆಲವೊಮ್ಮೆ ಹೆಚ್ಚು ರನ್ ನೀಡಬಹುದು. ಆದರೆ ಅವರು ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಹಲವು ವರ್ಷಗಳಿಂದ ಇದನ್ನು ಸಾಬೀತುಪಡಿಸಿದ್ದಾರೆ," ಎಂದು ಅಶ್ವಿನ್ ಹೇಳಿದ್ದಾರೆ.

ಸುಲಭ ಕ್ಯಾಚ್ ಕೈಚೆಲ್ಲಿ ಪೇಚಿಗೆ ಸಿಲುಕಿದ ಪಡಿಕ್ಕಲ್‌, ಪಂತ್‌; ವಿಡಿಯೊ ವೈರಲ್‌

ನಾಯಕ ಗಿಲ್ ಕೂಡ ಜವಾಬ್ದಾರಿ ಹೊರಬೇಕು

ತಂಡದ ಆಯ್ಕೆ ವಿಚಾರದಲ್ಲಿ ನಾಯಕ ಶುಭಮನ್ ಗಿಲ್ ಕೂಡ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಅಶ್ವಿನ್ ಸಲಹೆ ನೀಡಿದ್ದಾರೆ. ತಂಡದ ಆಡಳಿತ ಮಂಡಳಿಯ ನಿರ್ಧಾರಗಳ ಬಗ್ಗೆ ಮಾತ್ರ ಚರ್ಚಿಸುವುದಕ್ಕಿಂತ ನಾಯಕನ ಪಾತ್ರವೂ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

"ತಂಡದ ಆಡಳಿತ ಮಂಡಳಿಯ ಬಗ್ಗೆ ನಾವು ಎಷ್ಟೇ ಮಾತನಾಡಿದರೂ, ನಾಯಕ ಕೂಡ ಜವಾಬ್ದಾರಿ ಹೊರಬೇಕು. ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಾಯಕನ ಪಾತ್ರ ಪ್ರಮುಖವಾಗಿರುತ್ತದೆ. ನಾಯಕ ಏನು ಬಯಸುತ್ತಾರೋ ಅಂತಿಮವಾಗಿ ಅದೇ ಮೈದಾನದಲ್ಲಿ ಕಾಣಿಸಿಕೊಳ್ಳುತ್ತದೆ. ತಂಡದ ಆಯ್ಕೆಯಲ್ಲಿ ಸಮತೋಲನ ಇರಬೇಕು. ಹೊಸ ಆಟಗಾರರಿಗೆ ಅವಕಾಶ ನೀಡುವ ಬದಲಾವಣೆಯ ಹಂತದಲ್ಲಿದ್ದೇವೆ ಎಂಬುದು ನನಗೆ ಅರ್ಥವಾಗುತ್ತದೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅನುಭವಕ್ಕೆ ಬಹಳ ಮಹತ್ವವಿದೆ. ಈ ಹಿಂದೆ ಇಂತಹ ಪರಿಸ್ಥಿತಿಗಳನ್ನು ಎದುರಿಸಿರುವ ಆಟಗಾರರ ಅನುಭವ ಅಮೂಲ್ಯವಾದದ್ದು," ಎಂದು ಹೇಳಿದ್ದಾರೆ.