ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಎರಡನೇ ದಿನ ಸ್ಪಿನ್ನರ್‌ಗಳ ಮ್ಯಾಜಿಕ್, ದಕ್ಷಿಣ ಆಫ್ರಿಕಾಗೆ ಕಹಿ, ಭಾರತಕ್ಕೆ ಸಿಹಿ!

India vs South Africa 1st Test Day 2 Highlights: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಮೊದಲನೇ ಟೆಸ್ಟ್‌ ಪಂದ್ಯ ಕೇವಲ ಮೂರೇ ದಿನಗಳಿಗೆ ಮುಗಿಯುವ ಮುನ್ಸೂಚನೆ ಸಿಕ್ಕಿದೆ. ಎರಡನೇ ದಿನ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಿದ್ದಾರೆ. ಇದರ ಪರಿಣಾಮ ಎರಡೂ ತಂಡಗಳಿಂದ ಪ್ರಥಮ ಇನಿಂಗ್ಸ್‌ನಲ್ಲಿ ಕನಿಷ್ಠ 200 ರನ್‌ಗಳನ್ನು ಕಲೆ ಹಾಕಲು ಸಾಧ್ಯವಾಗಲಿಲ್ಲ. ಆದರೆ, ಎರಡನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ತಂಡ, 93 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಎರಡನೇ ದಿನ ದಕ್ಷಿಣ ಆಫ್ರಿಕಾದ 4 ವಿಕೆಟ್‌ ಕಬಳಿಸಿದ ರವೀಂದ್ರ ಜಡೇಜಾ.

ಕೋಲ್ಕತಾ: ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಅಲ್ಪ ಮುನ್ನಡೆ ಪಡೆದರೂ ರವೀಂದ್ರ ಜಡೇಜಾ (Ravindra jadeja) ಸ್ಪಿನ್‌ ಮೋಡಿಯ ಸಹಾಯದಿಂದ ಮೊದಲನೇ ಟೆಸ್ಟ್‌ ಪಂದ್ಯದ (IND vs SA 1st Test) ಎರಡನೇ ದಿನವೂ ದಕ್ಷಿಣ ಆಫ್ರಿಕಾ ಎದುರು ಪ್ರಾಬಲ್ಯ ಸಾಧಿಸಿದೆ. ವಿಶೇಷವಾಗಿ ಎರಡನೇ ದಿನ ಎರಡೂ ತಂಡಗಳ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಿದರು. ಹರಿಣ ಪಡೆ ಪರ ಸೈಮನ್‌ ಹಾರ್ಮರ್‌ (Simon Harmer) 4 ವಿಕೆಟ್‌ ಕಿತ್ತರೆ, ಭಾರತದ ಪರ ಜಡೇಜಾ 4 ವಿಕೆಟ್‌ ಕಬಳಿಸಿದ್ದಾರೆ. ಎರಡನೇ ದಿನ ಉಭಯ ತಂಡಗಳ ಒಟ್ಟು 16 ವಿಕೆಟ್‌ಗಳು ಪತನವಾಗಿದ್ದು, ಆಘಾತಕಾರಿ ಸಂಗತಿಯಾಗಿದೆ. ಇದರ ಪರಿಣಾಮವಾಗಿ ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನಿಂಗ್ಸ್‌ ಆಡಲು ಸಾಧ್ಯವಾಗಲಿಲ್ಲ. ಹಾಗಾಗಿ ಕೋಲ್ಕತಾ ಟೆಸ್ಟ್‌ ಪಂದ್ಯ ಮೂರನೇ ದಿನವೇ ಅಂತ್ಯವಾಗುವ ಲಕ್ಷಣಗಳು ಎದ್ದು ಕಾಣುತ್ತಿವೆ.

ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ಒಂದು ವಿಕೆಟ್‌ ನಷ್ಟಕ್ಕೆ 37 ರನ್‌ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿದ ಭಾರತ ತಂಡ, ದೊಡ್ಡ ಮೊತ್ತವನ್ನು ಕಲೆ ಹಾಕಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಸೈಮನ್‌ ಹಾರ್ಮರ್‌ (30ಕ್ಕೆ 4) ಅವರ ಸ್ಪಿನ್‌ ಮೋಡಿಗೆ ನಲುಗಿ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 62.2 ಓವರ್‌ಗಳಿಗೆ 189 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ 159 ರನ್‌ಗಳಿಗೆ ಆಲ್‌ಔಟ್‌ ಆಗಿದ್ದ ದಕ್ಷಿಣ ಆಫ್ರಿಕಾ ಎದುರು ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 30 ರನ್‌ಗಳ ಅಲ್ಪ ಮುನ್ನಡೆಯನ್ನು ಪಡೆದಿತ್ತು.

IND vs SA: 5 ವಿಕೆಟ್‌ ಸಾಧನೆ ಮಾಡಿ ವಿಶೇಷ ದಾಖಲೆ ಬರೆದ ಜಸ್‌ಪ್ರೀತ್‌ ಬುಮ್ರಾ!

ಭಾರತದ ಬ್ಯಾಟಿಂಗ್‌ ವೈಫಲ್ಯ

ಇಲ್ಲಿನ ಪಿಚ್‌ಗೆ ತಕ್ಕಂತೆ ಬ್ಯಾಟ್‌ ಮಾಡುವಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಕ್ರೀಸ್‌ಗೆ ಬಂದ ನಾಯಕ ಶುಭಮನ್‌ ಗಿಲ್‌ ಕೇವಲ 4 ರನ್‌ ಗಳಿಸಿ ರಿಟೈರ್‌ ಹರ್ಟ್‌ ಆಗಿ ಪೆವಿಲಿಯನ್‌ಗೆ ಮರಳಿದರು. ನಂತರ ಜೊತೆಯಾದ ಕೆಎಲ್‌ ರಾಹುಲ್‌ ಹಾಗೂ ವಾಷಿಂಗ್ಟನ್‌ ಸುಂದರ್‌ 57 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆದರೆ, 29 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದ ವಾಷಿಂಗ್ಟನ್‌ ಸುಂದರ್‌, ಸೈಮನ್‌ ಹಾರ್ಮರ್‌ಗೆ ವಿಕೆಟ್‌ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ರಾಹುಲ್‌, 39 ರನ್‌ ಗಳಿಸಿದ ಬಳಿಕ ಹಾರ್ಮರ್‌ ಎಸೆತಕ್ಕೆ ಶರಣಾದರು. ಮಧ್ಯಮ ಕ್ರಮಾಂಕದಲ್ಲಿ ರಿಷಭ್‌ ಪಂತ್‌ (27) ಹಾಗೂ ರವೀಂದ್ರ ಜಡೇಜಾ (27) ಅಲ್ಪ ಪ್ರತಿರೋಧ ತೋರಿದ್ದು ಬಿಟ್ಟರೆ, ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್‌ ದೀರ್ಘಾವಧಿ ಕ್ರೀಸ್‌ನಲ್ಲಿ ಉಳಿಯಲಿಲ್ಲ.

ದಕ್ಷಿಣ ಆಫ್ರಿಕಾ ಪರ ಸ್ಪಿನ್‌ ಮ್ಯಾಜಿಕ್‌ ಮಾಡಿದ ಸೈಮನ್‌ ಹಾರ್ಮರ್‌ 30 ರನ್‌ ನೀಡಿ 4 ವಿಕೆಟ್‌ ಕಿತ್ತರೆ, ಮಾರ್ಕೊ ಯೆನ್ಸನ್‌ 35 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು.



ರವೀಂದ್ರ ಜಡೇಜಾ ಸ್ಪಿನ್‌ ಮೋಡಿಗೆ ಆಫ್ರಿಕಾ ತತ್ತರ

ನಂತರ ಅಲ್ಪ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ರವೀಂದ್ರ ಜಡೇಜಾ ಹಾಗೂ ಕುಲ್ದೀಪ್‌ ಯಾದವ್‌ ತಮ್ಮ ಸ್ಪಿನ್‌ ಮೋಡಿಯಿಂದ ಕಾಟ ನೀಡಿದರು. ಆ ಮೂಲಕ ಎರಡನೇ ದಿನದಾಟದ ಅಂತ್ಯಕ್ಕೆ ಹರಿಣ ಪಡೆ, 35 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 93 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ 63 ರನ್‌ಗಳ ಮುನ್ನಡೆಯನ್ನು ಪಡೆದಿದೆ.

ಭಾರತದ ಪರ ರವೀಂದ್ರ ಜಡೇಜಾ 4 ವಿಕೆಟ್‌ ಕಿತ್ತರೆ, ಕುಲ್ದೀಪ್‌ ಯಾದವ್‌ 2 ವಿಕೆಟ್‌ಗಳನ್ನು ತೆಗೆದುಕೊಂಡಿದ್ದಾರೆ. ಎರಡನೇ ದಿನ ಭಾರತದ ಬೌಲಿಂಗ್‌ ದಾಳಿಯನ್ನು ಮೆಟ್ಟಿ ನಿಂತ ತೆಂಬಾ ಬವೂಮಾ ಅಜೇಯ 29 ರನ್‌ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇವರ ಜೊತೆ ಮತ್ತೊಂದು ತುದಿಯಲ್ಲಿ ಕಾರ್ಬಿನ್‌ ಬಾಷ್‌ ಇದ್ದಾರೆ.

IND vs SA: ಸಾಯಿ ಸುದರ್ಶನ್‌ ಕೈಬಿಟ್ಟ ನಿರ್ಧಾರದಲ್ಲಿ ಅರ್ಥವಿಲ್ಲ; ದೊಡ್ಡ ಗಣೇಶ್ ಆಕ್ರೋಶ

ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ ವೈಫಲ್ಯ

ಎರಡನೇ ದಿನ ತೆಂಬಾ ಬವೂಮಾ ಬಿಟ್ಟರೆ ಇನ್ನುಳಿದ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಏಡೆನ್‌ ಮಾರರ್ಕ್ರಮ್‌, ರಯಾನ್‌ ರಿಕೆಲ್ಟನ್‌, ವಿಯಾನ್‌ ಮುಲ್ಡರ್‌, ಟೋನಿ ಡಿ ಜಾರ್ಜಿ, ಟ್ರಿಸ್ಟನ್‌ ಸ್ಟಬ್ಸ್‌, ಕೈಲ್‌ ವಾರ್ನೆನ್‌ ಬಹುಬೇಗ ವಿಕೆಟ್‌ ಒಪ್ಪಿಸಿದರು.