ದುಬೈ: ಶ್ರೀಲಂಕಾ ವಿರುದ್ಧ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯ ಸೂಪರ್-4ರ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಅರ್ಧಶತಕವನ್ನು ಬಾರಿಸಿದರು. ಆ ಮೂಲಕ ಟಿ20 ಏಷ್ಯಾ ಕಪ್ ಟೂರ್ನಿಯ ಏಕೈಕ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಅಭಿಷೇಕ್ ಶರ್ಮಾ ಬರೆದಿದ್ದಾರೆ. ಆ ಮೂಲಕ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ (Virat Kohli) ಹಾಗೂ ಪಾಕಿಸ್ತಾನ ವಿಕೆಟ್ ಕೀಪರ್ ಮೊಹಮ್ಮದ್ ರಿಝ್ವಾನ್ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಪಂದ್ಯದಲ್ಲಿ ಅದ್ಭುತ ಬ್ಯಾಟ್ ಮಾಡಿದ ಅಭಿಷೇಕ್ ಶರ್ಮಾ, 31 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ಎಂಟು ಬೌಂಡರಿಗಳೊಂದಿಗೆ 61 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
2022ರ ಏಷ್ಯಾ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿಕೆಟ್ ಕೀಪರ್ ಮೊಹಮ್ಮದ್ ರಿಝ್ವಾನ್ ಅವರು ಆರು ಪಂದ್ಯಗಳಿಂದ 281 ರನ್‌ಗಳನ್ನು ಬಾರಿಸಿದ್ದರು. ಇನ್ನು ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅವರು ಐದು ಪಂದ್ಯಗಳಿಂದ 276 ರನ್‌ಗಳನ್ನು ಕಲೆ ಹಾಕಿದ್ದರು. ಆದರೆ, ಪ್ರಸ್ತುತ ಸಾಗುತ್ತಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಇಲ್ಲಿಯವರೆಗೂ ಆಡಿದ ಆರು ಪಂದ್ಯಗಳಿಂದ 51.50ರ ಸರಾಸರಿ ಮತ್ತು 204.64ರ ಸ್ಟ್ರೈಕ್ ರೇಟ್‌ನಲ್ಲಿ 309 ರನ್‌ಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಅವರು ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ.
Asia Cup: ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಸೂರ್ಯಕುಮಾರ್ ಯಾದವ್‌ಗೆ ದಂಡ!
ಅಂದ ಹಾಗೆ ಈ ಪಂದ್ಯದ ಐದನೇ ಓವರ್‌ನಲ್ಲಿ ದುಷ್ಮಾಂತ ಚಮೀರಾ ಅವರ ಎಸೆತದಲ್ಲಿ ದೊಡ್ಡ ಸಿಕ್ಸರ್ ಬಾರಿಸುವ ಮೂಲಕ ರಿಝ್ವಾನ್ ಮತ್ತು ಕೊಹ್ಲಿಯ ದಾಖಲೆಯನ್ನು ಅಭಿಷೇಕ್ ಶರ್ಮಾ ಮುರಿದಿದ್ದರು. ಈ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಸ್ಪೋಟಕ ಫಾರ್ಮ್‌ನಲ್ಲಿದ್ದಾರೆ. ಅವರು ಪ್ರತಿಯೊಂದು ಪಂದ್ಯದಲ್ಲಿಯೂ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ.
ಭಾರತ ತಂಡ ಏಷ್ಯಾ ಕಪ್ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶ ಮಾಡಲು ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್ ಕೂಡ ಪ್ರಮುಖ ಕಾರಣವಾಗಿದೆ.
ಉಭಯ ತಂಡಗಳ ಪ್ಲೇಯಿಂಗ್ XI
ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಕುಲ್‌ದೀಪ್ ಯಾದವ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ
ಶ್ರೀಲಂಕಾ: ಪತುಮ್ ನಿಸಾಂಕ, ಕುಸಾಲ್ ಮೆಂಡಿಸ್ (ವಿ.ಕೀ), ಕುಸಾಲ್ ಪೆರೇರಾ, ಚರಿತ್ ಅಸಲಂಕ (ನಾಯಕ), ಕಮಿಂದು ಮೆಂಡಿಸ್, ದಸೂನ್ ಶಾನಕ, ವಾನಿಂದು ಹಸರಂಗ, ಜನಿತ್ ಲಿಯಾನಗೆ, ದುಷ್ಮಂತ ಚಮೀರ, ಮಹೇಶ್ ತೀಕ್ಷಣ, ನುವಾನ್ ತುಷಾರ