ತಿರುವನಂತಪುರಂ: ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ (IND vs WI) ಆರಂಭಕ್ಕೆ ಇನ್ನು ಕೇವಲ ಎರಡು ದಿನಗಳಷ್ಟೇ ಬಾಕಿ ಇದೆ. ಈ ಸಂದರ್ಭದಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ (Shubman Gill) ಗಾಯದ ಆತಂಕಕ್ಕೆ ಒಳಗಾಗಿದ್ದಾರೆ. ಶುಕ್ರವಾರ ತಿರುವನಂತಪುರಂನಲ್ಲಿ ನಡೆದಿದ್ದ ಅಭ್ಯಾಸದ ವೇಳೆ ಗಿಲ್ ಅವರ ಮೊಣಕೈಗೆ ಚೆಂಡು ಬಡಿದಿದೆ. ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ವೇಗಿ ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಮೇಲಕ್ಕೆ ಜಿಗಿದ ಚೆಂಡು ಗಿಲ್ ಅವರ ಮೊಣಕೈಗೆ ಬಡಿದಿದೆ. ಚೆಂಡು ತಾಗುತ್ತಿದ್ದಂತೆ ಗಿಲ್ ನೋವಿನಿಂದ ಬ್ಯಾಟಿಂಗ್ ನಿಲ್ಲಿಸಿದರು.
ಪಿಟಿಐ ವರದಿ ಪ್ರಕಾರ, ಗಿಲ್ ಸುಮಾರು 20 ನಿಮಿಷಗಳ ಕಾಲ ವೈದ್ಯಕೀಯ ಸಿಬ್ಬಂದಿಯಿಂದ ಚಿಕಿತ್ಸೆ ಪಡೆದರು. ಇದರಿಂದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೊದಲ ಪಂದ್ಯಕ್ಕೆ ಅವರು ಲಭ್ಯರಾಗುತ್ತಾರೆಯೇ ಎಂಬ ಆತಂಕ ಎದುರಾಗಿತ್ತು. ಆದರೆ ನಂತರ ಗಿಲ್ ಮತ್ತೆ ನೆಟ್ಸ್‌ಗೆ ಮರಳಿದರು. ಅವರು ಥ್ರೋಡೌನ್‌ಗಳನ್ನು ಎದುರಿಸಿ ಬ್ಯಾಟಿಂಗ್ ಅಭ್ಯಾಸವನ್ನೂ ಮುಂದುವರಿಸಿದರು. ಹೀಗಾಗಿ ಸದ್ಯಕ್ಕೆ ಈ ಗಾಯದಿಂದ ಅವರು ಮೊದಲ ಏಕದಿನ ಪಂದ್ಯದಿಂದ ಹೊರಗುಳಿಯುವ ಯಾವುದೇ ಅಧಿಕೃತ ಸೂಚನೆ ತಂಡದಿಂದ ಬಂದಿಲ್ಲ.
IND vs WI 1st ODI: ನಮನ್ ಧೀರ್‌ಗೆ ಚೊಚ್ಚಲ ಅವಕಾಶ? ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ಶುಭಮನ್ ಗಿಲ್ ಫಿಟ್‌ನೆಸ್ ಮೇಲೆ ನಿಗಾ
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಭಾರತ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ. ಹೀಗಾಗಿ ಅವರ ಫಿಟ್‌ನೆಸ್ ಮೇಲೆ ತಂಡದ ನಿರ್ವಹಣಾ ಸಿಬ್ಬಂದಿ ನಿಗಾ ಇರಿಸಲಿದ್ದಾರೆ. ಈ ಸರಣಿಯ ಮೂಲಕ ಭಾರತದ ಇಬ್ಬರು ಹಿರಿಯ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಏಕದಿನ ತಂಡಕ್ಕೆ ಮರಳುತ್ತಿದ್ದಾರೆ. ಇಬ್ಬರೂ ತಿರುವನಂತಪುರಂನಲ್ಲಿ ತಂಡದ ಅಭ್ಯಾಸದಲ್ಲಿ ಭಾಗವಹಿಸಿದ್ದಾರೆ.
2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹಿನ್ನೆಲೆಯಲ್ಲಿ ಭಾರತದ ಬ್ಯಾಟಿಂಗ್ ಸಂಯೋಜನೆಯನ್ನು ಅಂತಿಮಗೊಳಿಸಲು ಈ ಸರಣಿ ಪ್ರಮುಖವಾಗಿದ್ದು, ಗಿಲ್ ಅವರ ಫಿಟ್‌ನೆಸ್ ತಂಡದ ಪಾಲಿಗೆ ಮಹತ್ವದ್ದಾಗಿದೆ.
ಭಾರತ–ವೆಸ್ಟ್ ಇಂಡೀಸ್ ಏಕದಿನ ಸರಣಿ
1ನೇ ಏಕದಿನ ಪಂದ್ಯ – ಸೆಪ್ಟೆಂಬರ್ 27
2ನೇ ಏಕದಿನ ಪಂದ್ಯ– ಸೆಪ್ಟೆಂಬರ್ 30
3ನೇ ಏಕದಿನ ಪಂದ್ಯ – ಅಕ್ಟೋಬರ್ 3
ಪುದುಚೇರಿಯಲ್ಲಿ ಆಸ್ಟ್ರೇಲಿಯಾ ಎ ಎದುರು ಭಾರತ ಎ ತಂಡಕ್ಕೆ ಭರ್ಜರಿ ಜಯ!
ಶುಭಮನ್ ಗಿಲ್ ನಾಯಕತ್ವವನ್ನು ಶ್ಲಾಘಿಸಿದ ಮಾರ್ಕೆಲ್
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಭಾರತ ತಂಡದ ಬೌಲಿಂಗ್ ಕೋಚ್ ಮೊರ್ನೆ ಮಾರ್ಕೆಲ್, ನಾಯಕ ಶುಭಮನ್ ಗಿಲ್ ಅವರ ನಾಯಕತ್ವವನ್ನು ಗುಣಗಾನ ಮಾಡಿದ್ದಾರೆ. ಗಿಲ್ ಇದುವರೆಗೆ ತಂಡವನ್ನು ಅತ್ಯುತ್ತಮ ರೀತಿಯಲ್ಲಿ ಮುನ್ನಡೆಸಿದ್ದಾರೆ ಎಂದು ಮೊರ್ಕೆಲ್ ಹೇಳಿದ್ದಾರೆ.
“ಶುಭಮನ್ ಗಿಲ್ ಇದುವರೆಗೆ ತಂಡವನ್ನು ಮುನ್ನಡೆಸುವ ಮೂಲಕ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ನಾನು ಹೇಳಲೇಬೇಕು. ಆದರೆ ಹಿರಿಯ ಆಟಗಾರರು ತಂಡವನ್ನು ರೂಪಿಸುವ ರೀತಿಯ ಮೇಲೆ ನನಗೆ ಯಾವಾಗಲೂ ನಂಬಿಕೆ ಇದೆ. ತಂಡದ ವಿಭಿನ್ನ ಆಟಗಾರರು ತಮ್ಮ ಸಮಸ್ಯೆ ಅಥವಾ ಅಭಿಪ್ರಾಯಗಳನ್ನು ನಿರ್ದಿಷ್ಟ ಹಿರಿಯ ಆಟಗಾರರೊಂದಿಗೆ ಹೆಚ್ಚು ಆರಾಮವಾಗಿ ಹಂಚಿಕೊಳ್ಳಬಹುದು,” ಎಂದು ಮೊರ್ಕೆಲ್ ಹೇಳಿದ್ದಾರೆ.
“ನಮ್ಮ ತಂಡದಲ್ಲಿ ಸಾಕಷ್ಟು ಅನುಭವವಿದೆ ಮತ್ತು ಆಟಗಾರರ ನಡುವೆ ಉತ್ತಮ ಚರ್ಚೆಗಳು ನಡೆಯುತ್ತಿವೆ. ಇದು ತಂಡಕ್ಕೆ ಖಂಡಿತವಾಗಿಯೂ ಉತ್ತಮ ಸಂಗತಿ. ಹಿರಿಯ ಆಟಗಾರರ ರೂಪದಲ್ಲಿ ಇಂತಹ ಅನುಭವ ನಮ್ಮ ತಂಡದಲ್ಲಿರುವುದು ನಮ್ಮ ಅದೃಷ್ಟ,” ಎಂದು ಮೊರ್ಕೆಲ್ ಹೇಳಿದ್ದಾರೆ.