ಕೊಲಂಬೊ: ಇಲ್ಲಿನ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನದ (IND vs PAK) ನಡುವೆ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಹೈ ವೋಲ್ಟೇಜ್ ಪಂದ್ಯ ನಡೆಯುತ್ತಿದೆ. ಪಂದ್ಯ ನಡೆಯುವ ಕುರಿತು ಉಂಟಾಗಿದ್ದ ಹಲವು ಗೊಂದಲಗಳ ನಡುವೆಯೂ, ಅಂತಿಮವಾಗಿ ಇಂಡೋ-ಪಾಕ್ ಪಂದ್ಯದಲ್ಲಿ ಬದ್ಧ ವೈರಿಗಳು ಸೆಣೆಸಾಟ ನಡೆಸುತ್ತಿವೆ. ಇನ್ನೂ ಏಷ್ಯಾ ಕಪ್ ಟೂರ್ನಿಯಲ್ಲಿ ವಿವಾದಕ್ಕೆ ಮತ್ತು ಕ್ರೀಡಾ ಸೌಹಾರ್ದತೆಯ ಚರ್ಚೆಗೆ ಗ್ರಾಸವಾಗಿದ್ದ ಹ್ಯಾಂಡ್ ಶೇಕ್ (IND vs PAK Handshake Row) ಬಿಸಿ ಇದೀಗ ಚುಟುಕು ವಿಶ್ವಕಪ್ ಟೂರ್ನಿಗೂ ತಗುಲಿದೆ.
ಟಾಸ್ ವೇಳೆ ಎಲ್ಲರ ಕಣ್ಣು ಉಭಯ ತಂಡಗಳ ನಾಯಕರ ಮೇಲೆ ನೆಟ್ಟಿತ್ತು. ಹ್ಯಾಂಡ್ ಶೇಕ್ ವಿವಾದ ಮುಂದುವರಿಯುತ್ತಾ? ಅಥವಾ ಈ ಪಂದ್ಯದಲ್ಲಾದರೂ ಬದ್ಧ ವೈರಿ ಪಡೆಯ ನಾಯಕರು ಕೈ ಕುಲುಕುತ್ತಾರೋ? ಎನ್ನುವ ಸಹಜ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಪಾಕ್ ನಾಯಕ ಸಲ್ಮಾನ್ ಆಘಾ ಜೊತೆ ಕೈ ಕುಲುಕಲು ನಿರಾಕರಿಸಿದ್ದಾರೆ.
IND vs PAK: ಪಾಕಿಸ್ತಾನ ಎದುರು ಟಾಸ್ ಸೋತ ಭಾರತ ಮೊದಲ ಬ್ಯಾಟಿಂಗ್, ಅಭಿಷೇಕ್ ಶರ್ಮಾ ಇನ್!
ಪಂದ್ಯಕ್ಕೂ ಮುನ್ನವೇ ಈ ಬಗ್ಗೆ ಸುಳಿವು ನೀಡಿದ್ದ ಸೂರ್ಯ
ಇನ್ನೂ, ಪ್ರೀ ಮ್ಯಾಚ್ ಪ್ರೆಸ್ ಕಾನ್ಫೆರೆನ್ಸ್‌ನಲ್ಲಿ ಈ ಬಗ್ಗೆ ಮಾತನಾಡಿದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಪಹಲ್ಗಾಮ್ ದಾಳಿಯ ಬಳಿಕ ಟೀಮ್ ಇಂಡಿಯಾ ಕೈಗೊಂಡಿದ್ದ ನಿಲುವನ್ನು ಪುನಃ ಹೇಳಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಅವರು, "ನೀವು 24 ಗಂಟೆಗಳಲ್ಲಿ ನೋಡುತ್ತೀರಿ. 24 ಗಂಟೆಗಳು ಕಾಯಿರಿ. ಚೆನ್ನಾಗಿ ತಿನ್ನಿರಿ, ಚೆನ್ನಾಗಿ ನಿದ್ದೆ ಮಾಡಿ, ನಾಳೆ ನೋಡೋಣ," ಎಂದು ಹೇಳಿದ್ದರು. ಅದರಂತೆ ಇದೀಗ ಹಸ್ತಲಾಘವ ಮಾಡಲು ನಿರಾಕರಿಸಿದ್ದಾರೆ.
ಭಾರತದ ನಿಲುವನ್ನು ಟೀಕಿಸಿದ ಮಾಂಜ್ರೇಕರ್
ಟೀಮ್ ಇಂಡಿಯಾದ ಈ ನಡೆಯನ್ನು ತೀವ್ರವಾಗಿ ಟೀಕಿಸಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್, ಹ್ಯಾಂಡ್ ಶೇಕ್ ಮಾಡದೇ ಇರುವ ಭಾರತ ತಂಡದ ಈ ನಿಲುವು ಮೂರ್ಖತನ. ಪಾಕಿಸ್ತಾನದ ವಿರುದ್ಧದ ಪಂದ್ಯಗಳನ್ನಾಡುವುದು ಸಂಪೂರ್ಣವಾಗಿ ನಿಲ್ಲಿಸಬೇಕು ಅಥವಾ ಕ್ರೀಡಾ ಸೌಹಾರ್ದತೆಯನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.
ಈ ಕುರಿತು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಾಂಜ್ರೇಕರ್, ಭಾರತ ಆರಂಭಿಸಿರುವ ಈ 'ಕೈ ಕುಲುಕಬಾರದು' ಎನ್ನುವ ಸಂಪ್ರದಾಯ ತುಂಬಾ ಮೂರ್ಖತನದ ಕೆಲಸ. ನಮ್ಮಂತಹ ರಾಷ್ಟ್ರಕ್ಕೆ ಇದು ಸೂಕ್ತವಲ್ಲ. ಆಟದ ಉತ್ಸಾಹದಲ್ಲಿ ಸರಿಯಾಗಿ ಆಟವಾಡಿ ಅಥವಾ ಆಡಬೇಡಿ" ಎಂದು ಮಾಂಜ್ರೇಕರ್ ಬರೆದುಕೊಂಡಿದ್ದಾರೆ.
ಅಭಿಷೇಕ್ ಮತ್ತು ಕುಲ್‌ದೀಪ್ ಕಮ್‌ಬ್ಯಾಕ್
ಬಹುನಿರೀಕ್ಷಿತ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಆದಾಗ್ಯೂ, ನಾಯಕ ಸೂರ್ಯಕುಮಾರ್ ಯಾದವ್ ಯಾವುದೇ ಆತಂಕವಿಲ್ಲದೆ, 'ಮೊದಲು ಬ್ಯಾಟ್ ಮಾಡಲು ಸಂತೋಷಪಡುತ್ತಿದ್ದೇನೆ' ಎಂದರು. ಟಾಸ್ ಗೆದ್ದಿದ್ದರೆ, ನಾನೇ 'ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆ' ಎಂದು ಅವರು ಹೇಳಿದರು.
ಇದರ ನಡುವೆ ಭಾರತ ತಂಡ ತನ್ನ ಆಡುವ XIರ ಬಳಗದಲ್ಲಿ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ. ಅಭಿಷೇಕ್ ಶರ್ಮಾ ಮತ್ತು ಕುಲ್‌ದೀಪ್ ಯಾದವ್ ತಂಡಕ್ಕೆ ಮರಳಿರುವುದರಿಂದ ಸಂಜು ಸ್ಯಾಮ್ಸನ್ ಮತ್ತು ಅರ್ಷದೀಪ್ ಸಿಂಗ್ ತಂಡದಿಂದ ಹೊರಗುಳಿದಿದ್ದಾರೆ.