ಢಾಕಾ: ಪುರುಷರ 2026ರ ಅಂಧರ ಕ್ರಿಕೆಟ್ ಏಷ್ಯಾಕಪ್ (Blind Cricket Asia Cup 2026) ಫೈನಲ್ ಪಂದ್ಯದ (IND vs PAK) ಫಲಿತಾಂಶ ಇದೀಗ ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದಕ್ಕೆ ಕಾರಣವಾಗಿದೆ. ಶುಕ್ರವಾರ ಢಾಕಾದಲ್ಲಿ ನಡೆದ ಟ್ರೋಫಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಭಾರತ ತಂಡ ನಿರಾಕರಿಸುವ ಮೂಲಕ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಮಳೆಯಿಂದಾಗಿ ಫೈನಲ್ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಪಂದ್ಯ ರೆಫರಿ ಪಾಕಿಸ್ತಾನ ತಂಡವನ್ನು ಚಾಂಪಿಯನ್ ಎಂದು ಘೋಷಿಸಿರುವುದು ಈ ವಿವಾದಕ್ಕೆ ಕಾರಣವಾಗಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಫೈನಲ್ ಪಂದ್ಯ ನಿರಂತರ ಮಳೆಯ ಕಾರಣ ಟಾಸ್ ಕೂಡ ಕಾಣದೆ ರದ್ದಾಗಿತ್ತು. ಆದರೆ, ಎರಡೂ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸುವ ಬದಲು ಉತ್ತಮ ನೆಟ್ ರನ್‌ರೇಟ್ ಹೊಂದಿದ್ದ ಪಾಕಿಸ್ತಾನಕ್ಕೆ ಏಕೈಕ ಚಾಂಪಿಯನ್ ಪಟ್ಟ ನೀಡಲಾಗಿದೆ.
ಟೂರ್ನಿ ಆಯೋಜಕರ ಈ ನಿರ್ಧಾರಕ್ಕೆ ಭಾರತೀಯ ತಂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪಂದ್ಯ ರದ್ದಾದ ಸಂದರ್ಭದಲ್ಲಿ ನೆಟ್ ರನ್‌ರೇಟ್ ಆಧರಿಸಿ ಚಾಂಪಿಯನ್ ನಿರ್ಧರಿಸುವುದು ಸರಿಯಲ್ಲ ಎಂಬುದು ಭಾರತದ ವಾದವಾಗಿದೆ. ಫೈನಲ್ ಪಂದ್ಯ ಮಳೆಯಿಂದ ರದ್ದಾದರೆ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಬೇಕಿತ್ತು ಎಂದು ಭಾರತ ಅಭಿಪ್ರಾಯಪಟ್ಟಿದೆ.
WPL 2027: ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡಕ್ಕೆ ಕ್ರಿಕೆಟ್ ನಿರ್ದೇಶಕರಾಗಿ ಮಹೇಲಾ ಜಯವರ್ಧನೆ ನೇಮಕ!
ಈ ಸಂಬಂಧ ಭಾರತದಲ್ಲಿನ ಅಂಧರ ಕ್ರಿಕೆಟ್ ಸಂಸ್ಥೆ (CABI) ಅಧಿಕೃತವಾಗಿ ಫಲಿತಾಂಶವನ್ನು ಪ್ರಶ್ನಿಸಿದೆ. ಎರಡೂ ತಂಡಗಳಿಗೆ ಜಂಟಿ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿರುವ ಭಾರತೀಯ ಅಂಧರ ಕ್ರಿಕೆಟ್ ಮಂಡಳಿ, ಪಾಕಿಸ್ತಾನವನ್ನು ಏಕೈಕ ಚಾಂಪಿಯನ್ ಎಂದು ಘೋಷಿಸಿರುವ ನಿರ್ಧಾರ ಟೂರ್ನಿಯ ತಾಂತ್ರಿಕ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೇಳಿದೆ.
“ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯ ಮಳೆಯಿಂದ ರದ್ದಾದ ಬಳಿಕ ಪಾಕಿಸ್ತಾನವನ್ನು 2026ರ ಪುರುಷರ ಅಂಧರ ಕ್ರಿಕೆಟ್ ಏಷ್ಯಾಕಪ್ ಏಕೈಕ ವಿಜೇತ ತಂಡವೆಂದು ಘೋಷಿಸಿರುವ ನಿರ್ಧಾರವನ್ನು ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (CABI) ತೀವ್ರವಾಗಿ ಖಂಡಿಸುತ್ತದೆ. ಈ ನಿರ್ಧಾರವನ್ನು ಸಂಸ್ಥೆ ಸ್ಪಷ್ಟವಾಗಿ ತಿರಸ್ಕರಿಸುತ್ತದೆ. ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಗುರುತಿಸಬೇಕು ಎಂಬುದು ನಮ್ಮ ನಿಲುವು,” ಎಂದು ಸಿಎಬಿಎಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಡಬ್ಲ್ಯುಬಿಸಿಸಿ ತಾಂತ್ರಿಕ ಸಮಿತಿಯ ಮೊರೆ ಹೋದ ಸಿಎಬಿಐ
ಟೂರ್ನಿಯ ತಾಂತ್ರಿಕ ನಿಯಮಗಳ ಸೆಕ್ಷನ್ 27ರ ವ್ಯಾಖ್ಯಾನದ ಬಗ್ಗೆಯೂ ಸಿಎಬಿಐ ಪ್ರಶ್ನೆ ಎತ್ತಿದೆ. ಈ ನಿಯಮವು ಸಮಬಲದ ಫೈನಲ್ ಪಂದ್ಯದ ಪರಿಸ್ಥಿತಿಗೆ ಸಂಬಂಧಿಸಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. ಈ ಬಗ್ಗೆ ಸ್ಪಷ್ಟನೆ ಪಡೆಯಲು ವಿಶ್ವ ಅಂಧರ ಕ್ರಿಕೆಟ್ ಮಂಡಳಿ (WBCC) ತಾಂತ್ರಿಕ ಸಮಿತಿಯನ್ನು ಸಂಪರ್ಕಿಸಿರುವುದಾಗಿ ತಿಳಿಸಿದೆ.
CABI ಪ್ರಕಾರ, ಟೂರ್ನಿಯ ತಾಂತ್ರಿಕ ನಿಯಮಗಳ ಸೆಕ್ಷನ್ 27ರ ಎರಡೂ ವಾಕ್ಯಗಳು ಸಮಬಲದ ಫೈನಲ್ ಪಂದ್ಯದ ಸಂದರ್ಭವನ್ನು ಉಲ್ಲೇಖಿಸುತ್ತವೆ. ಈ ನಿಯಮದ ಆಧಾರದ ಮೇಲೆ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಘೋಷಿಸಬೇಕೆಂದು CABI ಮನವಿ ಮಾಡಿತ್ತು. ಆರಂಭದಲ್ಲಿ WBCC ತಾಂತ್ರಿಕ ಸಮಿತಿಯೂ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿತ್ತು ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಹೀಗಾಗಿ, ಮಳೆಯಿಂದಾಗಿ ಫೈನಲ್ ಪಂದ್ಯ ನಡೆಯದಿದ್ದರೂ ಪಾಕಿಸ್ತಾನಕ್ಕೆ ಏಕೈಕ ಚಾಂಪಿಯನ್ ಪಟ್ಟ ನೀಡಿರುವ ನಿರ್ಧಾರ ಇದೀಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ.