ಗುಹವಾಟಿ: ದಕ್ಷಿಣ ಆಫ್ರಿಕಾ ವಿರುದ್ದದ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ (IND vs SA) ಟೀಮ್ ಇಂಡಿಯಾ ಸಂಕಷ್ಟದಲ್ಲಿದೆ. ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ 489 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಭಾರತ ತಂಡ 201 ರನ್‌ಗಳಿಗೆ ಆಲ್‌ಔಟ್ ಆಗಿ ಬೃಹತ್ ಮೊತ್ತದ ಹಿನ್ನಡೆಯನ್ನು ಅನುಭವಿಸಿತು. ಪ್ರಥಮ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಸಾಯಿ ಸುದರ್ಶನ್ (Sai sudharshan) ಮತ್ತು ಧ್ರುವ್ ಜುರೆಲ್ (Dhruv Jurel) ವಿರುದ್ಧ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಣಿ ಸಮಬಲಗೊಳಿಸಲು ಈ ಪಂದ್ಯದ ಗೆಲುವು ಅನಿವಾರ್ಯವಾಗಿದೆ. ಆದರೆ ಭಾರತೀಯ ಬ್ಯಾಟರ್‌ಗಳು ತೀರಾ ನಿರಾಶದಾಯಕ ಪ್ರದರ್ಶನ ತೋರಿದ್ದಾರೆ. ಇನ್ನು ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಸಾಯಿ ಸುದರ್ಶನ್ ಲಯಕ್ಕೆ ಮರಳುವಲ್ಲಿ ವಿಫಲರಾದರು.
ಕೆ ಎಲ್ ರಾಹುಲ್ ಔಟಾದ ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬಂದ ಸಾಯಿ ಸುದರ್ಶನ್, ರಯಾನ್ ರಿಕೆಲ್ಟನ್ ಅವರ ಫುಲ್ ಟಾಸ್ ಎಸೆತವನ್ನು ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು. 40 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿದ ಸಾಯಿ ಔಟ್ ಆದರು. ಬಳಿಕ 4ನೇ ಕ್ರಮಾಂಕದಲ್ಲಿ ಮೈದಾನಕ್ಕೆ ಬಂದ ಧ್ರುವ್ ಜುರೆಲ್ 15 ಎಸೆತಗಳನ್ನು ಎದುರಿಸಿ ಮಾರ್ಕೊ ಯೆನ್ಸನ್ ಅವರ ಬೌಲಿಂಗ್‌ನಲ್ಲಿ ಶೂನ್ಯಕ್ಕೆ ಔಟಾದರು. ಈ ಹಿನ್ನೆಲೆಯಲ್ಲಿ ಉಭಯ ಆಟಗಾರರು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
IND vs SA: ಮಾರ್ಕೊ ಯೆನ್ಸನ್ ಮಾರಕ ದಾಳಿಗೆ ಭಾರತ 201ಕ್ಕೆ ಆಲ್‌ಔಟ್, ಆಫ್ರಿಕಾ ಹಿಡಿತದಲ್ಲಿ ಎರಡನೇ ಟೆಸ್ಟ್!
ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ
ನಾಯಕ ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ಆಡುತ್ತಿರುವ ಭಾರತ ತಂಡ, ಈ ಪಂದ್ಯದಲ್ಲಿ ಬ್ಯಾಟಿಂಗ್ ಸಂಪೂರ್ಣ ವೈಫಲ್ಯ ಅನುಭವಿಸಿತು. ಈ ಕುರಿತು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದಲ್ಲದೇ, ಆಯ್ಕೆ ಸಮಿತಿಯ ನಿರ್ಧಾರವನ್ನು ಟೀಕಿಸುತ್ತಿದ್ದಾರೆ. ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅಭಿಮಾನಿಗಳು, "ಸಾಯಿ ಸುದರ್ಶನ್ ಭಾರತ ಪರ ಕೆಲವು ವರ್ಷಗಳ ಕಾಲ ಆಡುವ ಕೊನೆಯ ಟೆಸ್ಟ್ ಪಂದ್ಯ ಇದಾಗಲಿ ಎಂದು ನಾನು ಭಾವಿಸುತ್ತೇನೆ, ಸರಣಿ ಬಾಕಿ ಇರುವಾಗ ಫ್ಲಾಟ್ ಪಿಚ್‌ನಲ್ಲಿ ವಿಕೆಟ್ ಒಪ್ಪಿಸುವುದು ಮೂರ್ಖತನ," ಎಂದು ಅಭಿಮಾನಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಸಾಯಿ ಸುದರ್ಶನ್ ಅವರ ಗುಣಮಟ್ಟದ ಬಗ್ಗೆ ನನಗೆ ಇನ್ನೂ ಮನವರಿಕೆಯಾಗಿಲ್ಲ. ಸ್ಥಿರತೆ ತುಂಬಾ ಕಡಿಮೆ ಇರುವಂತೆ ತೋರುತ್ತಿದೆ, ಇಲ್ಲಿ ಎಡಗೈ ಆಟಗಾರನನ್ನು ಆಯ್ಕೆ ಮಾಡಿದ್ದು ತಪ್ಪು. ರುತುರಾಜ್ ಗಾಯಕ್ವಾಡ್ ಅಥವಾ ಸರ್ಫರಾಜ್ ಖಾನ್ ಅವರನ್ನು ಬದಲಾಯಿಸಬೇಕಿತ್ತು. ತಂಡದ ಸಂಯೋಜನೆಯು ಆರಂಭದಿಂದಲೇ ದೋಷಪೂರಿತವಾಗಿತ್ತು," ಎಂದು ಮತ್ತೊರ್ವ ಅಭಿಮಾನಿ ಟೀಕಿಸಿದ್ದಾರೆ.
ಧ್ರುವ್ ಜುರೆಲ್ ವಿರುದ್ದವೂ ಫ್ಯಾನ್ಸ್ ಅಸಮಾಧಾನ
ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧ್ರುವ್ ಜುರೇಲ್ ಅವರ ನಿರಾಶದಾಯಕ ಪ್ರದರ್ಶನದ ಕುರಿತು ಹಲವು ಅಭಿಮಾನಿಗಳು ಟೀಕಿಸಿದ್ದಾರೆ. "ಧ್ರುವ್ ಜುರೆಲ್! ನಿಮ್ಮಿಂದ ಏನು ತಪ್ಪಾಗಿದೆ? ಎಂತಹ ವಿಕೆಟ್ ವ್ಯರ್ಥ. ಸ್ವಲ್ಪವೂ ವಿಷಾದವಿಲ್ಲದೆ ಡಗೌಟ್‌ಗೆ ಹಿಂತಿರುಗುವುದು ನಿಜಕ್ಕೂ ಕಳವಳಕಾರಿ," ಎಂದಿದ್ದಾರೆ.
"ಮತ್ತೊಮ್ಮೆ ಧ್ರುವ್ ಜುರೆಲ್ ನಿರಾಶೆಗೊಂಡಿದ್ದಾರೆ. ಅವರು ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಿದ್ಧವಾಗಿಲ್ಲ. ಅವರು ದೇಶಿ ಕ್ರಿಕೆಟ್‌ನಲ್ಲಿ ಅದನ್ನು ಸರಿಪಡಿಸಿಕೊಳ್ಳುವ ಸಮಯ ಬಂದಿದೆ, ಬಿಸಿಸಿಐ ಒಲವು ಹೊಂದಿರುವ ಬಾಲಕ ಧ್ರುವ್ ಜುರೆಲ್ ಅವರ ಪ್ರದರ್ಶನ ನೋಡಿ. ಅವರು ನಿಜವಾಗಿಯೂ ಟೆಸ್ಟ್‌ನಲ್ಲಿ ಅರ್ಹ ದೇಶಿ ವಿಕೆಟ್‌ಕೀಪರ್‌ಗಳನ್ನು ಹಿಂದಿಕ್ಕುವ ಮೂಲಕ ವೇಗದ ವೇಗವನ್ನು ಗಳಿಸಿದರು," ಎಂದು ಟೀಕಿಸಿದ್ದಾರೆ.
ತವರಿನಲ್ಲಿ ನಡೆಯುತ್ತಿರುವ ಸರಣಿಯ ಅಂತಿಮ ಪಂದ್ಯವನ್ನು ಗೆದ್ದು, ಕ್ಲೀನ್ ಸ್ವೀಪ್ ಮುಜುಗರದಿಂದ ತಪ್ಪಿಸಿಕೊಳ್ಳಲು ಭಾರತ ತಂಡ ಎದುರು ನೋಡುತ್ತಿದೆ.