ನವದೆಹಲಿ: ಭಾರತ ಮತ್ತು ವೆಸ್ಟ್ ಇಂಡೀಸ್ (IND vs WI) ನಡುವಿನ ಎರಡನೇ ಟೆಸ್ಟ್ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯವನ್ನು ಗೆದ್ದು ಭಾರತ ತಂಡ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಯೋಜನೆಯೊಂದಿಗೆ ಕಣಕ್ಕಿಳಿದಿದೆ. ಇನ್ನು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಭಾರತ ತಂಡ ಉತ್ತಮ ಆರಂಭ ಕಂಡಿದೆ. ಕೆ ಎಲ್ ರಾಹುಲ್ (KL Rahul) ಜೊತೆಗೆ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ (Yashasvi jaiswal) ಭರ್ಜರಿ ಶತಕ ಸಿಡಿಸಿದ್ದಾರೆ. 147 ಎಸೆತಗಳಲ್ಲಿ 16 ಬೌಂಡರಿಗಳೊಂದಿಗೆ 103 ರನ್ ಕಲೆಹಾಕಿದ್ದಾರೆ. ಇದರೊಂದಿಗೆ ಭಾರತ ತಂಡ ದೊಡ್ಡ ಮೊತ್ತದತ್ತಾ ದಾಪುಗಾಲು ಇಟ್ಟಿದೆ.
ತಮ್ಮ ಏಳನೇ ಶತಕದ ಮೂಲಕ ಯಶಸ್ವಿ ಜೈಸ್ವಾಲ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ವಿಶೇಷ ಮೈಲುಗಲ್ಲು ತಲುಪಿದ್ದಾರೆ. 24 ವರ್ಷ ವಯಸ್ಸು ತುಂಬುವ ಮೊದಲೇ ಏಳು ಟೆಸ್ಟ್ ಕ್ರಿಕೆಟ್ ಶತಕ ಸಿಡಿಸಿದ ಜಾವೇದ್ ಮಿಯಂದಾದ್, ಗ್ರೇಮ್ ಸ್ಮಿತ್, ಆಲಸ್ಟೈರ್ ಕುಕ್ ಮತ್ತು ಕೇನ್ ವಿಲಿಯಮ್ಸನ್ ಅವರನ್ನು ಒಳಗೊಂಡ ಎಲೈಟ್ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ.
IND vs WI 2nd Test: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದಕೊಂಡ ಭಾರತ
2022ರ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯಾವುದೇ ಯುವ ಆಟಗಾರ ಜೈಸ್ವಾಲ್ ಅವರಿಗಿಂತ ಹೆಚ್ಚು ಶತಕ ಗಳಿಸಿಲ್ಲ. ಇಂಗ್ಲೆಂಡ್‌ನ ಬೆನ್ ಡಕೆಟ್ ನಾಲ್ಕು ಶತಕ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ. ವಾಸ್ತವವಾಗಿ ಈ ಅವಧಿಯಲ್ಲಿ ಇತರ ಎಲ್ಲಾ ಭಾರತೀಯ ಆರಂಭಿಕ ಆಟಗಾರರು ಕೇವಲ ಆರು ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ಜೈಸ್ವಾಲ್ 2024ರ ವರ್ಷದಲ್ಲಿ ಮೂರು ಶತಕಗಳನ್ನು ಬಾರಿಸಿದ್ದರು. ಈ ವರ್ಷ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎರಡು ಶತಕ ಬಾರಿಸಿದ್ದರು. ಇದೀಗ ತವರು ನೆಲದಲ್ಲಿ ವಿಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲಿಯೂ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಇನ್ನು ಭಾರತೀಯ ಆಟಗಾರರಲ್ಲಿ ಸುನೀಲ್ ಗವಾಸ್ಕರ್ (ಏಳು ಬಾರಿ), ವೀರೇಂದ್ರ ಸೆಹ್ವಾಗ್ (ಮೂರು) ಮತ್ತು ಗೌತಮ್ ಗಂಭೀರ್ (ಎರಡು ಬಾರಿ) ಈ ಸಾಧನೆಯನ್ನು ಮಾಡಿದ್ದಾರೆ.
ಜೈಸ್ವಾಲ್, ಸುದರ್ಶನ್, ರಾಹುಲ್ ಆಕರ್ಷಕ ಬ್ಯಾಟಿಂಗ್
ಕೆ ಎಲ್ ರಾಹುಲ್ ಜೊತೆಗೆ ಆರಂಭಿಕರಾಗಿ ಆಡಿದ ಜೈಸ್ವಾಲ್, ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿದ್ದರು. ಬಳಿಕ ವಿಂಡೀಸ್ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು. ಇನ್ನೊಂದು ಬದಿಯಲ್ಲಿ ಕೆ ಎಲ್ ರಾಹುಲ್ 38 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಬಳಿಕ 3ನೇ ಕ್ರಮಾಂಕದಲ್ಲಿ ಮೈದಾನಕ್ಕೆ ಬಂದ ಸುದರ್ಶನ್ ಎಚ್ಚರಿಕೆಯ ಅಟವಾಡಿದರು. ಜೈಸ್ವಾಲ್ ಜೊತೆಗೆ 183 ರನ್ ಗಳ ಉತ್ತಮ ಜೊತೆಯಾಟದ ಜೊತೆಗೆ ಅರ್ಧಶತಕ ಬಾರಿಸಿದ್ದು, 83 ರನ್ ಗಳಿಸಿ ಶತಕ ಸಿಡಿಸಲು ಎದುರು ನೋಡುತ್ತಿದ್ದಾರೆ.
ಈವರೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಜೈಸ್ವಾಲ್ ಏಳು ಶತಕಗಳು, 12 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್ ಸರಾಸರಿಯಲ್ಲಿ 50ರ ಸಮೀಪದಲ್ಲಿದ್ದಾರೆ.