ಗಾಲೆ: ಇಲ್ಲಿನ ಗಾಲೆ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಗಸ್ಟ್ 15 ರಂದು ನಡಯುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ (IND vs SL) ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರು ದೊಡ್ಡ ದಾಖಲೆಯ ಸನಿಹದಲ್ಲಿದ್ದಾರೆ. ಜೂನ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನ ಉಪ ನಾಯಕತ್ವವನ್ನು ವಹಿಸಿದ ಕೆಎಲ್ ರಾಹುಲ್, ಈ ಸರಣಿಯಲ್ಲಿ ನಾಯಕ ಶುಭಮನ್ ಗಿಲ್ ಅವರಿಗೆ ನೆರವಾಗಲಿದ್ದಾರೆ. 2014ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರಾಹುಲ್, ಭಾರತ ತಂಡದ ಅತ್ಯಂತ ಹಿರಿಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ.
ಕೆಎಲ್ ರಾಹುಲ್ ಇದುವರೆಗೆ 68 ಟೆಸ್ಟ್ ಪಂದ್ಯಗಳಲ್ಲಿ 4,153 ರನ್ ಗಳಿಸಿದ್ದಾರೆ. ಇದೀಗ ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಗೌತಮ್ ಗಂಭೀರ್ ಅವರನ್ನು ಹಿಂದಿಕ್ಕಲು ಅವರಿಗೆ ಕೇವಲ ಎರಡು ರನ್‌ಗಳ ಅಗತ್ಯವಿದೆ. ಪ್ರಸ್ತುತ ಭಾರತ ತಂಡದ ಮುಖ್ಯ ಕೋಚ್ ಆಗಿರುವ ಗಂಭೀರ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 58 ಪಂದ್ಯಗಳಲ್ಲಿ 4,154 ರನ್ ಗಳಿಸಿದ್ದರು.
2016ರಲ್ಲಿ ಗಾಯದಿಂದ ಚೇತರಿಸಿಕೊಂಡ ರಾಹುಲ್ ಟೆಸ್ಟ್ ತಂಡಕ್ಕೆ ಮರಳಿದ ಬಳಿಕ ಗಂಭೀರ್ ಅವರನ್ನು ಆಡುವ ಬಳಗದಿಂದ ಕೈಬಿಡಲಾಗಿತ್ತು. ಗಂಭೀರ್ ಅವರ 4,154 ಟೆಸ್ಟ್ ರನ್‌ಗಳಲ್ಲಿ 9 ಶತಕ ಮತ್ತು 22 ಅರ್ಧಶತಕ ಸೇರಿವೆ. ಮತ್ತೊಂದೆಡೆ, ರಾಹುಲ್ ಟೆಸ್ಟ್ ಕ್ರಿಕೆಟ್‌ನಲ್ಲಿ 12 ಶತಕ ಮತ್ತು 20 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಅವರು ಭಾರತವನ್ನು ಮೂರು ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ.
IND vs SL: ಪ್ರಸಿಧ್ ಕೃಷ್ಣ-ಆಕಿಬ್ ನಬಿ ನಡುವೆ ಎರಡನೇ ವೇಗಿಯನ್ನು ಆರಿಸಿದ ಅಜಿಂಕ್ಯ ರಹಾನೆ!
ಪದಾರ್ಪಣೆ ಬಳಿಕ ರಾಹುಲ್ ಟೆಸ್ಟ್ ತಂಡದ ನಿಯಮಿತ ಸದಸ್ಯರಾಗಿದ್ದರು. 2022ರಲ್ಲಿ ಅವರು ನಾಯಕತ್ವದ ಬಳಗಕ್ಕೂ ಸೇರ್ಪಡೆಯಾದರು. ಆದರೆ ಕಳಪೆ ಫಾರ್ಮ್‌ನಿಂದಾಗಿ 2023ರಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ಅವರನ್ನು ಆಡುವ ಬಳಗದಿಂದ ಕೈಬಿಡುವುದರ ಜೊತೆಗೆ ಉಪನಾಯಕ ಸ್ಥಾನವನ್ನೂ ತೆಗೆದುಹಾಕಿತ್ತು. ಮೂರು ವರ್ಷಗಳ ಬಳಿಕ ರಾಹುಲ್ ಮತ್ತೆ ಟೆಸ್ಟ್ ತಂಡದ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಇದೀಗ ಶ್ರೀಲಂಕಾ ಸರಣಿಯಲ್ಲಿ ಅವರ ಅನುಭವ ಮತ್ತು ಪ್ರದರ್ಶನ ಭಾರತಕ್ಕೆ ನಿರ್ಣಾಯಕವಾಗಲಿದೆ.
ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್‌ಗಳು
ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ‘ಮಾಸ್ಟರ್ ಬ್ಲಾಸ್ಟರ್’ ತಮ್ಮ ವೃತ್ತಿಜೀವನದಲ್ಲಿ 200 ಟೆಸ್ಟ್ ಪಂದ್ಯಗಳಿಂದ 15,921 ರನ್ ಗಳಿಸಿದ್ದಾರೆ. ಇದುವರೆಗೆ ಯಾವುದೇ ಭಾರತೀಯ ಬ್ಯಾಟರ್ 15,000 ರನ್‌ಗಳ ಗಡಿ ದಾಟಿಲ್ಲ. 13,265 ರನ್‌ಗಳೊಂದಿಗೆ ರಾಹುಲ್ ದ್ರಾವಿಡ್ ಎರಡನೇ ಸ್ಥಾನದಲ್ಲಿದ್ದಾರೆ. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಎರಡರಲ್ಲೂ 10,000ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಇಬ್ಬರು ಬ್ಯಾಟರ್‌ಗಳು ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಮಾತ್ರ.
IND vs SL: ʻಭಾರತ ತಂಡವನ್ನು ಶ್ರೀಲಂಕಾ ಮಣಿಸಲಿದೆʼ-ಶುಭಮನ್ ಗಿಲ್ ಬಳಗಕ್ಕೆ ಧನಂಜಯ್ ಡಿ ಸಿಲ್ವಾ ಎಚ್ಚರಿಕೆ!
ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸುನೀಲ್ ಗವಾಸ್ಕರ್, 122 ಪಂದ್ಯಗಳಲ್ಲಿ 10,122 ರನ್ ಗಳಿಸಿದ್ದಾರೆ. ನಾಲ್ಕನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿಜೀವನವನ್ನು 9,230 ರನ್‌ಗಳೊಂದಿಗೆ ಮುಗಿಸಿದ್ದಾರೆ. ಐದನೇ ಸ್ಥಾನದಲ್ಲಿರುವ ವಿವಿಎಸ್ ಲಕ್ಷ್ಮಣ್ 8,781 ರನ್ ಗಳಿಸಿದ್ದಾರೆ.
ಭಾರತದ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿ
ಸಚಿನ್ ತೆಂಡೂಲ್ಕರ್ – 15,921 ರನ್
ರಾಹುಲ್ ದ್ರಾವಿಡ್ – 13,265 ರನ್
ಸುನಿಲ್ ಗವಾಸ್ಕರ್ – 10,122 ರನ್
ವಿರಾಟ್ ಕೊಹ್ಲಿ – 9,230 ರನ್
ವಿವಿಎಸ್ ಲಕ್ಷ್ಮಣ್ – 8,781 ರನ್