ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

U-19 Asia Cup 2026: ಆಫ್ಘನ್‌ ವಿರುದ್ಧ ಗೆದ್ದ ಭಾರತಕ್ಕೆ ಫೈನಲ್‌ನಲ್ಲಿ ಪಾಕಿಸ್ತಾನ ಎದುರಾಳಿ!

ಅಂಡರ್-19 ಏಷ್ಯಾಕಪ್ ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿದ ಭಾರತ ಕಿರಿಯರ ತಂಡ ಫೈನಲ್‌ಗೆ ಪ್ರವೇಶಿಸಿದೆ. ನಾಯಕ ಲಕ್ಷ್ಯ ರೈಚಂದಾನಿ ಅಜೇಯ 93 ರನ್ ಗಳಿಸಿದರೆ, ವಿನೀತ್ 57 ರನ್ ಸಿಡಿಸಿದರು. ನವೆಂಬರ್ 14ರಂದು ಪ್ರಶಸ್ತಿಗಾಗಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತದ ಎದುರಿಸಲಿದೆ.

ಅಫ್ಘಾನಿಸ್ತಾನ ವಿರುದ್ಧ ಭಾರತ ಕಿರಿಯರ ತಂಡಕ್ಕೆ ಭರ್ಜರಿ ಜಯ.

ನವದೆಹಲಿ: ಅಂಡರ್-19 ಏಷ್ಯಾಕಪ್ (U19 Asia Cup 2026) ಟೂರ್ನಿಯಲ್ಲಿ ಭಾರತ ಯುವ ಕ್ರಿಕೆಟ್ ತಂಡ ಅಮೋಘ ಪ್ರದರ್ಶನ ಮುಂದುವರಿಸಿದೆ. ಅಫ್ಘಾನಿಸ್ತಾನ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿರುವ ಭಾರತ ಫೈನಲ್‌ಗೆ ಪ್ರವೇಶಿಸಿದೆ. ಇದೀಗ ನವೆಂಬರ್ 14ರಂದು ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ(IND vs PAK) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ.

ಒಮಾನ್‌ನ ಅಲ್ ಅಮೆರತ್‌ನಲ್ಲಿ ಗುರುವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಅಫ್ಘಾನಿಸ್ತಾನ ಒಂದು ಹಂತದಲ್ಲಿ 36 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 143 ರನ್ ಗಳಿಸಿತ್ತು. ಆದರೆ ಭಾರತದ ಬೌಲರ್‌ಗಳು ಮಧ್ಯಮ ಓವರ್‌ಗಳಲ್ಲಿ ಪರಿಣಾಮಕಾರಿ ದಾಳಿ ನಡೆಸಿ ಎದುರಾಳಿ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು.

ಆರ್ಯವೀರ್ ಸೆಹ್ವಾಗ್‌ಗೆ ವಿರಾಟ್ ಕೊಹ್ಲಿ ನೀಡಿದ ಸಲಹೆ ವೈರಲ್

ಅಫ್ಘಾನಿಸ್ತಾನದ ಪರ ನೊಮನ್ ಸಲಾರ್ಜಾಯ್‌ ಮತ್ತು ಶಾ ಫೈಸಲ್ ರಹೀಮಿ ತಲಾ 51 ರನ್ ಗಳಿಸಿದರು. ನಾಯಕ ಸೊಹೈಲ್ ಖಾನ್ ಅಜೇಯ 36 ರನ್ ಸಿಡಿಸಿದರು. ಅಂತಿಮವಾಗಿ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತು. ಭಾರತದ ಪರ ಇಶಾನ್ ಸೂದ್ ಮೂರು ವಿಕೆಟ್ ಪಡೆದು ಮಿಂಚಿದರೆ, ಆರ್ಯನ್ ಸಾವ್ಸಾನಿ ಎರಡು ವಿಕೆಟ್ ಕಬಳಿಸಿದರು.

ನಾಯಕ ಲಕ್ಷ್ಯ ರೈಚಂದಾನಿ ಭರ್ಜರಿ ಬ್ಯಾಟಿಂಗ್

228 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ಲಕ್ಷ್ಯ ರೈಚಂದಾನಿ ಮತ್ತು ಆರ್ಯವೀರ್ ಸೆಹ್ವಾಗ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಈ ಜೋಡಿ 117 ರನ್‌ಗಳ ಅಮೂಲ್ಯ ಜೊತೆಯಾಟವಾಡಿತು. ಆರ್ಯವೀರ್ ಸೆಹ್ವಾಗ್ 57 ಎಸೆತಗಳಲ್ಲಿ 51 ರನ್ ಗಳಿಸಿ ಔಟಾದರು. ಮತ್ತೊಂದೆಡೆ ನಾಯಕ ಲಕ್ಷ್ಯ ರೈಚಂದಾನಿ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರಿಸಿ ಅಫ್ಘಾನಿಸ್ತಾನದ ಬೌಲರ್‌ಗಳನ್ನು ಕಾಡಿದರು. ಅವರು 90 ಎಸೆತಗಳಲ್ಲಿ ಅಜೇಯ 93 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೇವಲ ಏಳು ರನ್‌ಗಳಿಂದ ಶತಕ ವಂಚಿತರಾದರು.



ಮತ್ತೊಂದು ತುದಿಯಲ್ಲಿ ವಿಕೆ ವಿನೀತ್ ಉತ್ತಮ ಸಾಥ್ ನೀಡಿದರು. ಅವರು ಅಜೇಯ 57 ರನ್ ಗಳಿಸಿದರು. ಅಂತಿಮವಾಗಿ ಭಾರತ 36.5 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 230 ರನ್ ಗಳಿಸುವ ಮೂಲಕ ಎಂಟು ವಿಕೆಟ್‌ಗಳ ಜಯ ದಾಖಲಿಸಿತು. ಇನ್ನೂ 79 ಎಸೆತಗಳು ಬಾಕಿ ಇರುವಾಗಲೇ ಭಾರತ ಗೆಲುವಿನ ಗುರಿ ತಲುಪಿದ್ದು ತಂಡದ ಪ್ರಾಬಲ್ಯವನ್ನು ತೋರಿಸಿತು.



ಫೈನಲ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ

ಅಫ್ಘಾನಿಸ್ತಾನ ವಿರುದ್ಧದ ಗೆಲುವಿನೊಂದಿಗೆ ಭಾರತ ಅಂಡರ್-19 ಏಷ್ಯಾಕಪ್ ಫೈನಲ್‌ಗೆ ಅರ್ಹತೆ ಪಡೆದಿದೆ. ಮತ್ತೊಂದೆಡೆ ಪಾಕಿಸ್ತಾನವೂ ಫೈನಲ್ ಪ್ರವೇಶಿಸಿರುವುದರಿಂದ ಇದೀಗ ಪ್ರಶಸ್ತಿಗಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಕಳೆದ ಆವೃತ್ತಿಯ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಪಾಕಿಸ್ತಾನ ಚಾಂಪಿಯನ್ ಆಗಿತ್ತು. ಹೀಗಾಗಿ ಈ ಬಾರಿ ಪಾಕಿಸ್ತಾನ ವಿರುದ್ಧ ಗೆದ್ದು ಪ್ರಶಸ್ತಿ ಗೆಲ್ಲುವುದರ ಜೊತೆಗೆ ಹಿಂದಿನ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳುವ ಅವಕಾಶವೂ ಭಾರತ ತಂಡಕ್ಕಿದೆ. ನವೆಂಬರ್ 14ರಂದು ನಡೆಯಲಿರುವ ಫೈನಲ್ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.