ನವದೆಹಲಿ: ಅಕ್ಟೋಬರ್ ತಿಂಗಳಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಹಲವು ಲೆಕ್ಕಾಚಾರಗಳು ನಡೆಯಲಿವೆ. 2026ರ ಏಷ್ಯಾ ಕ್ರೀಡಾಕೂಟದಲ್ಲಿ (Asia Games) ಪುರುಷರ ಕ್ರಿಕೆಟ್ ಟೂರ್ನಿ ನಡೆಯಲಿದೆ. ಭಾರತ ತಂಡ ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆದಿದ್ದು, ಸೆಪ್ಟಂಬರ್ 28 ರಂದು ಪಂದ್ಯವನ್ನು ಆಡಲಿದೆ. ಅಕ್ಟೋಬರ್ 1 ರಂದು ಸೆಮಿಫೈನಲ್ ಹಾಗೂ ಅಕ್ಟೋಬರ್ 3 ರಂದು ಪದಕದ ಸುತ್ತು ನಡೆಯಲಿದೆ. ಇದೇ ದಿನ ಭಾರತ ತಂಡ, ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಏಕದಿನ ಪಂದ್ಯವನ್ನು ಆಡಲಿದೆ. ಭಾರತ ತಂಡ ಏಷ್ಯಾ ಕ್ರೀಡಾಕೂಟದ ಫೈನಲ್‌ಗೆ ಅರ್ಹತೆ ಪಡೆದರೆ, ಭಾರತ ಏಕಕಾಲದಲ್ಲಿ ವಿಭಿನ್ನ ಸ್ಥಳಗಳಲ್ಲಿ ವಿವಿಧ ಪಂದ್ಯಗಳನ್ನು ಆಡಲಿದೆ.
ಜಪಾನ್‌ನಲ್ಲಿ ನಡೆಯಲಿರುವ ಏಷ್ಯಾ ಕ್ರೀಡಾಕೂಟದಲ್ಲಿ 20 ಓವರ್‌ಗಳ ಸ್ವರೂಪದಲ್ಲಿ ಕ್ರಿಕೆಟ್ ಪಂದ್ಯಗಳು ನಡೆಲಿವೆ. ಭಾರತ ಟಿ20 ತಂಡದ ನಾಯಕನೂ ಆಗಿರುವ ಶ್ರೇಯಸ್ ಅಯ್ಯರ್, ಭಾರತ ಏಕದಿನ ತಂಡದಲ್ಲಿಯೂ ಉಪ ನಾಯಕನ ಜವಾಬ್ದಾರಿಯನ್ನು ಹೊಂದಿದ್ದಾರೆ. ಹಾಗಾಗಿ ವೆಸ್ಟ್ ಇಂಡೀಸ್ ಏಕದಿನ ಸರಣಿಗೆ ಶ್ರೇಯಸ್ ಅಯ್ಯರ್ ಅಲಭ್ಯರಾಗಲಿದ್ದಾರೆ. ಏಷ್ಯಾ ಕ್ರೀಡಾಕೂಟದಲ್ಲಿ ನಿರತರಾಗುವ ಕಾರಣ, ಶ್ರೇಯಸ್ ವಿಂಡೀಸ್ ಏಕದಿನ ಸರಣಿಯನ್ನು ಕಳೆದುಕೊಳ್ಳಲಿದ್ದಾರೆ.
Duleep Trophy: ಏಕಾಂಗಿ ಹೋರಾಟ ನಡೆಸುತ್ತಿದ್ದ ತಿಲಕ್ ವರ್ಮಾರನ್ನು ಸ್ಲೆಡ್ಜ್ ಮಾಡಿದ ವೈಭವ್ ಸೂರ್ಯವಂಶಿ!
ಭಾರತ ತಂಡಕ್ಕೆ ಶುಭ ಹಾರೈಸಿದ ಬಿಸಿಸಿಐ ಅಧ್ಯಕ್ಷ
ಏತನ್ಮಧ್ಯೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಮಿಥುನ್ ಮನ್ಹಾಸ್ ಅವರು ಏಷ್ಯನ್ ಗೇಮ್ಸ್‌ಗೆ ತೆರಳುತ್ತಿರುವ ಭಾರತದ ಸಂಪೂರ್ಣ ಕ್ರೀಡಾಪಟುಗಳ ತಂಡಕ್ಕೆ ಶುಭ ಹಾರೈಸಿದ್ದಾರೆ. ಕ್ರಿಕೆಟ್ ತಂಡಗಳನ್ನೂ ಒಳಗೊಂಡಂತೆ ಭಾರತದ ಎಲ್ಲಾ ಕ್ರೀಡಾಪಟುಗಳು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲಿದ್ದು, ಚಿನ್ನದ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತರುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ತಂಡಗಳ ಯಶಸ್ಸಿನ ಬಗ್ಗೆಯೂ ವಿಶ್ವಾಸ ವ್ಯಕ್ತಪಡಿಸಿದ ಮನ್ಹಾಸ್, ಕ್ರೀಡಾಪಟುಗಳ ಕಠಿಣ ಪರಿಶ್ರಮ, ಉತ್ತಮ ಸಿದ್ಧತೆ ಮತ್ತು ತಂಡದಲ್ಲಿರುವ ಉತ್ಸಾಹವನ್ನು ಉಲ್ಲೇಖಿಸಿದರು.
“ಕ್ರಿಕೆಟ್ ತಂಡಗಳಿಗೆ ಮಾತ್ರವಲ್ಲ, ಏಷ್ಯನ್ ಗೇಮ್ಸ್‌ಗೆ ತೆರಳುತ್ತಿರುವ ನಮ್ಮ ಸಂಪೂರ್ಣ ತಂಡಕ್ಕೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಅವರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲಿ ಎಂದು ಆಶಿಸುತ್ತೇನೆ. ಇಡೀ ದೇಶವೇ ಅವರ ಬೆಂಬಲಕ್ಕೆ ನಿಂತಿದೆ. ನಾವೂ ಅವರ ಬೆಂಬಲಕ್ಕಿದ್ದೇವೆ. ಅವರಿಗೆ ಎಲ್ಲ ಯಶಸ್ಸು ಸಿಗಲಿ ಮತ್ತು ಅವರು ಚಿನ್ನದ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತರಲಿ ಎಂದು ಹಾರೈಸುತ್ತೇನೆ,” ಎಂದು ಮನ್ಹಾಸ್ ಅವರು ಎಎನ್‌ಐಗೆ ತಿಳಿಸಿದ್ದಾರೆ.
ಏಷ್ಯನ್ ಗೇಮ್ಸ್; ಭಾರತೀಯ ಕ್ರಿಕೆಟಿಗರಿಗಿಲ್ಲ 5 ಸ್ಟಾರ್ ಹೋಟೆಲ್ ಸೌಲಭ್ಯ
“ಖಂಡಿತವಾಗಿಯೂ ತಂಡದಿಂದ ಸಂಪೂರ್ಣ ಪ್ರಯತ್ನ ಇರಲಿದೆ. ಅವರು ನಡೆಸಿರುವ ಕಠಿಣ ಪರಿಶ್ರಮ ಮತ್ತು ತಂಡದಲ್ಲಿರುವ ಉತ್ಸಾಹವನ್ನು ಗಮನಿಸಿದರೆ, ಅವರು ಚಿನ್ನದ ಪದಕ ಗೆದ್ದು ದೇಶವನ್ನು ಹೆಮ್ಮೆಪಡುವಂತೆ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ,” ಎಂದು ಅವರು ಹೇಳಿದ್ದಾರೆ.