ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಮಾರ್ಕೊ ಯೆನ್ಸನ್‌ ಮಾರಕ ದಾಳಿಗೆ ಭಾರತ 201ಕ್ಕೆ ಆಲ್‌ಔಟ್‌, ಆಫ್ರಿಕಾ ಹಿಡಿತದಲ್ಲಿ ಎರಡನೇ ಟೆಸ್ಟ್‌!

IND vs SA 2nd Test: ಮಾರ್ಕೊ ಯೆನ್ಸನ್‌ ಮಾರಕ ಬೌಲಿಂಗ್‌ ದಾಳಿಗೆ ನಲುಗಿದ ಭಾರತ ತಂಡ, ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 201 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಎದುರಾಳಿ ದಕ್ಷಿಣ ಆಫ್ರಿಕಾ ಎದುರು ಆತಿಥೇಯರು ಭಾರಿ ಹಿನ್ನಡೆಯನ್ನು ಅನುಭವಿಸಿದ್ದಾರೆ ಹಾಗೂ ಗುವಾಹಟಿ ಟೆಸ್ಟ್‌ ಪಂದ್ಯದಲ್ಲಿಯೂ ಸೋಲುವ ಭೀತಿ ಭಾರತಕ್ಕೆ ಎದುರಾಗಿದೆ.

2ನೇ ಟೆಸ್ಟ್‌ನ ಮೂರನೇ ದಿನ ಅರ್ಧಶತಕ ಗಳಿಸಿದ ಯಶಸ್ವಿ ಜೈಸ್ವಾಲ್‌.

ಗುವಾಹಟಿ: ಎರಡನೇ ಟೆಸ್ಟ್‌ ಗೆಲ್ಲುವ ಭಾರತ ತಂಡ ಕನಸು ದೂರವಾಗುತ್ತಿದೆ. ಅದೇ ರಾಗ, ಅದೇ ತಾಳ ಎಂಬಂತೆ ಟೀಮ್‌ ಇಂಡಿಯಾದ ಬ್ಯಾಟಿಂಗ್‌ ವೈಫಲ್ಯ ಗುವಾಹಟಿ ಟೆಸ್ಟ್‌ನಲ್ಲಿಯೂ ಮುಂದುವರಿದಿದೆ. ಮಾರ್ಕೊ ಯೆನ್ಸನ್‌ (Marco Jansen) ಮಾರಕ ಬೌಲಿಂಗ್‌ ದಾಳಿಗೆ ನಲುಗಿದ ಭಾರತ ತಂಡ, ಎರಡನೇ ಟೆಸ್ಟ್‌ ಪಂದ್ಯದ (IND vs SA) ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 201 ರನ್‌ಗಳಿಗೆ ಆಲ್‌ಔಟ್‌ ಆಯಿತು. ಇದರೊಂದಿಗೆ ಟೀಮ್‌ ಇಂಡಿಯಾ 314 ರನ್‌ಗಳ ಬೃಹತ್‌ ಮೊತ್ತದ ಹಿನ್ನಡೆಯನ್ನು ಅನುಭವಿಸಿದೆ. ಭಾರತದ ಪರ ಯಶಸ್ವಿ ಜೈಸ್ಬಾಲ್‌ (58) ಹಾಗೂ ವಾಷಿಂಗ್ಟನ್‌ ಸುಂದರ್‌ (48) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಹರಿಣ ಪಡೆಯ ಬೌಲಿಂಗ್‌ ಎದುರು ಮಕಾಡೆ ಮಲಗಿದರು.

ಇಲ್ಲಿನ ಬರ್ಸಪರ ಕ್ರೀಡಾಂಗಣದಲ್ಲಿ ಸೋಮವಾರ ಬೆಳಿಗ್ಗೆ ವಿಕೆಟ್‌ ನಷ್ಟವಿಲ್ಲದೆ 9 ರನ್‌ನಿಂದ ಪ್ರಥಮ ಇನಿಂಗ್ಸ್‌ ಮಂದುವರಿಸಿದ ಭಾರತ ತಂಡದ ಪರ ಯಾವುದೇ ಬ್ಯಾಟ್ಸ್‌ಮನ್‌ನಿಂದ ದೊಡ್ಡ ಇನಿಂಗ್ಸ್‌ ಮೂಡಿ ಬರಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌, 97 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 58 ರನ್‌ ಗಳಿಸಿ ಭಾರತಕ್ಕೆ ಉತ್ತಮ ಆರಂಭ ತಂದುಕೊಟ್ಟು ಸೈಮನ್‌ ಹಾರ್ಮರ್‌ಗೆ ವಿಕೆಟ್‌ ಒಪ್ಪಿಸಿದರು. ಇದಕ್ಕೂ ಮುನ್ನ ಮತ್ತೊರ್ವ ಆರಂಭಿಕ ಕೆಎಲ್‌ ರಾಹುಲ್‌ ಕೇವಲ 22 ರನ್‌ ಗಳಿಸಿ ಕೇಶವ್‌ ಮಹಾರಾಜ್‌ಗೆ ಶರಣಾದರು.

IND vs SA 2nd Test: ದಕ್ಷಿಣ ಆಫ್ರಿಕಾದ ಬಿಗಿ ಹಿಡಿತದಲ್ಲಿ ಗುವಾಹಟಿ ಟೆಸ್ಟ್‌

ಭಾರತದ ಮಧ್ಯಮ ಕ್ರಮಾಂಕವನ್ನು ಕಟ್ಟಿ ಹಾಕಿದ ಯೆನ್ಸನ್‌

ಎರಡನೇ ದಿನ ಬ್ಯಾಟಿಂಗ್‌ನಲ್ಲಿ 93 ರನ್‌ ಗಳಿಸಿದ್ದ ಮಾರ್ಕೊ ಯೆನ್ಸನ್‌, ಮೂರನೇ ದಿನ ಬೌಲಿಂಗ್‌ನಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಆಘಾತ ನೀಡಿದರು. ಧ್ರುವ್‌ ಜುರೆಲ್‌, ರಿಷಭ್‌ ಪಂತ್‌, ರವೀಂದ್ರ ಜಡೇಜಾ, ನಿತೀಶ್‌ ಕುಮಾರ್‌ ರೆಡ್ಡಿ ಅವರನ್ನು ಬಹುಬೇಗ ಔಟ್‌ ಮಾಡಿದರು. ಆ ಮೂಲಕ ಭಾರತ ತಂಡ ಕೇವಲ 122 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಳ್ಳುವಂತೆ ಮಾಡಿದರು. ಇನ್ನುಳಿದ ಎರಡು ವಿಕೆಟ್‌ಗಳ ರೂಪದಲ್ಲಿ ಜಸ್‌ಪ್ರೀತ್‌ ಬುಮ್ರಾ ಹಾಗೂ ಕುಲ್ದೀಪ್‌ ಯಾದವ್‌ ಅವರನ್ನು ಔಟ್‌ ಮಾಡಿದರು. ಆ ಮೂಲಕ ತಾವು ಬೌಲ್‌ ಮಾಡಿದ 19.5 ಓವರ್‌ಗಳಿಗೆ ಕೇವಲ 48 ರನ್‌ ನೀಡಿ 6 ವಿಕೆಟ್‌ ಸಾಧನೆ ಮಾಡಿದರು.



ವಾಷಿಂಗ್ಟನ್‌ ಸಂದರ್‌ ಕಠಿಣ ಹೋರಾಟ

ಇವರಿಗೂ ಮುನ್ನ ಮೂರನೇ ಕ್ರಮಾಂಕದಲ್ಲಿ ಆಡಿದ್ದ ಸಾಯಿ ಸುದರ್ಶನ್‌ 15 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದ ವಾಷಿಂಗ್ಟನ್‌ ಸುಂದರ್‌, ಹರಿಣ ಪಡೆಯ ಬೌಲರ್‌ಗಳನ್ನು ಕೆಲ ಕಾಲ ಸಮರ್ಥವಾಗಿ ಎದುರಿಸಿದ್ದರು. ಅವರು ಆಡಿದ್ದ 92 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ ಎರಡು ಬೌಂಡರಿಗಳೊಂದಿಗೆ 48 ರನ್‌ ಗಳಿಸಿ ಭಾರತ ತಂಡದ ಮೊತ್ತವನ್ನು 200ರ ಸನಿಹ ತಂದು ವಿಕೆಟ್‌ ಒಪ್ಪಿಸಿದರು. ಯಶಸ್ವಿ ಜೈಸ್ವಾಲ್‌ ಬಿಟ್ಟರೆ, ಹರಿಣ ಪಡೆಯನ್ನು ಕೆಲಕಾಲ ಎದುರಿಸಿದ್ದು, ವಾಷಿಂಗ್ಟನ್‌ ಸುಂದರ್‌ ಮಾತ್ರ.



ಸೈಮನ್‌ ಹಾರ್ಮರ್‌ಗೆ 3 ವಿಕೆಟ್‌

ಮಾರ್ಕೊ ಯೆನ್ಸನ್‌ ಜೊತೆಗೆ ದಕ್ಷಿಣ ಆಫ್ರಿಕಾ ಪರ ಬೌಲಿಂಗ್‌ನಲ್ಲಿ ಸೈಮನ್‌ ಹಾರ್ಮರ್‌ ಕೂಡ ಮಿಂಚಿದರು. ಇವರು ಬೌಲ್‌ ಮಾಡಿದ 27 ಓವರ್‌ಗಳಿಗೆ 64 ರನ್‌ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದರು. ಇವರು ಸಾಯಿ ಸುದರ್ಶನ್‌, ಯಶಸ್ವಿ ಜೈಸ್ವಾಲ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಸೇರಿ ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು.

IND vs SA: ಭಾರತ ವಿರುದ್ದದ ಒಡಿಐ, ಟಿ20 ಸರಣಿಗಳಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ!

ದಕ್ಷಿಣ ಆಫ್ರಿಕಾ: 26-6

ಪ್ರಥಮ ಇನಿಂಗ್ಸ್‌ನಲ್ಲಿನ ಬೃಹತ್‌ ಮೊತ್ತದ ಮುನ್ನಡೆಯೊಂದಿಗೆ ದಕ್ಷಿಣ ಆಫ್ರಿಕಾ ತಂಡ ದ್ವಿತೀಯ ಇನಿಂಗ್ಸ್‌ ಆರಂಭಿಸಿತು. ದಕ್ಷಿಣ ಆಫ್ರಿಕಾ ಪರ ಇನಿಂಗ್ಸ್‌ ಆರಂಭಿಸಿದ ಏಡೆನ್‌ ಮಾರ್ಕ್ರಮ್‌ ಹಾಗೂ ರಯಾನ್‌ ರಿಕೆಲ್ಟನ್‌ ಅವರು ಕ್ರಮವಾಗಿ 12 ಮತ್ತು 13 ರನ್‌ ಗಳಿಸುವ ಮೂಲಕ ನಾಲ್ಕನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. 8 ಓವರ್‌ಗಳ ಅಂತ್ಯಕ್ಕೆ ಹರಿಣ ಪಡೆ 26 ರನ್‌ ಗಳಿಸಿದೆ. ಇದಕ್ಕೂ ಮುನ್ನ ಪ್ರಥಮ ಇನಿಂಗ್ಸ್‌ನಲ್ಲಿ ಪ್ರವಾಸಿ ತಂಡ 489 ರನ್‌ಗಳನ್ನು ಕಲೆ ಹಾಕಿತ್ತು.