ದುಬೈ: ಕುಲ್ದೀಪ್ ಯಾದವ್ (7 ಕ್ಕೆ 4) ಅವರ ಸ್ಪಿನ್ ಮೋಡಿಯ ಬಲದಿಂದ ಭಾರತ ತಂಡ, 2025ರ ಏಷ್ಯಾ ಕಪ್ ಟೂರ್ನಿಯ ಎ ಗುಂಪಿನ ಮೊದಲನೇ ಪಂದ್ಯದಲ್ಲಿ (IND vs UAE) ಯುಎಇ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ 20 ಓವರ್‌ಗಳ ಮಹತ್ವದ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಮ್ ಇಂಡಿಯಾ (India) ಶುಭಾರಂಭ ಕಂಡಿದೆ. ಈ ಪಂದ್ಯದಲ್ಲಿ ಸ್ಪಿನ್ ಮೋಡಿ ಮಾಡಿ 4 ವಿಕೆಟ್ ಕಿತ್ತ ಕುಲ್ದೀಪ್ ಯಾದವ್ (Kuldeep Yadav) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಪಂದ್ಯದ ಗೆಲುವಿನ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದದ ಹಣಾಹಣಿಗೂ ಮುನ್ನ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.
ಬುಧವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಯುಎಇ ನೀಡಿದ್ದ 58 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ ಬಹುಬೇಗ ಗೆಲುವಿನ ದಡ ಸೇರಿತು. ಅಭಿಷೇಕ್ ಶರ್ಮಾ (30) ಹಾಗೂ ಶುಭಮನ್ ಗಿಲ್ (20*) ಅವರ ಸ್ಪೋಟಕ ಬ್ಯಾಟಿಂಗ್ ಬಲದಿಂದ ಕೇವಲ 4.3 ಓವರ್‌ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿ ಗೆದ್ದು ಬೀಗಿತು. ಐಪಿಎಲ್ ಟೂರ್ನಿಯಲ್ಲಿ ಬ್ಯಾಟಿಂಗ್ ಫಾರ್ಮ್ ಮುಂದುವರಿಸಿದ ಅಭಿಷೇಕ್ ಶರ್ಮಾ, ಕೇವಲ 16 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ ಎರಡು ಬೌಂಡರಿಗಳೊಂದಿಗೆ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಉಪ ನಾಯಕ ಶುಭಮನ್ ಗಿಲ್ ಕೂಡ ಸಂಯೋಜಿತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಕೊನೆಯವರೆಗೂ ಬ್ಯಾಟ್ ಮಾಡಿ 9 ಎಸೆತಗಳಲ್ಲಿ ಅಜೇಯ 20 ರನ್‌ಗಳನ್ನು ಸಿಡಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಾಯಕ ಸೂರ್ಯಕುಮಾರ್ ಯಾದವ್ ಕೇವಲ 2 ಎಸೆತಗಳಲ್ಲಿ ಒಂದು ಸಿಕ್ಸರ್ ಸೇರಿದಂತೆ 7 ರನ್ ಗಳಿಸಿದರು. ಯುಎಇ ಪರ ಜುನೈದ್ ಸಿದ್ದಿಕಿ ಒಂದು ವಿಕೆಟ್ ಪಡೆದರು.
57 ರನ್‌ಗಳಿಗೆ ಯುಎಇ ಆಲ್‌ಔಟ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಯುಎಇ ತಂಡ, ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಭಾರತದ ತಂಡದ ಬೌಲರ್‌ಗಳು ವಿಶೇಷವಾಗಿ ಕುಲ್ದೀಪ್ ಯಾದವ್ ಅವರ ಸ್ಪಿನ್ ಮೋಡಿಯನ್ನು ಎದುರಿಸುವಲ್ಲಿ ಯುಎಇ ವಿಫಲವಾಯಿತು. ಆ ಮೂಲಕ ಯುಎಇ 13.1 ಓವರ್‌ಗಳಿಗೆ 57 ರನ್‌ಗಳಿಗೆ ಆಲ್‌ಔಟ್ ಆಯಿತು. ಯುಎಇ ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಅಲಿಶನ್ ಶರಫು (22 ರನ್) ಹಾಗೂ ಮುಹಮ್ಮದ್ ವಸೀಮ್ (19) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು.
ಭಾರತದ ಪರ ಶಿವಂ ದುಬೆ ಎರಡು ಓವರ್ ಬೌಲ್ ಮಾಡಿ ಕೇವಲ 4 ರನ್ ನೀಡಿ ಮೂರು ವಿಕೆಟ್ ಪಡೆದರು. ಜಸ್‌ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಪಡೆದರು.
ಸ್ಕೋರ ವಿವರ
ಯುಎಇ: 13.1 ಓವರ್‌ಗಳಿಗೆ 57-10 (ಆಲಿಶನ್ ಶರಫು 22, ಮುಹಮ್ಮದ್ ವಸೀಮ್ 19; ಕುಲ್ದೀಪ್ ಯಾದವ್ 7ಕ್ಕೆ 4, ಶಿವಂ ದುಬೆ 4 ಕ್ಕೆ 3)
ಭಾರತ: 4.3 ಓವರ್‌ಗಳಿಗೆ 60-1 (ಅಭಿಷೇಕ್ ಶರ್ಮಾ 30, ಶುಭಮನ್ ಗಿಲ್ 20)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಕುಲ್ದೀಪ್ ಯಾದವ್