ನವದೆಹಲಿ: ಭಾರತದ ಟಿ20 ತಂಡದ (India's T20 Squad) ಆಯ್ಕೆ ಮತ್ತು ಆಟಗಾರರ ಸಂಯೋಜನೆ ಕುರಿತು ಬ್ಯಾಟಿಂಗ್ ದಿಗ್ಗಜ ಹಾಗೂ ಮಾಜಿ ನಾಯಕ ಸುನೀಲ್ ಗವಾಸ್ಕರ್ (Sunil Gavaskar) ತಮ್ಮ ಮಹತ್ವದ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಂಡದಲ್ಲಿ ಬ್ಯಾಟರ್ಗಳಿಗೆ ಹೆಚ್ಚಿನ ಆದ್ಯತೆ ನೀಡುವ ಭರದಲ್ಲಿ ಬೌಲಿಂಗ್ ವಿಭಾಗ ದುರ್ಬಲವಾಗುತ್ತಿದೆ. ಇದರಿಂದ ಭಾರತ ಪ್ರಮುಖ ಪಂದ್ಯಗಳಲ್ಲಿ ಸೋಲು ಕಾಣುವಂತಾಗಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿರುವ ಭಾರತ ತಂಡದ ಆಟಗಾರರ ಆಯ್ಕೆ ನೀತಿಯಲ್ಲಿ ಸಮತೋಲನ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟಿ20ಐ ಸರಣಿಯ ಹಿನ್ನೆಲೆಯಲ್ಲಿ ಮಾತನಾಡಿದ ಸುನೀಲ್ ಗವಾಸ್ಕರ್, ಭಾರತ ತಂಡದಲ್ಲಿ ಕನಿಷ್ಠ ನಾಲ್ವರು ನಿಯಮಿತ ಬೌಲರ್ಗಳು ಇರಬೇಕು ಎಂದು ಹೇಳಿದ್ದಾರೆ. ಐದನೇ ಮತ್ತು ಆರನೇ ಬೌಲರ್ಗಳ ಜವಾಬ್ದಾರಿಯನ್ನು ಆಲ್ರೌಂಡರ್ಗಳಿಗೆ ನೀಡಬಹುದು ಎಂಬುದು ಅವರ ಸಲಹೆ.
ಜಿಯೋಸ್ಟಾರ್ನಲ್ಲಿ ಮಾತನಾಡಿದ ಅವರು, “ಆ ಪಂದ್ಯದಲ್ಲಿ (ಐದನೇ ಪಂದ್ಯ) ನಮಗೆ ಭಾರತದ ಬೌಲಿಂಗ್ ನೋಡಲು ಸಾಧ್ಯವಾಗಲಿಲ್ಲ. ಒಂಬತ್ತು ಓವರ್ಗಳ ಪಂದ್ಯದಲ್ಲಿ ಭಾರತೀಯ ಬೌಲರ್ಗಳು ಹೇಗೆ ಬೌಲ್ ಮಾಡುತ್ತಿದ್ದರು ಎಂಬುದನ್ನು ನೋಡುವುದು ಆಸಕ್ತಿದಾಯಕವಾಗಿರುತ್ತಿತ್ತು. ಈ ಸರಣಿಯಿಂದ ನಾವು ಕಲಿಯಬೇಕಾದ ವಿಷಯವೆಂದರೆ, ಬೌಲಿಂಗ್ ವಿಭಾಗದಲ್ಲಿ ಕನಿಷ್ಠ ನಾಲ್ವರು ನಿಯಮಿತ ಬೌಲರ್ಗಳೊಂದಿಗೆ ಆಡಬೇಕು,” ಎಂದಿದ್ದಾರೆ.
ʻಜಸ್ಪ್ರೀತ್ ಬುಮ್ರಾಗೆ ಒಂದು ನ್ಯಾಯ, ಮೊಹಮ್ಮದ್ ಶಮಿಗೆ ಒಂದು ನ್ಯಾಯವೇ?: ಬಿಸಿಸಿಐ ವಿರುದ್ಧ ಕೈಫ್ ಕಿಡಿ!
ನಮನ್ ಧೀರ್ ಅವರಂತಹ ಬ್ಯಾಟಿಂಗ್ ಆಲ್ರೌಂಡರ್ ಎರಡು ಅಥವಾ ಮೂರು ಓವರ್ಗಳನ್ನು ಬೌಲ್ ಮಾಡಬಹುದು. ಅಕ್ಷರ್ ಪಟೇಲ್ ಅವರಂತಹ ಆಟಗಾರರು ತಮ್ಮ ನಾಲ್ಕು ಓವರ್ಗಳ ಕೋಟಾವನ್ನು ಪೂರ್ಣಗೊಳಿಸಬಲ್ಲರು. ಹೀಗಾಗಿ ನಾಲ್ವರು ಪ್ರಮುಖ ಬೌಲರ್ಗಳ ಜೊತೆಗೆ ಇಬ್ಬರು ಆಲ್ರೌಂಡರ್ಗಳನ್ನು ಆಯ್ಕೆ ಮಾಡುವುದು ಸೂಕ್ತ ಎಂದು ಗವಾಸ್ಕರ್ ಸಲಹೆ ನೀಡಿದ್ದಾರೆ.
8 ಬ್ಯಾಟರ್ಗಳನ್ನು ಆಡಿಸುವುದರಿಂದ ಬೌಲಿಂಗ್ ದುರ್ಬಲ
ಟಿ20 ಪಂದ್ಯಗಳಲ್ಲಿ ಹೆಚ್ಚು ಬ್ಯಾಟರ್ಗಳನ್ನು ತಂಡಕ್ಕೆ ಸೇರಿಸುವ ಪ್ರಯತ್ನದಲ್ಲಿ ಭಾರತ ತನ್ನ ಬೌಲಿಂಗ್ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಳ್ಳುತ್ತಿದೆ ಎಂಬುದು ಗವಾಸ್ಕರ್ ಅವರ ಪ್ರಮುಖ ಕಳವಳವಾಗಿದೆ.
“ನಾವು ಕೆಲವೊಮ್ಮೆ ಹಾರ್ದಿಕ್ ಪಾಂಡ್ಯಗೆ ಬದಲಿ ಆಟಗಾರನನ್ನು ಹುಡುಕುವ ಪ್ರಯತ್ನದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತೇವೆ. ಆದರೆ ಹಾರ್ದಿಕ್ ಪಾಂಡ್ಯಗೆ ಪರ್ಯಾಯ ಆಟಗಾರನನ್ನು ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಅವರ ಸಾಮರ್ಥ್ಯಕ್ಕೆ ಸಮನಾದ ಆಟಗಾರ ಸಿಗದಿದ್ದರೆ, ಸ್ವಲ್ಪ ವಿಭಿನ್ನವಾದ ಜವಾಬ್ದಾರಿಯನ್ನು ನಿರ್ವಹಿಸಬಲ್ಲ ಆಟಗಾರನನ್ನು ಆಯ್ಕೆ ಮಾಡಬೇಕು” ಎಂದು ಅವರು ಹೇಳಿದ್ದಾರೆ.
IND vs NZ: ಜಸ್ಪ್ರೀತ್ ಬುಮ್ರಾರ ವರ್ಕ್ಲೋಡ್ ಮ್ಯಾನೇಜ್ಮೆಂಟ್ ಬಗ್ಗೆ ರವಿ ಶಾಸ್ತ್ರಿ ಮಹತ್ವದ ಹೇಳಿಕೆ!
ಮುಂದುವರಿದು, “ನೀವು ಎಂಟನೇ ಕ್ರಮಾಂಕದವರೆಗೂ ಬ್ಯಾಟರ್ಗಳನ್ನು ಆಡಿಸಿದಾಗ ಬೌಲಿಂಗ್ ದುರ್ಬಲವಾಗುತ್ತದೆ. ಅಂತಹ ಕಾರಣಗಳಿಂದಲೇ ತಂಡ ಸೋಲನ್ನು ಎದುರಿಸುತ್ತದೆ” ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಹಾರ್ದಿಕ್ ಪಾಂಡ್ಯಗೆ ಪರ್ಯಾಯ ಹುಡುಕುವ ಅಗತ್ಯವೇನು?
ಹಾರ್ದಿಕ್ ಪಾಂಡ್ಯ ಭಾರತ ತಂಡದ ಪ್ರಮುಖ ಆಲ್ರೌಂಡರ್ ಆಗಿದ್ದಾರೆ. ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರ ಜೊತೆಗೆ ವೇಗದ ಬೌಲಿಂಗ್ನಲ್ಲಿಯೂ ಕೊಡುಗೆ ನೀಡಬಲ್ಲರು. ಹೀಗಾಗಿ ಅವರಂತಹ ಆಟಗಾರನನ್ನು ಹುಡುಕುವಾಗ ಅದೇ ರೀತಿಯ ಸಾಮರ್ಥ್ಯ ಹೊಂದಿರುವ ಆಟಗಾರನನ್ನೇ ಆಯ್ಕೆ ಮಾಡಬೇಕು ಎಂಬ ನಿರೀಕ್ಷೆ ಸೂಕ್ತವಲ್ಲ ಎಂದು ಗವಾಸ್ಕರ್ ಹೇಳಿದ್ದಾರೆ.
ಅದರ ಬದಲು ತಂಡದ ಅಗತ್ಯಕ್ಕೆ ತಕ್ಕಂತೆ ವಿಭಿನ್ನ ಜವಾಬ್ದಾರಿಗಳನ್ನು ನಿರ್ವಹಿಸಬಲ್ಲ ಆಟಗಾರರನ್ನು ಗುರುತಿಸಬೇಕು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಕೊಡುಗೆ ನೀಡಬಲ್ಲ ಆಲ್ರೌಂಡರ್ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.