ನವದೆಹಲಿ: ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (IND vs SL) ಭಾರತ ತಂಡದ ಆಟಗಾರರು ತಮ್ಮ ಸಾಮರ್ಥ್ಯಕ್ಕೂ ಮೀರಿದ ಪ್ರದರ್ಶನವನ್ನು ತೋರಬೇಕೆಂದು ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ತಮ್ಮ ಆಟಗಾರರಿಗೆ ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನ (WTC Final)ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕೆಂದರೆ ಭಾರತ ತಂಡ, ಶ್ರೀಲಂಕಾ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಬೇಕಾದ ಅಗತ್ಯವಿದೆ.
ಭಾರತ ತಂಡ ಪ್ರಸ್ತುತ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲಿ 48.15ರ ಗೆಲುವಿನ ಸರಾಸರಿಯ ಮೂಲಕ ಐದನೇ ಸ್ಥಾನವನ್ನು ಅಲಂಕರಿಸಿದೆ. ಈ ವರ್ಷದ ಕೊನೆಯಲ್ಲಿ ನ್ಯೂಜಿಲೆಂಡ್ ಎದುರು ಭಾರತ ಕಾದಾಟ ನಡೆಸಲಿದೆ. ಇದು ಶುಭಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾಗೆ ಕಠಿಣ ಸರಣಿಯಾಗಲಿದೆ. ಹಾಗಾಗಿ ಭಾರತ ತಂಡ, ಶ್ರೀಲಂಕಾ ಎದುರು ಗೆಲ್ಲಲೇಬೇಕಾದ ಅಗತ್ಯವಿದೆ.
ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತದ ಟೆಸ್ಟ್ ತಂಡದ ಪ್ರದರ್ಶನ ಉತ್ತಮವಾಗಿಲ್ಲ. ತವರಿನಲ್ಲಿ ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಮಾತ್ರ ಸರಣಿ ಗೆದ್ದಿರುವ ಭಾರತ, ಇಂಗ್ಲೆಂಡ್‌ನಲ್ಲಿ ಸರಣಿಯನ್ನು ಡ್ರಾಗೆ ತೃಪ್ತಿಪಟ್ಟಿದೆ. ಆದರೆ ತವರಿನಲ್ಲೇ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋಲು ಅನುಭವಿಸಿದ ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲೂ ಸೋಲನ್ನು ಎದುರಿಸಿದೆ.
'ಹಿರಿಯ ಆಟಗಾರರನ್ನು ಗೌರವಿಸಿ': ಗಂಭೀರ್, ಆಯ್ಕೆದಾರರಿಗೆ ಅಜಿಂಕ್ಯ ರಹಾನೆ ಸೂಚನೆ
'ಪ್ರತಿಯೊಂದು ಸವಾಲಿಗೂ ಸಿದ್ಧರಾಗಿರಬೇಕು' : ಗೌತಮ್ ಗಂಭೀರ್
ಭಾರತದ ಆಟಗಾರರಿಗೆ ಪ್ರೇರಣಾದಾಯಕ ಸಂದೇಶ ನೀಡಿರುವ ಮುಖ್ಯ ಕೋಚ್ ಗೌತಮ್ ಗಂಭೀರ್, ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಸಂಪೂರ್ಣ ಸಿದ್ಧತೆಯೊಂದಿಗೆ ಕಣಕ್ಕಿಳಿಯುವಂತೆ ಕರೆ ನೀಡಿದ್ದಾರೆ.
"ಸ್ನೇಹಿತರೇ, ನಮ್ಮ ಮುಂದೆ ಯಾವ ಸವಾಲಿದೆ ಎಂಬುದು ನಮಗೆ ಗೊತ್ತಿದೆ. ನಾವು ಯಾವುದಕ್ಕಾಗಿ ಆಡುತ್ತಿದ್ದೇವೆ ಎಂಬುದೂ ತಿಳಿದಿದೆ. ಅಗತ್ಯವಿರುವಷ್ಟು ಕಠಿಣ ಅಭ್ಯಾಸ ಮಾಡಬೇಕು, ನಮ್ಮ ಸಾಮರ್ಥ್ಯದ ಮಿತಿಯನ್ನು ಮೀರಿ ಶ್ರಮಿಸಬೇಕು ಹಾಗೂ ಪ್ರತಿಯೊಂದು ಅಂಶದಲ್ಲೂ ಸಿದ್ಧರಾಗಬೇಕು. ಆಗಸ್ಟ್ 15ರ ಬೆಳಗ್ಗೆ ನಾವು ಮೊದಲು ಬ್ಯಾಟ್ ಮಾಡಲಿ ಅಥವಾ ಬೌಲ್ ಮಾಡಲಿ, ಎದುರಾಗುವ ಪ್ರತಿಯೊಂದು ಪ್ರಶ್ನೆಗೆ ನಮ್ಮ ಬಳಿ ಉತ್ತರ ಇರಬೇಕು. ಪ್ರತಿಯೊಂದು ಸವಾಲನ್ನು ಎದುರಿಸಲು ನಾವು ಸಂಪೂರ್ಣ ಸಿದ್ಧರಾಗಿರಬೇಕು. ಆದ್ದರಿಂದ ಇಂದಿನಿಂದಲೇ ಪ್ರತಿಯೊಂದು ಅಂಶದಲ್ಲೂ ಪರಿಪೂರ್ಣ ಸಿದ್ಧತೆ ಮಾಡಿಕೊಳ್ಳಿ," ಎಂದು ಬಿಸಿಸಿಐ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಗಂಭೀರ್ ಆಟಗಾರರಿಗೆ ಸಲಹೆ ನೀಡಿದ್ದಾರೆ.
ನಾಳೆಯಿಂದ ಭಾರತ-ಶ್ರೀಲಂಕಾ ಮೂರು ದಿನಗಳ ಅಭ್ಯಾಸ ಪಂದ್ಯ ಆರಂಭ
ಭಾರತ ತಂಡಕ್ಕೆ ಹೊಸದಾಗಿ ಸೇರ್ಪಡೆಯಾದ ಆಟಗಾರರನ್ನು ಮುಖ್ಯ ಕೋಚ್ ಗೌತಮ್ ಗಂಭೀರ್ ಹೃತ್ಪೂರ್ವಕವಾಗಿ ಸ್ವಾಗತಿಸಿ ಅಭಿನಂದಿಸಿದರು. "ಸ್ನೇಹಿತರೇ, ಎಲ್ಲರಿಗೂ ಸ್ವಾಗತ. ನಮ್ಮ ತಂಡಕ್ಕೆ ಕೆಲ ಹೊಸ ಆಟಗಾರರು ಸೇರಿದ್ದಾರೆ. ಮೊದಲಿಗೆ ಸಾರಾಂಶ್‌ಗೆ ಅಭಿನಂದನೆಗಳು. ಇಲ್ಲಿಗೆ ಆಗಮಿಸಲು ನೀವು ತುಂಬಾ ಕಠಿಣ ಪರಿಶ್ರಮ ಪಟ್ಟಿದ್ದೀರಿ. ಅವಕಾಶ ಸಿಕ್ಕಾಗಲೆಲ್ಲ ನಿಮ್ಮ ಕುಟುಂಬ ಮತ್ತು ದೇಶದ ಹೆಮ್ಮೆ ಹೆಚ್ಚಿಸುವ ರೀತಿಯಲ್ಲಿ ಪ್ರದರ್ಶನ ನೀಡಿ. ಎರಡನೆಯದಾಗಿ ಆಕಿಬ್‌ಗೆ ಅಭಿನಂದನೆಗಳು. ಕಳೆದ ಋತುವಿನಲ್ಲಿ ನೀವು ಅದ್ಭುತ ಪ್ರದರ್ಶನ ನೀಡಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು ರಣಜಿ ಟ್ರೋಫಿ ಗೆಲ್ಲುವಂತೆ ಮಾಡಿದ್ದೀರಿ. ಇದು ದೊಡ್ಡ ಸಾಧನೆ. ಮತ್ತೊಮ್ಮೆ ಅಭಿನಂದನೆಗಳು.," ಎಂದು ಗುಣಗಾನ ಮಾಡಿದರು.
"ಅವರು (ಶುಭದೀಪ್ ಘೋಷ್) ಹಲವು ವರ್ಷಗಳಿಂದ ಅನೇಕ ತಂಡಗಳೊಂದಿಗೆ ಕೆಲಸ ಮಾಡಿದ್ದಾರೆ. ಅವರಲ್ಲಿರುವ ಆಟದ ಮೇಲಿನ ಅಪಾರ ಆಸಕ್ತಿ, ಬದ್ಧತೆ ಮತ್ತು ಅನುಭವ ಈ ತಂಡವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂಬ ವಿಶ್ವಾಸ ನನಗಿದೆ. ಅವರ ಉತ್ಸಾಹ ಮತ್ತು ಸಕಾರಾತ್ಮಕ ಶಕ್ತಿ ನಮ್ಮೆಲ್ಲರಿಗೂ ಗುರಿ ಸಾಧಿಸಲು ನೆರವಾಗಲಿದೆ," ಎಂದು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ಗೆ ಸಾಯಿ ಸುದರ್ಶನ್ ಅನುಮಾನ
ಭಾರತ ತಂಡ: ಶುಭಮನ್ ಗಿಲ್ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಸಾಯಿ ಸುದರ್ಶನ್ (ಫಿಟ್‌ನೆಸ್ ಮೇಲೆ ಅವಲಂಬನೆ), ಧ್ರುವ್ ಜುರೆಲ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ, ಗುರ್ನೂರ್ ಬ್ರಾರ್, ದೇವದತ್ ಪಡಿಕ್ಕಲ್, ಸಾರಾಂಶ್ ಜೈನ್, ಆಕಿಬ್ ನಬಿ