ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವೈಭವ್‌ ಸೂರ್ಯವಂಶಿಯನ್ನು ದೀರ್ಘಾವಧಿ ಬೆಂಚ್‌ ಕಾಯಿಸುತ್ತಿರುವ ಭಾರತಕ್ಕೆ ರವಿ ಶಾಸ್ತ್ರಿ ಎಚ್ಚರಿಕೆ!

ಭಾರತದ ಅಪಾಯಕಾರಿ ಯುವ ಬ್ಯಾಟರ್‌ ವೈಭವ್ ಸೂರ್ಯವಂಶಿ ಅವರ ಆಟದ ಬಗ್ಗೆ ನ್ಯೂಜಿಲೆಂಡ್ ಅಭಿಮಾನಿಗಳೂ ಈಗಾಗಲೇ ವಿಚಾರಿಸುತ್ತಿದ್ದಾರೆ ಎಂದು ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಹೇಳಿದ್ದಾರೆ. ಈ ಯುವ ಆಟಗಾರನ ಅದ್ಭುತ ಫಾರ್ಮ್ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಭಾರತ ತಂಡಕ್ಕೆ ಒತ್ತಾಯಿಸಿದ್ದಾರೆ. ಮೊದಲನೇ ಪಂದ್ಯದಲ್ಲಿ ವೈಭವ್‌ ಬೆಂಚ್‌ ಕಾದಿದ್ದರು.

ವೈಭವ್‌ ಸೂರ್ಯವಂಶಿಗೆ ಚಾನ್ಸ್‌ ನೀಡಬೇಕೆಂದ ರವಿ ಶಾಸ್ತ್ರಿ.

ನವದೆಹಲಿ: ಭಾರತದ ಉದಯೋನ್ಮುಖ ಬ್ಯಾಟ್ಸ್‌ಮನ್‌ 15ರ ವಯಸ್ಸಿನ ವೈಭವ್ ಸೂರ್ಯವಂಶಿಯನ್ನು (Vaibhav Sooryavanshi) ಹೆಚ್ಚು ದಿನಗಳ ಕಾಲ ಬೆಂಚ್‌ನಲ್ಲಿ ಕೂರಿಸಬಾರದು ಎಂದು ಭಾರತ ತಂಡದ ಆಡಳಿತ ಮಂಡಳಿಗೆ ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ (Ravi Shastri) ಸಲಹೆ ನೀಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ವೈಭವ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡದಿರುವುದು ಚರ್ಚೆಗೆ ಕಾರಣವಾಗಿದೆ. ಯುವ ಆಟಗಾರನ ಉತ್ತಮ ಫಾರ್ಮ್ ಕಳೆದುಹೋಗುವ ಮುನ್ನ ಆಡಲು ಅವಕಾಶ ಕಲ್ಪಿಸಬೇಕು ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡ 2026ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರಂಭಿಕ ಜೋಡಿ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಮುಂದುವರಿಸಲು ನಿರ್ಧರಿಸಿದೆ. ನ್ಯೂಜಿಲೆಂಡ್ ವಿರುದ್ಧ ಅಕ್ಟೋಬರ್ 22ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲೂ ಇವರಿಬ್ಬರು ಉತ್ತಮ ಪ್ರದರ್ಶನ ನೀಡಿದರು. ಈ ಮೂಲಕ ವೈಭವ್ ಸತತ ಆರನೇ ಪಂದ್ಯದಲ್ಲಿ ಆಡುವ ಅವಕಾಶದಿಂದ ವಂಚಿತರಾದರು.

ನ್ಯೂಜಿಲೆಂಡ್ ನೀಡಿದ್ದ 226 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ, ಪವರ್‌ಪ್ಲೇನಲ್ಲೇ 94 ರನ್ ಗಳಿಸಿತ್ತು. ಆರಂಭಿಕ ಜೋಡಿಯ ಈ ಸ್ಫೋಟಕ ಆಟ ತಂಡದ ನಿರ್ಧಾರಕ್ಕೆ ಸಮರ್ಥನೆ ನೀಡಿದರೂ, ವೈಭವ್‌ಗೆ ಅವಕಾಶ ನೀಡದಿರುವ ಬಗ್ಗೆ ಚರ್ಚೆಗಳು ಮುಂದುವರಿದಿವೆ.

15 ಬಾಲ್‌ಗಳಲ್ಲಿ 42 ರನ್‌ ಸಿಡಿಸಿ ಇರ್ಫಾನ್‌ ಪಠಾಣ್‌ ದಾಖಲೆಯನ್ನು ಮುರಿದ ನಮನ್‌ ಧೀರ್‌!

2026ರ ಐಪಿಎಲ್‌ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ದಾಖಲೆಯ ಪ್ರದರ್ಶನ ನೀಡಿದ್ದ ವೈಭವ್, ತಮ್ಮ ಪ್ರತಿಭೆಯ ಮೂಲಕ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಜಿಂಬಾಬ್ವೆ ಪ್ರವಾಸದಲ್ಲೂ ಗಮನ ಸೆಳೆದಿದ್ದರು. ಆದರೆ, ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿಯೂ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ.

ನ್ಯೂಜಿಲೆಂಡ್ ಅಭಿಮಾನಿಗಳಿಗೂ ವೈಭವ್ ಬಗ್ಗೆ ಕುತೂಹಲ

ಸೋನಿ ಸ್ಪೋರ್ಟ್ಸ್‌ನಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದ ರವಿ ಶಾಸ್ತ್ರಿ, ನ್ಯೂಜಿಲೆಂಡ್ ಅಭಿಮಾನಿಗಳೂ ವೈಭವ್ ಸೂರ್ಯವಂಶಿ ಆಡುತ್ತಾರೆಯೇ ಎಂದು ವಿಚಾರಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

“ನಿನ್ನೆ(ಗುರುವಾರ) ನಾನು ನದಿಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೆಲವು ನ್ಯೂಜಿಲೆಂಡ್ ಅಭಿಮಾನಿಗಳು, ‘ಆ 15 ವರ್ಷದ ಹುಡುಗ ನಾಳೆ ಆಡುತ್ತಾನೆಯೇ?’ ಎಂದು ನನ್ನನ್ನು ಕೇಳಿದರು. ಆತ ಈಗಾಗಲೇ ಸಾಕಷ್ಟು ಸಮಯ ಬೆಂಚ್‌ನಲ್ಲಿ ಕುಳಿತಿದ್ದಾನೆ. ಆತನ ಉತ್ತಮ ಫಾರ್ಮ್ ಕಳೆದುಹೋಗುವಂತೆ ನೀವು ಬಯಸುವುದಿಲ್ಲ,” ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.

IND vs NZ: 100ನೇ ಟಿ20ಐ ಪಂದ್ಯವನ್ನಾಡಿದ ಅರ್ಷದೀಪ್‌ ಸಿಂಗ್‌ಗೆ ವಿಶೇಷ ಜೆರ್ಸಿ ನೀಡಿದ ಶ್ರೇಯಸ್‌ ಅಯ್ಯರ್‌!

ವೈಭವ್ ಸೂರ್ಯವಂಶಿಯಂತಹ ಪ್ರತಿಭಾವಂತ ಯುವ ಆಟಗಾರನಿಗೆ ಸೂಕ್ತ ಸಮಯದಲ್ಲಿ ಅವಕಾಶ ನೀಡುವುದು ಮುಖ್ಯ ಎಂಬುದು ಶಾಸ್ತ್ರಿ ಅವರ ಅಭಿಪ್ರಾಯವಾಗಿದೆ. ಅನುಭವಿ ಆರಂಭಿಕ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ತಂಡದ ಆಯ್ಕೆ ಸಮರ್ಥನೀಯವಾಗಿದ್ದರೂ, ವೈಭವ್‌ಗೆ ಅವಕಾಶ ಯಾವಾಗ ಸಿಗಲಿದೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ವೈಭವ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಸ್ಯಾಂಟ್ನರ್‌

ಐದು ಪಂದ್ಯಗಳ ಟಿ20ಐ ಸರಣಿಗೂ ಮುನ್ನ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್, ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಸಾಮರ್ಥ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ವೈಭವ್ ಅವರ ಆಟದ ಬಗ್ಗೆ ಎದುರಾಳಿ ತಂಡಗಳಿಗೂ ಅರಿವಿದೆ ಎಂದು ಹೇಳಿರುವ ಸ್ಯಾಂಟ್ನರ್, ಈ ಯುವ ಆಟಗಾರ ಭಾರತ ತಂಡದ ಪರ ಯಾವ ರೀತಿಯ ಪರಿಣಾಮ ಬೀರಬಲ್ಲರು ಎಂಬುದನ್ನು ನ್ಯೂಜಿಲೆಂಡ್ ತಂಡ ಅರ್ಥಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.

“ಭಾರತ ತಂಡದ ಆಟಗಾರರ ಪಟ್ಟಿ ಹಾಗೂ ಅವರ ಹಿಂದಿನ ಸರಣಿಯನ್ನು ಗಮನಿಸಿದರೆ, ವೈಭವ್ ಆಡಿರಲಿಲ್ಲ ಎಂಬುದು ಸ್ಪಷ್ಟ. ಆದರೆ, ಅವರು ಎಷ್ಟು ಉತ್ತಮ ಆಟಗಾರ ಎಂಬುದನ್ನು ನಾವು ಈಗಾಗಲೇ ನೇರವಾಗಿ ನೋಡಿದ್ದೇವೆ,” ಎಂದು ಮಿಚೆಲ್ ಸ್ಯಾಂಟ್ನರ್ ಸುದ್ದಿಗಾರರಿಗೆ ಹೇಳಿದ್ದರು.