ನವದೆಹಲಿ: ದಕ್ಷಿಣ ಆಫ್ರಿಕಾ ಎ ವಿರುದ್ದದ ಮೂರು ಪಂದ್ಯಗಳ ಏಕದಿನ ಸರಣಿಗೆ (INDA vs SAA) ಭಾರತ ಎ ತಂಡವನ್ನು (India's A Squad) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬುಧವಾರ ಪ್ರಕಟಿಸಿದೆ. ಮುಂದಿನ ಏಕದಿನ ಏಕದಿನ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಈ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಎಡಗೈ ಬ್ಯಾಟ್ಸ್‌ಮನ್ ತಿಲಕ್ ವರ್ಮಾಗೆ (Tilak Verma) ನಾಯಕತ್ವವನ್ನು ನೀಡಲಾಗಿದೆ. ದೀರ್ಘಾವಧಿ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರು ಭಾರತ ಎ ತಂಡದಲ್ಲಿ ಇಲ್ಲ. ಅವರು ನೇರವಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನು ಆಡಲಿದ್ದಾರೆ.
ಭಾರತ ಎ ಹಾಗೂ ದಕ್ಷಿಣ ಎ ತಂಡಗಳ ನಡುವಣ ಮೂರು ಪಂದ್ಯಗಳು ಕ್ರಮವಾಗಿ ನವೆಂಬರ್ 13, 16 ಹಾಗೂ 19 ರಂದು ರಾಜ್‌ಕೋಟ್‌ನಲ್ಲಿ ನಡೆಯಲಿವೆ. ಈ ಎಲ್ಲಾ ಹಗಲು ರಾತ್ರಿ ಪಂದ್ಯಗಳಾಗಿವೆ. ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೇವಲ 50 ಓವರ್‌ಗಳ ಸ್ವರೂಪದಲ್ಲಿ ಸಕ್ರಿಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಭಾರತ ಎ ತಂಡದಲ್ಲಿ ಆಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ಆಡಲು ಮನಸು ಮಾಡಲಿಲ್ಲ.
IND vs AUS 4th T20: ಆಸ್ಟ್ರೇಲಿಯಾ ವಿರುದ್ಧದ 4ನೇ ಟಿ20ಗೆ ಭಾರತದ ಸಂಭಾವ್ಯ ಆಡುವ ಬಳಗ
ಭಾರತದ ಮಾಜಿ ನಾಯಕರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಆರಂಭಿಕ ಅಡೆತಡೆಗಳ ನಡುವೆಯೂ ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನವನ್ನು ತೋರಿದ್ದರು. ಮೊದಲ ಪಂದ್ಯದಲ್ಲಿ 8 ರನ್ ಗಳಿಸಿದ ರೋಹಿತ್, ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳಲ್ಲಿ 73 ಮತ್ತು 121 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇನ್ನು ಮೊದಲ ಎರಡು ಪಂದ್ಯಗಳ ಡಕ್‌ಔಟ್ ಆಗಿದ್ದ ವಿರಾಟ್ ಕೊಹ್ಲಿ, ಮೂರನೇ ಪಂದ್ಯದಲ್ಲಿ 74 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಆಸ್ಟ್ರೇಲಿಯಾದಲ್ಲಿ ಇಬ್ಬರೂ ಉತ್ತಮ ಪ್ರದರ್ಶನ ನೀಡದಿದ್ದರೆ ಪರಿಸ್ಥಿತಿ ವಿಭಿನ್ನವಾಗಿರುತ್ತಿತ್ತು.
ಭಾರತದ ಬ್ಯಾಟಿಂಗ್ ಐಕಾನ್ ಮತ್ತು ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ದಿಗ್ಗಜರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಬುಧವಾರ 37ನೇ ವರ್ಷಕ್ಕೆ ಕಾಲಿಟ್ಟರು. 2008ರಲ್ಲಿ ಪಶ್ಚಿಮ ದೆಹಲಿಯ ಬೀದಿಗಳಿಂದ ದುಂಡುಮುಖದ ಹದಿಹರೆಯದವನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ರಂಗಕ್ಕೆ ಬಂದ ನಂತರ, ಅನುಭವಿ ಬ್ಯಾಟ್ಸ್‌ಮನ್ ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆಯನ್ನು ಮಾಡಿದ್ದಾರೆ.
ಮೂರು ಪಂದ್ಯಗಳ ಏಕದಿನ ಸರಣಿಯ ಭಾರತ ಎ ತಂಡ: ತಿಲಕ್ ವರ್ಮಾ (ನಾಯಕ), ಋತುರಾಜ್ ಗಾಯಕ್ವಾಡ್ (ಉಪ ನಾಯಕ), ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಆಯುಷ್ ಬದೋನಿ, ನಿಶಾಂತ್ ಸಿಂಧು, ವಿಪ್ರಜ್ ನಿಗಮ್, ಮಾನವ್ ಸುತಾರ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಪ್ರಸಿಧ್ ಕೃಷ್ಣ, ಖಲೀಲ್ ಅಹ್ಮದ್, ಪ್ರಭ್ ಸಿಮ್ರನ್ ಸಿಂಗ್ (ವಿಕೆಟ್ ಕೀಪರ್)