ನವದೆಹಲಿ: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ (IND vs NZ) ನಡುವಣ ಐದು ಪಂದ್ಯಗಳ ಟಿ20ಐ ಸರಣಿ ನಡೆಯುತ್ತಿದೆ. ಮೂರು ಪಂದ್ಯಗಳ ಅಂತ್ಯಕ್ಕೆ ಭಾರತ ತಂಡ 3-0 ಅಂತರದಲ್ಲಿ ಟಿ20ಐ ಸರಣಿಯನ್ನು ವಶಪಡಿಸಿಕೊಂಡಿದೆ. ಇದರ ನಡುವೆ ಟೀಮ್ ಇಂಡಿಯಾ ಕ್ಯಾಂಪ್‌ನಿಂದ ಕಹಿ ಸುದ್ದಿಯೊಂದು ಹೊರ ಬಿದ್ದಿದೆ. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ (Tilak Verma), ಟಿ20ಐ ಸರಣಿಯ ಕೊನೆಯ ಎರಡೂ ಪಂದ್ಯಗಳಿಂದಲೂ ಹೊರ ಬಿದಿದ್ದಾರೆ. ಆದರೆ, ಅವರು 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಗೂ ಮುನ್ನ ಭಾರತ ತಂಡವನ್ನು ಸೇರ್ಪಡೆಯಾಗಲಿದ್ದಾರೆಂದು ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಹೈದರಾಬಾದ್ ಬ್ಯಾಟ್ಸ್‌ಮನ್ ರಾಜ್‌ಕೋಟ್‌ನಲ್ಲಿ ಈ ತಿಂಗಳ ಆರಂಭದಲ್ಲಿ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿರುವಾಗ ಗಾಯಕ್ಕೆ ತುತ್ತಾಗಿದ್ದರು. ಅವರಿಗೆ ತೀವ್ರವಾದ ವೃಷಣ ನೋವು ಉಂಟಾಗಿತ್ತು. ಬಳಿಕ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು, ಇದೀಗ ಅವರು ಬೆಂಗಳೂರಿನ ಹೊರವಲಯದಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ. ದೈಹಿಕ ಫಿಟ್‌ನೆಸ್ ಅನ್ನು ಅವರು ಆರಂಭಿಸಿದ್ದಾರೆಂದು ಬಿಸಿಸಿಐ ಸೋಮವಾರ ಖಚಿತಪಡಿಸಿದೆ. ಅವರು ಸಂಪೂರ್ಣ ಫಿಟ್‌ನೆಸ್‌ಗೆ ಮರಳಲು ಇನ್ನಷ್ಟು ಸಮಯದ ಅಗತ್ಯವಿದೆ, ಹಾಗಾಗಿ ನ್ಯೂಜಿಲೆಂಡ್ ವಿರುದ್ಧದ ಸಂಪೂರ್ಣ ಸರಣಿಗೆ ಅಲಭ್ಯರಾಗಿದ್ದಾರೆಂದು ಬಿಸಿಸಿಐ ತಿಳಿಸಿದೆ.
ಅಭಿಷೇಕ್, ಸೂರ್ಯ ಬ್ಯಾಟಿಂಗ್ ಅಬ್ಬರ; ಟಿ20 ಸರಣಿ ವಶಪಡಿಸಿಕೊಂಡ ಭಾರತ
2026ರ ಐಸಿಸಿ ಟಿ20 ವಿಶ್ವಕಪ್ಟ ಟೂರ್ನಿಯ ಅಭ್ಯಾಸ ಪಂದ್ಯಗಳ ನಿಮಿತ್ತ ಅವರು ಪೂರ್ಣ ಫಿಟ್ನೆಸ್ ಸಾಧಿಸಿದ ನಂತರ ಫೆಬ್ರವರಿ 3 ರಂದು ಮುಂಬೈನಲ್ಲಿ ಭಾರತ ತಂಡದ ಜೊತೆಗೆ ತಿಲಕ್ ವರ್ಮಾ ಸೇರ್ಪಡೆಯಾಗಲಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟಿ20ಐ ಸರಣಿಯ ತಿಲಕ್ ವರ್ಮಾ ಬದಲು ಶ್ರೇಯಸ್ ಅಯ್ಯರ್ ಆಡುತ್ತಿದ್ದಾರೆ.
ಈ ಹಿಂದೆ ತಿಲಕ್ ವರ್ಮಾ ಅವರು ಕಿವೀಸ್ ವಿರುದ್ಧದ ಟಿ20ಐ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಆಡಲಿದ್ದಾರೆಂದು ಹೇಳಲಾಗಿತ್ತು. ಆದರೆ, ಅವರು ಸಂಪೂರ್ಣ ಫಿಟ್‌ನೆಸ್‌ಗೆ ಮರಳಲು ಇನ್ನಷ್ಟು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಅಂದ ಹಾಗೆ ತಿಲಕ್ ವರ್ಮಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ. ಇದು ಅವರ ಫಿಟ್ನೆಸ್ ಅನ್ನು ಅವಲಂಬಿಸಿದೆ. ತಿಲಕ್ ವರ್ಮಾ ಅವರ ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಆಡುತ್ತಿದ್ದು, ಶ್ರೇಯಸ್ ಅಯ್ಯರ್‌ಗೆ ಇನ್ನೂ ಪ್ಲೇಯಿಂಗ್ xiನಲ್ಲಿ ಅವಕಾಶ ಸಿಕ್ಕಿಲ್ಲ.
2026ರ ಪದ್ಮ ಪ್ರಶಸ್ತಿ ಪ್ರಕಟ: ರೋಹಿತ್ ಶರ್ಮ, ಹರ್ಮನ್‌ಪ್ರೀತ್ ಕೌರ್‌ಗೆ ಗೌರವ
ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್
ತಿಲಕ್ ವರ್ಮಾ ಅವರ ಮೂರನೇ ಕ್ರಮಾಂಕದಲ್ಲಿ ಸಿಕ್ಕ ಅವಕಾಶವನ್ನು ಇಶಾನ್ ಕಿಶನ್ ಸಂಪೂರ್ಣವಾಗಿ ಬಳಿಸಿಕೊಂಡಿದ್ದಾರೆ. ಅವರು ಆಡಿದ ಮೂರು ಪಂದ್ಯಗಳಿಂದ 224ರ ಸ್ಟ್ರೈಕ್ ರೇಟ್‌ನಲ್ಲಿ 112 ರನ್‌ಗಳನ್ನು ಬಾರಿಸಿದ್ದಾರೆ. ಎರಡನೇ ಟಿ20ಐ ಪಂದ್ಯದಲ್ಲಿ ಅವರು 32 ಎಸೆತಗಳಲ್ಲಿ 11 ಬೌಂಡರಿಗಳು ಹಾಗೂ 4 ಸಿಕ್ಸರ್‌ಗಳೊಂದಿಗೆ 76 ರನ್‌ಗಳನ್ನು ಬಾರಿಸಿದ್ದಾರೆ. ಆ ಮೂಲಕ ಭಾರತ ತಂಡ ಕಿವೀಸ್ ನೀಡಿದ್ದ 209 ರನ್‌ಗಳನ್ನು ಗುರಿಯನ್ನು ಕೇವಲ 15.2 ಓವರ್‌ಗಳ ತಲುಪಿತ್ತು. ಇದೀಗ ಇಶಾನ್ ಕಿಶನ್ ಬ್ಯಾಟಿಂಗ್‌ನಿಂದ ತಿಲಕ್ ವರ್ಮಾ ತಂಡಕ್ಕೆ ಮರಳಿದರೆ ಟೀಮ್ ಮ್ಯಾನೇಜ್‌ಮೆಂಟ್‌ಗೆ ಆಯ್ಕೆಯ ಸಂಬಂಧ ತಲೆ ನೋವು ಉಂಟಾಗಲಿದೆ.