ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs ZIM: ಸಂಜು, ಅಕ್ಷರ್‌ ಇನ್‌; ಜಿಂಬಾಬ್ವೆ ಪಂದ್ಯಕ್ಕೆ ಭಾರತ ತಂಡದಲ್ಲಿ 3 ಬದಲಾವಣೆ ಸಾಧ್ಯತೆ!

ದಕ್ಷಿಣ ಆಫ್ರಿಕಾ ಎದುರು ಹೀನಾಯವಾಗಿ ಸೋಲು ಅನುಭವಿಸಿದ ಬಳಿಕ ಭಾರತ ತಂಡದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಹಾದಿ ಸ್ವಲ್ಪ ಕಠಿಣವಾಗಿದೆ. ಜಿಂಬಾಬ್ವೆ ಹಾಗೂ ವೆಸ್ಟ್‌ ಇಂಡೀಸ್‌ ವಿರುದ್ಧದ ಕೊನೆಯ ಎರಡೂ ಪಂದ್ಯಗಳಲ್ಲಿ ಭಾರತ ಗೆಲ್ಲಲೇಬೇಕಾದ ಒತ್ತಡಕ್ಕೆ ಒಳಗಾಗಿದೆ. ಜಿಂಬಾಬ್ವೆ ಪಂದ್ಯಕ್ಕೆ ಭಾರತದ ಪ್ಲೇಯಿಂಗ್‌ XI ಇರಬಹುದೆಂದು ಇಲ್ಲಿ ವಿವರಿಸಲಾಗಿದೆ.

ಜಿಂಬಾಬ್ವೆ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI.

ಅಹಮದಾಬಾದ್‌: ಬ್ಯಾಟಿಂಗ್‌ ವೈಫಲ್ಯದಿಂದಾಗಿ ಭಾರತ ತಂಡ, 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಸೂಪರ್‌-8ರ ಪಂದ್ಯದಲ್ಲಿ (IND vs SA) ದಕ್ಷಿಣ ಆಫ್ರಿಕಾ ಎದುರು 76 ರನ್‌ಗಳ ಆಘಾತಕಾರಿ ಸೋಲು ಅನುಭವಿಸಿತ್ತು. ಹರಿಣ ಪಡೆ ನೀಡಿದ್ದ 188 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಭಾರತ ತಂಡ (India), ಮಾರ್ಕೊ ಯೆನ್ಸನ್‌ ಹಾಗೂ ಕೇಶವ್‌ ಮಹಾರಾಜ್‌ ಅವರ ಬೌಲಿಂಗ್‌ಗೆ ನಲುಗಿತು ಹಾಗೂ ಕೇವಲ 111 ರನ್‌ಗಳಿಗೆ ಆಲ್‌ಔಟ್‌ ಆಯಿತು. ಇದರಿಂದಾಗಿ ಟೀಮ್‌ ಇಂಡಿಯಾದ ರನ್‌ ರೇಟ್‌ -3.800ಕ್ಕೆ ಕುಸಿದಿದೆ. ಇದರ ಪರಿಣಾಮ ಭಾರತ ತಂಡದ ಸೆಮಿಫೈನಲ್‌ ಹಾದಿ ಸ್ವಲ್ಪ ಕಠಿಣವಾಗಿದೆ.

ಭಾರತ ತಂಡ ಇದೀಗ ಕೊನೆಯ ಎರಡೂ ಪಂದ್ಯಗಳನ್ನು ಕ್ರಮವಾಗಿ ಜಿಂಬಾಬ್ವೆ ಹಾಗೂ ವೆಸ್ಟ್‌ ಇಂಡೀಸ್‌ ವಿರುದ್ಧ ಗೆಲ್ಲಲೇಬೇಕಾದ ಅಗತ್ಯಕ್ಕೆ ಒಳಗಾಗಿದೆ. ಫೆಬ್ರವರಿ 26 ರಂದು ಜಿಂಬಾಬ್ವೆ ಎದುರು ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಆಡಲಿದೆ. ಈ ಪಂದ್ಯಕ್ಕೆ ಭಾರತ ತಂಡ ಯಾವ ರೀತಿಯ ಪ್ಲೇಯಿಂಗ್‌ xi ಅನ್ನು ಆರಿಸಲಿದೆ ಎಂಬುದು ತೀವ್ರ ಕುತೂಹಲವನ್ನು ಮೂಡಿಸಿದೆ. ಅಭಿಷೇಕ್‌ ಶರ್ಮಾ ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯವನ್ನು ಮುಂದುವರಿಸಿದ್ದಾರೆ. ಇದು ಟೀಮ್‌ ಮ್ಯಾನೇಜ್‌ಮೆಂಟ್‌ಗೆ ತೀವ್ರ ತಲೆ ನೋವು ತಂದಿದೆ. ಇವರು ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಬಾರಿ ಡಕ್‌ಔಟ್‌ ಹಾಗೂ ಒಮ್ಮೆ 15 ರನ್‌ ಗಳಿಸಿದ್ದಾರೆ.

IND vs SA: ಸೂಪರ್‌-8ರಲ್ಲಿ ಭಾರತ ತಂಡದ ವಿಶ್ವಾಸವನ್ನು ಕುಗ್ಗಿಸಿದ ದಕ್ಷಿಣ ಆಫ್ರಿಕಾ!

ಸಂಜು ಸ್ಯಾಮ್ಸನ್‌ಗೆ ಅವಕಾಶ ಸಾಧ್ಯತೆ

ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುದ ಸಹಾಯಕ ಕೋಚ್‌ ರಯಾನ್‌ ಟೆನ್‌ ಡಿಶಾಟ್‌ ಜಿಂಬಾಬ್ವೆ ವಿರುದ್ಧದ ಮುಂದಿನ ಪಂದ್ಯಕ್ಕೆ ಸಂಜು ಸ್ಯಾಮ್ಸನ್‌ ಅವರನ್ನು ಪರಿಗಣಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಸಂಜು ಸ್ಯಾಮ್ಸನ್‌ ಅವರು ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಆಡಿ 22 ರನ್‌ ಗಳಿಸಿ ಔಟ್‌ ಆಗಿದ್ದರು. ಇದಾದ ಬಳಿಕ ಅಭಿಷೇಕ್‌ ಶರ್ಮಾ ತಂಡದ ಮರಳಿದ ಬಳಿಕ ಸಂಜು ಬೆಂಚ್‌ ಕಾದಿದ್ದರು. ಇಶಾನ್‌ ಕಿಶನ್‌ ಹಾಗೂ ಸಂಜು ಸ್ಯಾಮ್ಸನ್‌ ಇನಿಂಗ್ಸ್‌ ಆರಂಭಿಸಿದರ, ಎಡಗೈ ಹಾಗೂ ಬಲಗೈ ಸಂಯೋಜನೆ ಸಿಕ್ಕಂತಾಗುತ್ತದೆ.

ಅಕ್ಷರ್‌ ಪಟೇಲ್‌ ಕಮ್‌ಬ್ಯಾಕ್‌?

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಕ್ಷರ್‌ ಪಟೇಲ್‌ ಅವರ ಬದಲು ವಾಷಿಂಗ್ಟನ್‌ ಸುಂದರ್‌ ಅವರನ್ನು ಪರಿಗಣಿಸಲಾಗಿತ್ತು. ಇದು ಫಲಕಾರಿಯಾಗಲಿಲ್ಲ. ವಾಷಿಂಗ್ಟನ್‌ ಸುಂದರ್‌ ಅವರು ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ವಿಫಲರಾಗಿದ್ದರು. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಅಂದ ಹಾಗೆ ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಅಕ್ಷರ್‌ ಪಟೇಲ್‌ ಪ್ಲೇಯಿಂಗ್‌ XIಗೆ ಮರಳುವುದು ಬಹುತೇಕ ಖಚಿತ. ಅಕ್ಷರ್‌ ಪಟೇಲ್‌, ರಿಂಕು ಸಿಂಗ್‌ ಅವರ ಸ್ಥಾನದಲ್ಲಿ ಆಡಬಹುದು. ರಿಂಕು ದಕ್ಷಿಣ ಆಫ್ರಿಕಾ ಎದುರು ಸಿಕ್ಕ ಅವಕಾಶವನ್ನು ಕೈ ಚೆಲ್ಲಿಕೊಂಡಿದ್ದರು.

IND vs SA: ಔಟ್‌ ಆಫ್‌ ಫಾರ್ಮ್‌ ಅಭಿಷೇಕ್‌ ಶರ್ಮಾಗೆ ಮೊಹಮ್ಮದ್‌ ಆಮಿರ್‌ ಸಂದೇಶ!

ವಾಷಿಂಗ್ಟನ್‌ ಸ್ಥಾನಕ್ಕೆ ಕುಲ್ದೀಪ್‌

ಇನ್ನು ಸ್ಪಿನ್‌ ವಿಭಾಗದಲ್ಲಿ ವಾಷಿಂಗ್ಟನ್‌ ಸುಂದರ್‌ ಅವರ ಸ್ಥಾನಕ್ಕೆ ಕುಲ್ದೀಪ್‌ ಯಾದವ್‌ ಅವರನ್ನು ಆಡಿಸಬಹುದು. ಏಕಂದರೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣವು ಸ್ಪಿನ್‌ ಸ್ನೇಹಿ ಪಿಚ್‌ ಆಗಿದೆ. ಈ ಹಿನ್ನೆಲೆಯಲ್ಲಿ ಕುಲ್ದೀಪ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಆ ಮೂಲಕ ಆಫ್‌ ಸ್ಪಿನ್ನರ್‌ ಹೊರಗುಳಿಯುವ ಸಾಧ್ಯತೆ ಇದೆ.

ಜಿಂಬಾಬ್ವೆ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI: ಸಂಜು ಸ್ಯಾಮ್ಸನ್‌, ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ತಿಲಕ್‌ ವರ್ಮಾ, ಸೂರ್ಯಕುಮಾರ್‌ ಯಾದವ್‌ (ನಾಯಕ), ಹಾರ್ದಿಕ್‌ ಪಾಂಡ್ಯ, ಶಿವಂ ದುಬೆ, ಅಕ್ಷರ್‌ ಪಟೇಲ್‌, ಕುಲ್ದೀಪ್‌ ಯಾದವ್‌, ವರುಣ್‌ ಚಕ್ರವರ್ತಿ, ಜಸ್‌ಪ್ರೀತ್‌ ಬುಮ್ರಾ, ಅರ್ಷದೀಪ್‌ ಸಿಂಗ್‌