ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ʻಅಹಮದಬಾದ್‌ ಪ್ರೇಕ್ಷಕರನ್ನು ಮೌನಗೊಳಿಸುತ್ತೇವೆʼ-ಸ್ಯಾಂಟ್ನರ್‌ ಹೇಳಿಕೆಗೆ ಸೂರ್ಯ ತಿರುಗೇಟು!

2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೂ ಮುನ್ನ ಕಿವೀಸ್‌ ಕ್ಯಾಪ್ಟನ್‌ ಮಿಚೆಲ್‌ ಸ್ಯಾಂಟ್ನರ್‌ ಅವರು, ಅಹಮದಾಬಾದ್‌ನಲ್ಲಿ ಭಾರತೀಯ ಅಭಿಮಾನಿಗಳನ್ನು ಮೌನಗೊಳಿಸುತ್ತೇವೆಂದು ಹೇಳಿಕೆ ನೀಡಿದ್ದರು. ಇದಕ್ಕೆ ಸೂರ್ಯಕುಮಾರ್‌ ಯಾದವ್‌ ತಕ್ಕ ಉತ್ತರ ನೀಡಿದ್ದಾರೆ.

ಟಿ20 ವಿಶ್ವಕಪ್‌ ಫೈನಲ್‌ಗೂ ಮುನ್ನ ಸೂರ್ಯಕುಮಾರ್‌ ಹೇಳಿಕೆ.

ಅಹಮದಾಬಾದ್: ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಫೈನಲ್‌ ಪಂದ್ಯದಲ್ಲಿ (IND vs NZ) ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಈ ಪಂದ್ಯ ಮಾರ್ಚ್‌ 8 ರಂದು ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ತಂಡ ದಾಖಲೆಯ ಮೂರನೇ ಬಾರಿ ಚುಟುಕು ವಿಶ್ವಕಪ್‌ ಗೆಲ್ಲುವ ಗುರಿಯನ್ನು ಹೊಂದಿದ್ದರೆ, ನ್ಯೂಜಿಲೆಂಡ್ ತನ್ನ ಚೊಚ್ಚಲ ಪ್ರಶಸ್ತಿಗಾಗಿ ಎದುರು ನೋಡುತ್ತಿದೆ. ಈ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್‌ ಟೀಮ್ ಇಂಡಿಯಾದ ಬಗ್ಗೆ ಕಟುವಾದ ಹೇಳಿಕೆಯನ್ನು ನೀಡಿದ್ದರು. ಈ ಬಗ್ಗೆ ಇದೀಗ ಭಾರತದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಪ್ರತಿಕ್ರಿಯಿಸಿದ್ದಾರೆ.

2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌ ನೀಡಿದ್ದ ಹೇಳಿಕೆಯನ್ನು ನೆನಪಿಸಿಕೊಂಡ ಕಿವೀಸ್ ನಾಯಕ ಮಿಚೆಲ್ ಸ್ಯಾಂಟ್ನರ್, ಅಹಮದಾಬಾದ್‌ನಲ್ಲಿ 100,000 ಕ್ಕೂ ಹೆಚ್ಚು ಪ್ರೇಕ್ಷಕರನ್ನು ಮೌನಗೊಳಿಸುವುದು ತಮ್ಮ ಗುರಿಯಾಗಿದೆ ಎಂದು ಹೇಳಿದರು. ಸ್ಯಾಂಟ್ನರ್ ಅವರ ಮೌನದ ಹೇಳಿಕೆಯ ಬಗ್ಗೆ ಸೂರ್ಯಕುಮಾರ್ ಅವರನ್ನು ಕೇಳಿದಾಗ, ಅವರು ಹಾಸ್ಯಮಯವಾಗಿ ಉತ್ತರಿಸಿದರು, "ಎಲ್ಲರೂ ಒಂದೇ ಸಾಲನ್ನು ಪುನರಾವರ್ತಿಸುತ್ತಿದ್ದಾರೆ. ಹೊಸದನ್ನು ಹೇಳಿ," ಎಂದು ನಕ್ಕರು.

IND vs NZ: 2026ರ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯ ಗೆಲ್ಲುವ ತಂಡ ಯಾವುದು? ಲೆಕ್ಕಾಚಾರ ಏನು ಹೇಳುತ್ತೆ?

ತಂಡದಲ್ಲಿನ ವಾತಾವರಣವು ತುಂಬಾ ಶಾಂತವಾಗಿದ್ದು, ತವರು ನೆಲದಲ್ಲಿ ಇಂತಹ ಉತ್ತಮ ತಂಡವನ್ನು ಮುನ್ನಡೆಸುವುದು ಅವರಿಗೆ ವಿಶೇಷ ಅನುಭವವಾಗಿದೆ ಎಂದು ಸೂರ್ಯ ಹೇಳಿದರು. 2026ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಸೂರ್ಯ, ಫೈನಲ್‌ನಲ್ಲಿ ಒತ್ತಡ ಇರುತ್ತದೆ ಎಂದು ಒಪ್ಪಿಕೊಂಡರು, ಆದರೆ ಅವರು ದೊಡ್ಡ ವೇದಿಕೆಯನ್ನು ಆನಂದಿಸಲು ಬಯಸುತ್ತಾರೆ.

"ಒಬ್ಬ ನಾಯಕನಾಗಿ ಒತ್ತಡ ಇರುತ್ತದೆ, ನಾನು ಅದನ್ನು ನಿರಾಕರಿಸಲಾರೆ. ನಾವು ಭಾರತದಲ್ಲಿ ವಿಶ್ವಕಪ್ ಫೈನಲ್ ಆಡುತ್ತಿರುವುದರಿಂದ ಖಂಡಿತವಾಗಿಯೂ ಹೆಚ್ಚುವರಿ ಒತ್ತಡ ಮತ್ತು ಉತ್ಸಾಹವಿದೆ," ಎಂದು ಟೀಮ್‌ ಇಂಡಿಯಾ ನಾಯಕ ಸೂರ್ಯಕುಮಾರ್‌ ಯಾದವ್‌ ತಿಳಿಸಿದ್ದಾರೆ.

ʻನಿಮ್ಮ ರೀತಿ ಫೀಲ್ಡಿಂಗ್‌ನಿಂದ ರಾಷ್ಟ್ರೀಯ ತಂಡಕ್ಕೆ ಆಡಿಲ್ಲʼ: ಮೊಹಮ್ಮದ್‌ ಕೈಫ್‌ಗೆ ಮೊಹಮ್ಮದ್‌ ಆಮಿರ್‌ ತಿರುಗೇಟು!

ಟಿ20ಐ ಸರಣಿಯಲ್ಲಿ ನ್ಯೂಜಿಲೆಂಡ್‌ ತಂಡವನ್ನು ಮಣಿಸಿದ್ದ ಭಾರತ

ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ಭಾರತ ದ್ವಿಪಕ್ಷೀಯ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 4-1 ಅಂತರದಿಂದ ಸೋಲಿಸಿತ್ತು. ನ್ಯೂಜಿಲೆಂಡ್‌ನ ವಿಶ್ವಕಪ್ ಪಂದ್ಯಗಳನ್ನು ಟಿವಿಯಲ್ಲಿ ವೀಕ್ಷಿಸಿಲ್ಲ ಎಂದು ಸೂರ್ಯ ಒಪ್ಪಿಕೊಂಡರೂ, ಎದುರಾಳಿಗಳ ಬಲದ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ.

"ನಾನು ಅವರ ಟಿ20 ವಿಶ್ವಕಪ್ ಪಂದ್ಯಗಳನ್ನು ಟಿವಿಯಲ್ಲಿ ವೀಕ್ಷಿಸಿಲ್ಲ. ನಾವು ಇತ್ತೀಚೆಗೆ ಅವರ ವಿರುದ್ಧ ಆಡಿದ್ದೇವೆ ಮತ್ತು ನಾವು ಎದುರಿಸಿದ್ದು ಅದೇ ತಂಡ. ಅವರು ಉತ್ತಮ ಕ್ರಿಕೆಟ್ ಆಡುತ್ತಿದ್ದಾರೆ ಮತ್ತು ನಾವು ಕೂಡ ಆಡುತ್ತಿದ್ದೇವೆ, ಆದ್ದರಿಂದ ಇದು ಉತ್ತಮ ಪಂದ್ಯವಾಗಿರುತ್ತದೆ," ಎಂದು ಸೂರ್ಯಕುಮಾರ್‌ ಹೇಳಿದ್ದಾರೆ.



ಐಸಿಸಿ ವೈಟ್-ಬಾಲ್ ಟೂರ್ನಿಯ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗುತ್ತಿರುವುದು ಇದು ಸತತ ಎರಡನೇ ವರ್ಷ. ಈ ಎರಡೂ ತಂಡಗಳು ಈ ಹಿಂದೆ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟೀಮ್‌ ಇಂಡಿಯಾ ಗೆದ್ದು ಚಾಂಪಿಯನ್‌ ಆಗಿತ್ತು.