ಗುವಾಹಟಿ: ಇಲ್ಲಿನ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ (IND vs WI) ತಂಡಗಳು ಸೆಪ್ಟಂಬರ್ 30 ರಂದು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಎರಡು ವಿಕೆಟ್ ಕಬಳಿಸಿದ ಭಾರತದ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ (Kuldeep Yadav), ತಮ್ಮ ಒಡಿಐ ವೃತ್ತಿ ಜೀವನದಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ 200 ಏಕದಿನ ವಿಕೆಟ್‌ಗಳನ್ನು ಕಬಳಿಸಿದ ನಾಲ್ಕನೇ ಭಾರತೀಯ ಸ್ಪಿನ್ನರ್ ಎಂಬ ದಾಖಲೆಯನ್ನು ಕುಲ್ದೀಪ್ ಯಾದವ್ ಬರೆದಿದ್ದಾರೆ.
ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಎದುರಾಳಿ ವಿಂಡೀಸ್ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ ಭಾರತದ ನಾಯಕ ಶುಭಮನ್ ಗಿಲ್ ಅವರ ನಿರ್ಧಾರವನ್ನು ಬೆಂಬಲಿಸುವಲ್ಲಿ ವೇಗದ ಬೌಲರ್‌ಗಳು ವಿಫಲರಾದರು. ಕೀಸಿ ಕಾರ್ಟಿ ಬೇಗ ವಿಕೆಟ್ ಒಪ್ಪಿಸಿದರೂ ಮತ್ತೊಬ್ಬ ಆರಂಭಿಕ ಜಾನ್ ಕ್ಯಾಂಬೆಲ್ ಅವರು ಶತಕವನ್ನು ಪೂರ್ಣಗೊಳಿಸಿದರು. ಇದರ ನಡುವೆ 10 ಓವರ್‌ಗಳನ್ನು ಬೌಲ್ ಮಾಡಿದ ಕುಲ್ದೀಪ್ ಯಾದವ್ 65 ರನ್ ನೀಡಿ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ಭಾರತದ ಪರ ಯಶಸ್ವಿ ಬೌಲರ್ ಎನಿಸಿಕೊಂಡರು.
IND vs WI: ಭಾರತದ ಎದುರು ಎರಡನೇ ಒಡಿಐನಲ್ಲಿ ಶತಕ ಬಾರಿಸಿದ ಜಾನ್ ಕ್ಯಾಂಬೆಲ್ ಯಾರು?
ಕುಲ್ದೀಪ್ ಯಾದವ್ ಇದೀಗ ಭಾರತದ ಪರ ಅತಿ ಹೆಚ್ಚು ಒಡಿಐ ವಿಕೆಟ್‌ಗಳನ್ನು ಕಬಳಿಸಿದ 9ನೇ ಬೌಲರ್ ಎನಿಸಿಕೊಂಡರು. ಇಲ್ಲಿಯತನಕ ಕುಲ್ದೀಪ್ ಆಡಿದ 123 ಒಡಿಐ ಇನಿಂಗ್ಸ್‌ಗಳಿಂದ 26.76ರ ಸರಾಸರಿಯಲ್ಲಿ 200 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇವರು ಅತ್ಯುತ್ತಮ ಬೌಲಿಂಗ್ ಸ್ಪೆಲ್ 25 ಕ್ಕೆ 6.
ಅತ್ಯಂತ ಕಡಿಮೆ ಒಡಿಐ ಪಂದ್ಯಗಳಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಭಾರತದ ಎರಡನೇ ಬೌಲರ್ ಎಂಬ ದಾಖಲೆ ಕುಲ್ದೀಪ್ ಯಾದವ್ ಅವರ ಹೆಸರಿನಲ್ಲಿದೆ. ಹಿರಿಯ ವೇಗಿ ಮೊಹಮ್ಮದ್ ಶಮಿ ಅವರು 104 ಪಂದ್ಯಗಳಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿ ಅಗ್ರ ಸ್ಥಾನದಲ್ಲಿದ್ದಾರೆ.
ಅನಿಲ್ ಕುಂಬ್ಳೆಗೆ ಅಗ್ರ ಸ್ಥಾನ
ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್ ಎಂಬ ದಾಖಲೆ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅಗ್ರ ಸ್ಥಾನದಲ್ಲಿದ್ದಾರೆ. ಕುಂಬ್ಳೆ 334 ಒಡಿಐ ವಿಕೆಟ್‌ಗಳನ್ನು ಕಿತ್ತಿದ್ದಾರೆ. 265 ವಿಕೆಟ್‌ಗಳ ಮೂಲಕ ಹರ್ಭಜನ್ ಸಿಂಗ್ ಎರಡನೇ ಸ್ಥಾನದಲ್ಲಿದ್ದಾರೆ. 232 ವಿಕೆಟ್‌ಗಳ ಮೂಲಕ ರವೀಂದ್ರ ಜಡೇಜಾ ಮೂರನೇ ಸ್ಥಾನದಲ್ಲಿದ್ದಾರೆ.
IND vs WI 2nd ODI: ಕ್ಯಾಂಬೆಲ್, ಹೋಪ್, ಜಂಗೋ ಶತಕಗಳ ಬಲದಿಂದ ಭಾರತಕ್ಕೆ 406 ರನ್ ಗುರಿ ನೀಡಿದ ವಿಂಡೀಸ್!
ಪ್ರಸಕ್ತ ವರ್ಷದಲ್ಲಿ ಕುಲ್ದೀಪ್ ಯಾದವ್ ಆಡಿದ 6 ಏಕದಿನ ಪಂದ್ಯಗಳಿಂದ 36ರ ಸರಾಸರಿಯಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 40 ರನ್‌ಗಳಿಗೆ 4 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಸ್ಪೆಲ್ ಆಗಿದೆ. ಇದೀಗ ಅವರು 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಯೋಜನೆಯಲ್ಲಿದ್ದಾರೆ ಹಾಗೂ ಅವರ ಸ್ಥಾನ ಭಾರತ ತಂಡದಲ್ಲಿ ಇನ್ನೂ ಖಚಿತವಾಗಿಲ್ಲ. ಹಾಗಾಗಿ ಅವರು ತಮಗೆ ಸಿಗುವ ಸೀಮಿತ ಅವಕಾಶಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಲು ಎದುರು ನೋಡುತ್ತಿದ್ದಾರೆ. ಮೊದಲನೇ ಪಂದ್ಯದಲ್ಲಿ ಇವರು 4 ವಿಕೆಟ್ ಕಿತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ, ಜಾನ್ ಕ್ಯಾಂಬೆಲ್, ನಾಯಕ ಶೇಯ್ ಹೋಪ್ ಹಾಗೂ ಆಮಿರ್ ಜಂಗೋ ಅವರ ಶತಕಗಳ ಬಲದಿಂದ 50 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 405 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಟೀಮ್ ಇಂಡಿಯಾಗೆ 406 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.