ನವದೆಹಲಿ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) 2025-27ರ ಫೈನಲ್ ತಲುಪುವ ಭಾರತದ (India) ಹಾದಿ ಮತ್ತಷ್ಟು ಕಠಿಣವಾಗಿದೆ. ಕೇಪ್ ಟೌನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ಸರಣಿ ಗೆಲುವು ದಾಖಲಿಸಿದ ಬೆನ್ನಲ್ಲೇ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಹೀಗಾಗಿ ಶುಭಮನ್ ಗಿಲ್ ನಾಯಕತ್ವದ ಭಾರತ ತಂಡಕ್ಕೆ ಉಳಿದಿರುವ ಏಳು ಟೆಸ್ಟ್ ಪಂದ್ಯಗಳು ಅತ್ಯಂತ ನಿರ್ಣಾಯಕವಾಗಿವೆ. ಫೈನಲ್ಗೆ ಅರ್ಹತೆ ಪಡೆಯಬೇಕಾದರೆ ಭಾರತ ಬಹುತೇಕ ಎಲ್ಲಾ ಪಂದ್ಯಗಳಲ್ಲೂ ಗೆಲುವು ದಾಖಲಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಭಾರತ ತಂಡ ಸದ್ಯ 11 ಪಂದ್ಯಗಳಿಂದ 68 ಅಂಕಗಳು ಹಾಗೂ ಶೇ.51.52ರ ಗೆಲುವಿನ ಅಂಕಗಳ ಸರಾಸರಿ (PCT) ಹೊಂದಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಭಾರತಕ್ಕೆ ಇನ್ನು ನ್ಯೂಜಿಲೆಂಡ್ ವಿರುದ್ಧ ವಿದೇಶದಲ್ಲಿ ಎರಡು ಟೆಸ್ಟ್ ಪಂದ್ಯಗಳು ಹಾಗೂ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ಬಾಕಿ ಇದೆ. ಡಬ್ಲ್ಯುಟಿಸಿ ಫೈನಲ್ಗೆ ಅಗ್ರ ಎರಡು ತಂಡಗಳು ಮಾತ್ರ ಅರ್ಹತೆ ಪಡೆಯಲಿರುವುದರಿಂದ ಭಾರತ ಉಳಿದ ಪಂದ್ಯಗಳಲ್ಲಿ ಎಚ್ಚರಿಕೆಯಿಂದ ಆಡಬೇಕಿದೆ. ಅದರಲ್ಲೂ ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಸರಣಿ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದು 10 ವರ್ಷಗಳ ಬಳಿಕ ಅಗ್ರ ಸ್ಥಾನಕ್ಕೇರಿದ ದಕ್ಷಿಣ ಆಫ್ರಿಕಾ!
ನ್ಯೂಜಿಲೆಂಡ್ ವಿರುದ್ಧ ಎರಡೂ ಪಂದ್ಯ ಗೆಲ್ಲಲೇಬೇಕು
ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದರೆ, ತಂಡದ ಗೆಲುವಿನ ಅಂಕಗಳ ಸರಾಸರಿ (PCT) ಶೇ.58.97ಕ್ಕೆ ಏರಿಕೆಯಾಗಲಿದೆ. ಇದು ಫೈನಲ್ ರೇಸ್ನಲ್ಲಿ ಭಾರತಕ್ಕೆ ದೊಡ್ಡ ಉತ್ತೇಜನ ನೀಡಲಿದೆ. ಆದರೆ, ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದರೆ ಭಾರತದ PCT ಶೇ.43.59ಕ್ಕೆ ಕುಸಿಯಲಿದೆ. ಆಗ ಉಳಿದ ಐದು ಪಂದ್ಯಗಳಲ್ಲಿ ಗೆಲುವು ದಾಖಲಿಸುವುದು ಮಾತ್ರವಲ್ಲದೆ, ಇತರ ತಂಡಗಳ ಫಲಿತಾಂಶಗಳ ಮೇಲೂ ಭಾರತ ಅವಲಂಬಿಸಬೇಕಾಗುತ್ತದೆ.
ಒಂದು ವೇಳೆ ನ್ಯೂಜಿಲೆಂಡ್ ವಿರುದ್ಧ ಎರಡೂ ಪಂದ್ಯಗಳಲ್ಲಿ ಸೋತು, ನಂತರ ಆಸ್ಟ್ರೇಲಿಯಾ ವಿರುದ್ಧದ ಐದು ಟೆಸ್ಟ್ಗಳನ್ನೂ ಗೆದ್ದರೂ ಭಾರತದ PCT ಶೇ.59.26ಕ್ಕೆ ಮಾತ್ರ ತಲುಪಲಿದೆ. ಹೀಗಾಗಿ ಇತರ ತಂಡಗಳ ಫಲಿತಾಂಶಗಳು ಭಾರತದ ಫೈನಲ್ ಪ್ರವೇಶದ ಮೇಲೆ ಪ್ರಭಾವ ಬೀರಲಿವೆ.
ಮತ್ತೊಂದೆಡೆ, ಉಳಿದಿರುವ ಏಳು ಟೆಸ್ಟ್ ಪಂದ್ಯಗಳಲ್ಲೂ ಭಾರತ ಗೆಲುವು ಸಾಧಿಸಿದರೆ PCT ಶೇ.70.37ಕ್ಕೆ ಏರಿಕೆಯಾಗಲಿದೆ. ಇದರಿಂದ ಫೈನಲ್ ಪ್ರವೇಶದ ಸ್ಪರ್ಧೆಯಲ್ಲಿ ಭಾರತ ಬಲಿಷ್ಠ ಸ್ಥಾನ ಪಡೆಯಲಿದೆ. ಆರು ಪಂದ್ಯಗಳನ್ನು ಗೆದ್ದರೂ PCT ಶೇ.64.81ಕ್ಕೆ ತಲುಪಲಿದೆ. ಆದರೆ ಎರಡು ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಸೋಲು ಕಂಡರೆ ಫೈನಲ್ ಕನಸು ಮತ್ತಷ್ಟು ಕಠಿಣವಾಗಲಿದೆ.
IND vs NZ 5th T20I: ಭಾರತದ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್ ವಿವರ!
ಭಾರತ ತಂಡದ ಉಳಿದ ಏಳು ಟೆಸ್ಟ್ ಪಂದ್ಯಗಳ ವೇಳಾಪಟ್ಟಿ
ನ್ಯೂಜಿಲೆಂಡ್ ಪ್ರವಾಸ (ವಿದೇಶದಲ್ಲಿ) – 2 ಟೆಸ್ಟ್ ಪಂದ್ಯಗಳು
ಮೊದಲ ಟೆಸ್ಟ್-ನವೆಂಬರ್ 19-23, 2026, ವೆಲ್ಲಿಂಗ್ಟನ್
ಎರಡನೇ ಟೆಸ್ಟ್-ನವೆಂಬರ್ 27-ಡಿಸೆಂಬರ್ 1, 2026, ಕ್ರೈಸ್ಟ್ಚರ್ಚ್
ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ – 5 ಟೆಸ್ಟ್ ಪಂದ್ಯಗಳು
ಮೊದಲ ಟೆಸ್ಟ್-ಜನವರಿ 21-25, 2027, ನಾಗ್ಪುರ
ಎರಡನೇ ಟೆಸ್ಟ್-ಜನವರಿ 29-ಫೆಬ್ರವರಿ 2, 2027, ಚೆನ್ನೈ
ಮೂರನೇ ಟೆಸ್ಟ್-ಫೆಬ್ರವರಿ 11-15, 2027, ಗುವಾಹಟಿ
ನಾಲ್ಕನೇ ಟೆಸ್ಟ್-ಫೆಬ್ರವರಿ 19-23, 2027, ರಾಂಚಿ
ಐದನೇ ಟೆಸ್ಟ್-ಫೆಬ್ರವರಿ 27-ಮಾರ್ಚ್ 3, 2027,ಅಹಮದಾಬಾದ್