ನವದೆಹಲಿ: ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ (Sanju samson) ಅವರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin) ಬೇಸರ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿ ಪದೇ-ಪದೆ ಬದಲಾವಣೆಯನ್ನು ಮಾಡುತ್ತಿದ್ದರೆ, ಆಟಗಾರರಲ್ಲಿ ಅಭದ್ರತೆಯ ಭಾವನೆ ಉಂಟಾಗುತ್ತದೆ ಎಂದು ಹೇಳಿದ್ದಾರೆ. ಈ ಮಾತನ್ನು ಅಶ್ವಿನ್ ನೇರವಾಗಿ ಹೇಳಲಿಲ್ಲ. ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಕ್ರೀಡಾ ಪರ್ತಕರ್ತ ವಿಮಲ್ ಕುಮಾರ್ ಜತೆಗೆ ಹಾಸ್ಯಮಯ ಸಂಭಾಷಣೆಯಲ್ಲಿ ತೊಡಿಗಿದ್ದಾಗ, ಭಾರತ ತಂಡದ ಆಯ್ಕೆಯ ಬಗ್ಗೆ ಪ್ರವಾಪ ಮಾಡಿದರು. ಈ ವೇಳೆ ಇವರಿಬ್ಬರೂ ವಿಭಿನ್ ಪಾತ್ರಗಳ ಮೂಲಕ ಸಂಭಾಷಣೆ ನಡೆಸಿದ್ದಾರೆ.
ಇತ್ತೀಚೆಗೆ ತಮ್ಮ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಜಿಂಬಾಬ್ವೆ ಪ್ರವಾಸಕ್ಕೆ ಭಾರತ ಟಿ20ಐ ತಂಡದಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿರುವ ವಿವಾದಾತ್ಮಕ ನಿರ್ಧಾರವನ್ನು ವಿಶಿಷ್ಟ ರೀತಿಯಲ್ಲಿ ಪ್ರಸ್ತಾಪಿಸಿದರು. ಪತ್ರಕರ್ತ ವಿಮಲ್ ಕುಮಾರ್ ಆಯ್ಕೆ ಸಮಿತಿಯ ಸದಸ್ಯರ ಪಾತ್ರದಲ್ಲಿ ಹಾಗೂ ಅಶ್ವಿನ್, ಸಂಜು ಸ್ಯಾಮ್ಸನ್ ಪಾತ್ರದಲ್ಲಿ ಹಾಸ್ಯಮಯ ರೋಲ್‌ಪ್ಲೇ ನಡೆಸಿದರು. ಈ ಸಂಭಾಷಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
IND vs ENG: ಸಂಜು ಸ್ಯಾಮ್ಸನ್‌ಗೆ ಇದು ಕೊನೆಯ ಟಿ20ಐ ಸರಣಿ? ಸ್ಪಷ್ಟನೆ ನೀಡಿದ ಗೌತಮ್ ಗಂಭೀರ್!
ವಿಮಲ್ ಕುಮಾರ್ (ಆಯ್ಕೆದಾರರ ಪಾತ್ರದಲ್ಲಿ): "ನೀವು ಅತ್ಯುತ್ತಮ ಪ್ರದರ್ಶನ ನೀಡಿದ್ದೀರಿ. ನಿಮ್ಮ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಆದರೆ ನಾವು ಮೊದಲಿನಿಂದಲೇ ಏನು ನಿರ್ಧರಿಸಿದ್ದೇವೆ ಎಂಬುದು ನಿಮಗೂ ಗೊತ್ತಿದೆ," ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಶ್ವಿನ್ (ಸಂಜು ಸ್ಯಾಮ್ಸನ್ ಪಾತ್ರದಲ್ಲಿ): "ನನಗೆ ಯಾವುದೇ ವಿಶ್ರಾಂತಿ ಬೇಡ. ಬೇಕಾದರೆ ನನ್ನ ತಾಯಿ, ತಂದೆ ಮತ್ತು ಪತ್ನಿಯನ್ನೂ ಜಿಂಬಾಬ್ವೆಗೆ ಕರೆದುಕೊಂಡು ಬರುತ್ತೇನೆ. ನಾನು ಅಲ್ಲಿ ಆಡಬೇಕು. ನಾನು ಎಂದಿಗೂ ಬುಲಾವಾಯೊಗೆ ಹೋಗಿಲ್ಲ. ಜಿಂಬಾಬ್ವೆ ಹೆಮ್ಮೆಯ ಕ್ರಿಕೆಟ್ ರಾಷ್ಟ್ರ. 1999ರ ವಿಶ್ವಕಪ್ ಟೂರ್ನಿಯಲ್ಲಿ ಜಿಂಬಾಬ್ವೆ ಭಾರತವನ್ನು ಸೋಲಿಸಿದ್ದನ್ನು ನೋಡಿದ್ದೇನೆ. ಅದರ ಸೇಡು ತೀರಿಸಿಕೊಳ್ಳಬೇಕು. ದಯವಿಟ್ಟು ನನ್ನನ್ನು ತಂಡಕ್ಕೆ ಆಯ್ಕೆ ಮಾಡಿ. ನನಗೆ ವಿಶ್ರಾಂತಿ ಬೇಡ," ಎಂದು ಹೇಳಿದರು.
ಹಾಸ್ಯದಿಂದ ಆರಂಭವಾಗಿ ಕಹಿ ವಾಸ್ತವಕ್ಕೆ ತಿರುಗಿದ ಕಥೆ
ಅಶ್ವಿನ್ ಅವರ ಅದ್ಭುತ ಹಾಸ್ಯಪ್ರಜ್ಞೆ ಮತ್ತು ಸಂಜು ಸ್ಯಾಮ್ಸನ್ ಅವರ ಕಾಲ್ಪನಿಕ ʻ1999ರ ವಿಶ್ವಕಪ್ ಸೇಡಿನʼ ಸಂಭಾಷಣೆಯನ್ನು ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ನಕ್ಕರು. ಆದರೆ ಈ ಹಾಸ್ಯದ ಹಿಂದೆ ಕೇರಳದ ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಎದುರಿಸುತ್ತಿರುವ ಪರಿಸ್ಥಿತಿ ಕಠಿಣವಾಗಿದೆ.
ಕೆಲವೇ ವಾರಗಳ ಹಿಂದೆ, ಭಾರತದ ಐಸಿಸಿ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಂಜು ಸ್ಯಾಮ್ಸನ್, ಟೂರ್ನಿಯ ಶ್ರೇಷ್ಠ ಆಟಗಾರ (Player of the Tournament) ಪ್ರಶಸ್ತಿಗೆ ಭಾಜನರಾಗಿದ್ದರು. ಸೆಮಿಫೈನಲ್ ಹಾಗೂ ಫೈನಲ್ ಸೇರಿದಂತೆ ಮೂರು ಮಹತ್ವದ ಇನಿಂಗ್ಸ್‌ಗಳನ್ನು ಆಡಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಕೊಡುಗೆ ನೀಡಿದ್ದರು.
IND vs ZIM: ಜಿಂಬಾಬ್ವೆ ಟಿ20ಐ ಸರಣಿಗೆ ಭಾರತ ತಂಡ ಪ್ರಕಟ, ಸಂಜು ಸ್ಯಾಮ್ಸನ್ ಔಟ್!
ಆದರೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಕೇವಲ 6 ರನ್‌ಗಳಿಗೆ ಸೀಮಿತರಾದ ಬಳಿಕ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20ಐ ಪಂದ್ಯದಿಂದ ಅವರನ್ನು ಕೈಬಿಡಲಾಗಿದ್ದು, ನಂತರ ಜಿಂಬಾಬ್ವೆ ಪ್ರವಾಸದ ಭಾರತ ತಂಡದಲ್ಲಿಯೂ ಅವರಿಗೆ ಸ್ಥಾನ ನೀಡಲಿಲ್ಲ. ಈ ನಿರ್ಧಾರವು ಭಾರತೀಯ ತಂಡದ ಆಯ್ಕೆ ಪ್ರಕ್ರಿಯೆ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.