ಗುವಾಹಟಿ: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ತಾಳ್ಮೆಯ ಬ್ಯಾಟಿಂಗ್ ನೆರವಿನಿಂದ ಎರಡನೇ ಟೆಸ್ಟ್ ಪಂದ್ಯದ (IND vs SA) ಪ್ರಥಮ ಇನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಕೊನೆಯ ಸೆಷನ್‌ನಲ್ಲಿ ಕುಲ್ದೀಪ್ ಯಾದವ್ (Kuldeep Yadav) ಸೇರಿದಂತೆ ಭಾರತ ತಂಡದ ಬೌಲರ್‌ಗಳು ಆಘಾತ ನೀಡಿದರು. 166 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಹರಿಣ ಪಡೆ, ಬಳಿಕ ಕೊನೆಯ ಸೆಷನ್‌ನಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇದರೊಂದಿಗೆ ಭಾರತ ತಂಡ (India) ಕಮ್‌ಬ್ಯಾಕ್ ಮಾಡಿದೆ. ಮೊದಲನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 81.5 ಓವರ್‌ಗಳಿಗೆ 247 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿದೆ.
ಇಲ್ಲಿನ ಬರ್ಸಪರ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡ, ಉತ್ತಮ ಆರಂಭ ಪಡೆದಿತ್ತು. ಏಡೆನ್ ಮಾರ್ಕ್ರಮ್ ಹಾಗೂ ರಯಾನ್ ರಿಕೆಲ್ಟನ್ ಅವರು ಮುರಿಯದ ಮೊದಲನೇ ಮೊದಲನೇ ವಿಕೆಟ್‌ಗೆ 81 ರನ್‌ಗಳನ್ನು ಕಲೆ ಹಾಕಿದ್ದರು ಹಾಗೂ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟಿದ್ದರು. ಒಂದು ತುದಿಯಲ್ಲಿ ತಾಳ್ಮೆಯ ಬ್ಯಾಟಿಂಗ್ ನಡೆಸುತ್ತಿದ್ದ ಏಡೆನ್ ಮಾರ್ಕ್ರಮ್, 81 ಎಸೆತಗಳಲ್ಲಿ 38 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದರು. ಇವರ ಜೊತೆ ಮತ್ತೊಂದು ತುದಿಯಲ್ಲಿ ಆಡುತ್ತಿದ್ದ ರಯಾನ್ ರಿಕೆಲ್ಟನ್ ಕೂಡ 35 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದರು.
IND vs SA: ಭಾರತ ವಿರುದ್ದದ ಒಡಿಐ, ಟಿ20 ಸರಣಿಗಳಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ!
ಆದರೆ, ಜಸ್‌ಪ್ರೀತ್ ಬುಮ್ರಾ 27 ಓವರ್‌ನ ಕೊನೆಯ ಎಸೆತದಲ್ಲಿ ಏಡೆನ್ ಮಾರ್ಕ್ರಮ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರೆ, 28ನೇ ಓವರ್‌ಗಳಲ್ಲಿ ಕುಲ್ದೀಪ್ ಯಾದವ್, ಮತ್ತೊರ್ವ ಆರಂಭಿಕ ರಿಕೆಲ್ಟನ್ ಅವರನ್ನು ಔಟ್ ಮಾಡಿದರು. ಆ ಮೂಲಕ ಹರಿಣ ಪಡೆ 82 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು. ನಾಯಕ ತೆಂಬಾ ಬವೂಮ ಹಾಗೂ ಟ್ರಿಸ್ಟನ್ ಸ್ಟಬ್ಸ್ ಅವರು ಮೂರನೇ ವಿಕೆಟ್‌ಗೆ 84 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಮೂರನೇ ಸೆಷನ್‌ವರೆಗೂ ಆಫ್ರಿಕಾ ಹಿಡಿತವನ್ನು ಸಾಧಿಸಿತ್ತು.
ಉತ್ತಮವಾಗಿ ಬ್ಯಾಟ್ ಮಾಡಿದ್ದ ತೆಂಬಾ ಬವೂಮ 92 ಎಸೆತಗಳಲ್ಲಿ 41 ರನ್ ಗಳಿಸಿದ್ದರು ಹಾಗೂ ಟ್ರಿಸ್ಟನ್ ಸ್ಟಬ್ಸ್ 112 ಎಸೆತಗಳಲ್ಲಿ 49 ರನ್ ಗಳಿಸಿದ್ದರು. ಆದರೆ, ತೆಂಬಾ ಬವೂಮಾ ಅವರನ್ನು ರವೀಂದ್ರ ಜಡೇಜಾ ಕಟ್ಟಿ ಹಾಕಿದರೆ, ಕುಲ್ದೀಪ್ ಯಾದವ್ ತಮ್ಮ ಸ್ಪಿನ್ ಮೋಡಿಯಿಂದ ಟ್ರಿಸ್ಟನ್ ಸ್ಟಬ್ಸ್ ಅವರನ್ನು ಔಟ್ ಮಾಡಿದರು. ನಂತರ ವಿಯಾನ್ ಮುಲ್ಡರ್ ಅವರು 13 ರನ್ ಗಳಿಸಿದ ಬಳಿಕ ಕುಲ್ದೀಪ್ ಯಾದವ್ ಸ್ಪಿನ್ ಮೋಡಿಗೆ ಬಲಿಯಾದರು.
IND vs SA: ದಕ್ಷಿಣ ಆಫ್ರಿಕಾ ಒಡಿಐ ಸರಣಿಗೆ ಭಾರತದ ಸಂಭಾವ್ಯ ಆಟಗಾರರ ತಂಡ!
ನಂತರ 59 ಎಸೆತಗಳಲ್ಲಿ 59 ಎಸೆತಗಳಲ್ಲಿ 28 ರನ್ ಗಳಿಸಿ ಆಡುತ್ತಿದ್ದ ಟೋನಿ ಡಿ ಜಾರ್ಜಿ ಅವರನ್ನು ಮೊಹಮ್ಮದ್ ಸಿರಾಜ್ ತಮ್ಮ ಮಾರಕ ಬೌಲಿಂಗ್ ದಾಳಿಯಿಂದ ಔಟ್ ಮಾಡಿದರು. ಸೆನುರನ್ ಮುತ್ತುಸ್ವಾಮಿ (25*) ಹಾಗೂ ಕೈಲ್ ವಾರ್ನೆನ್ (1) ಅವರು ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತದ ಪರ ಮೊದಲನೇ ದಿನ ಕುಲ್ದೀಪ್ ಯಾದವ್ 3 ವಿಕೆಟ್ ಕಿತ್ತರೆ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ರವೀಂದ್ರ ಜಡೇಜಾ ಒಂದೊಂದು ವಿಕೆಟ್ ಕಿತ್ತರು.