ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ (IND vs NZ) ಭಾರತ ತಂಡದ ಆಯ್ಕೆಯ ಬಗ್ಗೆ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದೇಶಿ ನೆಲದಲ್ಲಿ ನಡೆಯುವ ಟೆಸ್ಟ್ ಪಂದ್ಯಗಳಲ್ಲಿ ಪಿಚ್ ಬ್ಯಾಟಿಂಗ್ಗೆ ಹೆಚ್ಚು ಅನುಕೂಲಕರವಾಗಿದ್ದರೂ ವಿಕೆಟ್ ಪಡೆಯಲು ಸಮರ್ಥವಾಗಿರುವ ಒಬ್ಬ ನೈಜ ಸ್ಪಿನ್ನರ್ ತಂಡದಲ್ಲಿರಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಶೇಷವಾಗಿ ವೆಲ್ಲಿಂಗ್ಟನ್ ಟೆಸ್ಟ್ಗೆ ಕುಲ್ದೀಪ್ ಯಾದವ್ ಮತ್ತು ಮಾನವ್ ಸುತಾರ್ ಅವರನ್ನು ಏಕೆ ಪರಿಗಣಿಸಲಿಲ್ಲ ಎಂಬ ಪ್ರಶ್ನೆಯನ್ನು ಗಂಗೂಲಿ ಎತ್ತಿದ್ದಾರೆ. ಇಂತಹ ಪಿಚ್ಗಳಲ್ಲಿ ಸ್ಪಿನ್ನರ್ಗಳು ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಬಲ್ಲರು ಎಂಬುದು ಅವರ ವಾದವಾಗಿದೆ.
ಭಾರತ ತಂಡದ ಬ್ಯಾಟಿಂಗ್ ಪ್ರದರ್ಶನವನ್ನು ಶ್ಲಾಘಿಸಿರುವ ಗಂಗೂಲಿ, ಬೌಲಿಂಗ್ ವಿಭಾಗದಲ್ಲಿ ವಾಷಿಂಗ್ಟನ್ ಸುಂದರ್ ಅವರನ್ನು ಮಾತ್ರ ಸ್ಪಿನ್ನರ್ ಆಗಿ ಕಣಕ್ಕಿಳಿಸಿದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ವಾಷಿಂಗ್ಟನ್ ಸುಂದರ್ ಅವರನ್ನು ಆಲ್ರೌಂಡರ್ ಆಗಿ ಬಳಸಿಕೊಳ್ಳಬಹುದು. ಆದರೆ ತಂಡದಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯವಿರುವ ಸ್ಪೆಷಲಿಸ್ಟ್ ಸ್ಪಿನ್ನರ್ ಕೂಡ ಇರಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.
IND vs NZ: ʻ ಚೆಂಡಿಗೆ ಎಂಜಲು ಬಳಸಲು ಅನುಮತಿ ನೀಡಿʼ-ಐಸಿಸಿಗೆ ಮನವಿ ಮಾಡಿದ ಶುಭಮನ್ ಗಿಲ್!
ಗಂಗೂಲಿ ತಮ್ಮ ಎಕ್ಸ್ ಖಾತೆಯಲ್ಲಿ, "ಈ ಸರಣಿಯಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿದೆ. ವೈಟ್ಬಾಲ್ ಮತ್ತು ರೆಡ್ಬಾಲ್ ಕ್ರಿಕೆಟ್ನಲ್ಲೂ ಬ್ಯಾಟರ್ಗಳ ಆಟ ಅತ್ಯುತ್ತಮವಾಗಿತ್ತು. ಆದರೆ ವಿದೇಶಿ ನೆಲದಲ್ಲಿ ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕಾದರೆ, ಕಾಲ ಕಳೆದಂತೆ ಬ್ಯಾಟಿಂಗ್ಗೆ ಹೆಚ್ಚು ಅನುಕೂಲಕರವಾಗುವ ಪಿಚ್ಗಳಲ್ಲೂ ವಿಕೆಟ್ ಪಡೆಯಬಲ್ಲ ನೈಜ ಸ್ಪಿನ್ನರ್ ತಂಡದಲ್ಲಿರಬೇಕು. ವಾಷಿಂಗ್ಟನ್ ಸುಂದರ್ ಅವರನ್ನು ಆಲ್ರೌಂಡರ್ ಆಗಿ ಆಡಿಸಬಹುದು. ಹಾಗಾದರೆ ಕುಲ್ದೀಪ್ ಯಾದವ್ ಅಥವಾ ಮಾನವ್ ಸುತಾರ್ ಎಲ್ಲಿ?" ಎಂದು ಪ್ರಶ್ನಿಸಿದ್ದಾರೆ.
ವೆಲ್ಲಿಂಗ್ಟನ್ ಟೆಸ್ಟ್ನಲ್ಲಿ ಸ್ಪಿನ್ನರ್ಗಳ ಕೊರತೆ ಚರ್ಚೆ
ಮೊದಲ ಟೆಸ್ಟ್ನಲ್ಲಿ ಭಾರತ ನಾಲ್ವರು ವೇಗದ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ, ಆಕಾಶ್ ದೀಪ್, ಪ್ರಸಿಧ್ ಕೃಷ್ಣ ಮತ್ತು ಅನ್ಶುಲ್ ಕಾಂಬೋಜ್ ಅವರನ್ನು ಕಣಕ್ಕಿಳಿಸಿತ್ತು. ವಾಷಿಂಗ್ಟನ್ ಸುಂದರ್ ಮಾತ್ರ ಸ್ಪಿನ್ನರ್ ಆಗಿದ್ದರು. ಎರಡನೇ ಇನಿಂಗ್ಸ್ನಲ್ಲಿ ಅವರು 35 ಓವರ್ಗಳನ್ನು ಬೌಲ್ ಮಾಡಿ ಒಂದು ವಿಕೆಟ್ ಪಡೆದಿದ್ದರು.
ಕುಲ್ದೀಪ್ ಯಾದವ್ ಆರಂಭದಲ್ಲಿ ಟೆಸ್ಟ್ ಸರಣಿಯ ಭಾರತ ತಂಡದಲ್ಲಿದ್ದರೂ, ವೆಲ್ಲಿಂಗ್ಟನ್ ಪಂದ್ಯಕ್ಕೂ ಮುನ್ನ ಅವರನ್ನು ದೇಶಿ ಕ್ರಿಕೆಟ್ ಆಡಲು ಬಿಡುಗಡೆ ಮಾಡಲಾಗಿತ್ತು. ಇನ್ನು ಮಾನವ್ ಸುತಾರ್ ನ್ಯೂಜಿಲೆಂಡ್ ಪ್ರವಾಸದ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ.
ಶಾಲೆಗೆ ಚಕ್ಕರ್ ಹಾಕಿ ಭಾರತ vs ನ್ಯೂಜಿಲೆಂಡ್ ಟೆಸ್ಟ್ ನೋಡಲ ಬಂದು ತಗಲಾಕಿಕೊಂಡ ವಿದ್ಯಾರ್ಥಿಗಳು! ವಿಡಿಯೊ
ಎರಡನೇ ಟೆಸ್ಟ್ನಲ್ಲಿ ಬದಲಾವಣೆ ಸಾಧ್ಯವೇ?
ವೆಲ್ಲಿಂಗ್ಟನ್ ಟೆಸ್ಟ್ನಲ್ಲಿ 352 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆದಿದ್ದರೂ ಭಾರತ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ನ್ಯೂಜಿಲೆಂಡ್ ಎರಡನೇ ಇನಿಂಗ್ಸ್ನಲ್ಲಿ 5 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.
ಇದೀಗ ನವೆಂಬರ್ 27ರಿಂದ ಕ್ರೈಸ್ಟ್ಚರ್ಚ್ನ ಹೇಗ್ಲಿ ಓವಲ್ ಮೈದಾನದಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದ ಬೌಲಿಂಗ್ ಸಂಯೋಜನೆಯಲ್ಲಿ ಬದಲಾವಣೆ ಮಾಡಲಾಗುತ್ತದೆಯೇ ಎಂಬ ಕುತೂಹಲ ಮೂಡಿದೆ. ಗಂಗೂಲಿ ಅವರ ಟೀಕೆಯ ಬೆನ್ನಲ್ಲೇ ಸ್ಪೆಷಲಿಸ್ಟ್ ಸ್ಪಿನ್ನರ್ ಆಯ್ಕೆಯ ವಿಚಾರ ಮತ್ತೆ ಚರ್ಚೆಗೆ ಬಂದಿದೆ.