ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಭಾರತ 358 ರನ್‌ಗಳಿಗೆ ಆಲ್‌ಔಟ್‌, ಎರಡನೇ ದಿನ ಇಂಗ್ಲೆಂಡ್‌ ಮೇಲುಗೈ!

ಬೆನ್‌ ಸ್ಟೋಕ್ಸ್‌ ಮಾರಕ ಬೌಲಿಂಗ್‌ ಹಾಗೂ ಝ್ಯಾಕ್‌ ಕ್ರಾವ್ಲಿ ಮತ್ತು ಬೆನ್‌ ಡಕೆಟ್‌ ಅವರ ಬ್ಯಾಟಿಂಗ್‌ ಬಲದಿಂದ ಇಂಗ್ಲೆಂಡ್‌ ತಂಡ ನಾಲ್ಕನೇ ಟೆಸ್ಟ್‌ ಪಂದ್ಯದ ಎರಡನೇ ದಿನ ಮೇಲುಗೈ ಸಾಧಿಸಿದೆ. ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 358 ರನ್‌ಗಳಿಗೆ ಆಲ್‌ಔಟ್‌ ಆದ ಬಳಿಕ ಇಂಗ್ಲೆಂಡ್‌ ಬ್ಯಾಟಿಂಗ್‌ ಆರಂಭಿಸಿ ಎರಡನೇ ದಿನದಾಟದ ಅಂತ್ಯಕ್ಕೆ ಪ್ರಥಮ ಇನಿಂಗ್ಸ್‌ನಲ್ಲಿ ಒಂದು ವಿಕೆಟ್‌ ನಷ್ಟಕ್ಕೆ 225 ರನ್‌ ಗಳಿಸಿದೆ.

IND vs ENG: ಮ್ಯಾಂಚೆಸ್ಟರ್‌ ಟೆಸ್ಟ್‌ ಎರಡನೇ ದಿನ ಆಂಗ್ಲರು ಮೇಲುಗೈ!

ಮ್ಯಾಂಚೆಸ್ಟರ್‌ ಟೆಸ್ಟ್‌ ಎರಡನೇ ದಿನ ಮೇಲುಗೈ ಸಾಧಿಸಿದ ಇಂಗ್ಲೆಂಡ್‌ ತಂಡ.

Profile Ramesh Kote Jul 24, 2025 11:15 PM

ಮ್ಯಾಂಚೆಸ್ಟರ್‌: ಬೆನ್‌ ಸ್ಟೋಕ್ಸ್‌ (Ben Stokes) ಮಾರಕ ಬೌಲಿಂಗ್‌ ದಾಳಿ ಹಾಗೂ ಝ್ಯಾಕ್‌ ಕ್ರಾವ್ಲಿ ಮತ್ತು ಬೆನ್‌ ಡಕೆಟ್‌ (Ben Duckett) ಅವರ ಬ್ಯಾಟಿಂಗ್ ಬಲದಿಂದ ಇಂಗ್ಲೆಂಡ್‌ ತಂಡ ನಾಲ್ಕನೇ ಟೆಸ್ಟ್‌ ಪಂದ್ಯದ(IND vs ENG) ಎರಡನೇ ದಿನ ಮೇಲುಗೈ ಸಾಧಿಸಿದೆ. ಮೊದಲನೇ ದಿನ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಭಾರತ ತಂಡ, ಎರಡನೇ ದಿನ ಅದೇ ಲಯವನ್ನು ಮುಂದುವರಿಸುವಲ್ಲಿ ವಿಫಲವಾಯಿತು. ಇದರ ಪರಿಣಾಮ ಟೀಮ್‌ ಇಂಡಿಯಾ ಪ್ರಥಮ ಇನಿಂಗ್ಸ್‌ನಲ್ಲಿ 358 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ತಂಡ, ಆರಂಭಿಕ ಬ್ಯಾಟ್ಸ್‌ಮನ್‌ಗಳ ಅರ್ಧಶತಕದ ಬಲದಿಂದ ಎರಡನೇ ದಿನದಾಟದ ಅಂತ್ಯಕ್ಕೆ 46 ಓವರ್‌ಗಳಿಗೆ ಎರಡು ವಿಕೆಟ್‌ ನಷ್ಟಕ್ಕೆ 225 ರನ್‌ಗಳನ್ನು ಕಲೆ ಹಾಕಿದೆ ಹಾಗೂ ಇನ್ನೂ 133 ರನ್‌ಗಳ ಹಿನ್ನಡೆಯಲ್ಲಿದೆ.

ಭಾರತ ತಂಡ ಪ್ರಥಮ ಇನಿಂಗ್ಸ್‌ ಮುಗಿಸಿದ ಬಳಿಕ ಇಂಗ್ಲೆಂಡ್‌ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆಯಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಝ್ಯಾಕ್‌ ಕ್ರಾವ್ಲಿ ಹಾಗೂ ಬೆನ್‌ ಡಕೆಟ್‌ ಜೋಡಿ ಭಾರತೀಯ ಮಾರಕ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿತು. ಈ ಇಬ್ಬರೂ ದೀರ್ಘಾವಧಿ ಬ್ಯಾಟ್‌ ಮಾಡಿ ಮುರಿಯದ ಮೊದಲನೇ ವಿಕೆಟ್‌ಗೆ 166 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಆತಿಥೇಯ ಇಂಗ್ಲೆಂಡ್‌ ಭರ್ಜರಿ ಆರಂಭವನ್ನು ತಂದುಕೊಟ್ಟರು.

IND vs ENG: ಭಾರತ ಟೆಸ್ಟ್‌ ತಂಡದಲ್ಲಿ ರಿಷಭ್‌ ಪಂತ್‌ ಸ್ಥಾನಕ್ಕೆ ಸೇರ್ಪಡೆಯಾದ ಎನ್‌ ಜಗದೀಶನ್‌!

ಝ್ಯಾಕ್‌ ಕ್ರಾವ್ಲಿ ಭರ್ಜರಿ ಬ್ಯಾಟಿಂಗ್‌

ಈ ಸರಣಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಝ್ಯಾಕ್‌ ಕ್ರಾವ್ಲಿ ಈ ಇನಿಂಗ್ಸ್‌ನಲ್ಲಿ ಎಲ್ಲರ ಗಮನ ಸೆಳೆದರು. ಅವರು ಆಡಿದ 113 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 13 ಬೌಂಡರಿಗಳೊಂದಿಗೆ 84 ರನ್‌ ಗಳಿಸಿದರು. ಆ ಮೂಲಕ ಶತಕದಂಚಿನಲ್ಲಿ ಆಡುತ್ತಿದ್ದರು. ಆದರೆ, 32ನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಸ್ಪಿನ್‌ ಮೋಡಿ ಮಾಡಿ ಝ್ಯಾಕ್‌ ಕ್ರಾವ್ಲಿಗೆ ಪೆವಿಲಿಯನ್‌ ದಾರಿ ತೋರಿಸಿದರು.



ಬೆನ್‌ ಡಕೆಟ್‌ ಅರ್ಧಶತಕ

ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಬೆನ್‌ ಡಕೆಟ್‌ ಅವರು ಭಾರತೀಯ ಬೌಲರ್‌ಗಳನ್ನು ದೀರ್ಘಾವಧಿ ಕಾಡಿದರು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದ ಅವರು ಶಿಸ್ತಿನ ಆಟವನ್ನು ಪ್ರದರ್ಶಿಸಿದರು. ಅವರು ಆಡಿದ 100 ಎಸೆತಗಳಲ್ಲಿ 13 ಮನಮೋಹಕ ಬೌಂಡರಿಗಳೊಂದಿಗೆ 94 ರನ್‌ ಗಳಿಸಿದರು. ಆದರೆ, ಶತಕದಂಚಿನಲ್ಲಿ ಡೆಬ್ಯೂಟಂಟ್‌ ಅನ್ಶುಲ್‌ ಕಾಂಬೋಜ್‌ಗೆ ವಿಕೆಟ್‌ ಒಪ್ಪಿಸಿದರು. ಇದೀಗ ಒಲ್ಲಿ ಪೋಪ್‌ (20*) ಹಾಗೂ ಜೋ ರೂಟ್‌ (11*) ಅವರು ಮೂರನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.



ಭಾರತ ತಂಡ 358 ರನ್‌ಗಳಿಗೆ ಆಲ್‌ಔಟ್‌

ಇದಕ್ಕೂ ಮುನ್ನ ಗುರುವಾರ ಬೆಳಿಗ್ಗೆ 4 ವಿಕೆಟ್‌ ನಷ್ಟಕ್ಕೆ 264 ರನ್‌ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿದ ಭಾರತ ತಂಡ, ಮೊದಲನೇ ದಿನದಲ್ಲಿ ತೋರಿದ ಲಯವನ್ನು ಮುಂದುವರಿಸಲು ವಿಫಲವಾಯಿತು. ಬೆನ್‌ ಸ್ಟೋಕ್ಸ್‌ ಮಾರಕ ದಾಳಿಗೆ ನಲುಗಿದ ಟೀಮ್‌ ಇಂಡಿಯಾ ಎರಡನೇ ದಿನ ಕನಿಷ್ಠ 100 ರನ್‌ ಕೂಡ ಕಲೆ ಹಾಕಲು ಸಾಧ್ಯವಾಗಿಲ್ಲ. ಭಾರತ ಪ್ರಥಮ ಇನಿಂಗ್ಸ್‌ನಲ್ಲಿ 114.1 ಓವರ್‌ಗಳಿಗೆ 358 ರನ್‌ಗಳಿಗೆ ಆಲ್‌ಔಟ್‌ ಆಯಿತು.

IND vs ENG: ಅರ್ಧಶತಕ ಬಾರಿಸಿ ಎಂಎಸ್‌ ಧೋನಿ ದಾಖಲೆ ಮುರಿದ ರಿಷಭ್‌ ಪಂತ್!

ಎರಡನೇ ದಿನ ಬ್ಯಾಟಿಂಗ್‌ ವೈಫಲ್ಯ

ಭಾರತದ ಪರ ಯಾವೊಬ್ಬ ಬ್ಯಾಟ್ಸ್‌ಮನ್‌ ಎರಡನೇ ದಿನ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ. ಮೊದಲನೇ ದಿನ ಉತ್ತಮ ಆರಂಭ ಪಡೆದಿದ್ದ ರವೀಂದ್ರ ಜಡೇಜಾ (20), ಎರಡನೇ ದಿನ ತಕ್ಷಣ ವಿಕೆಟ್‌ ಒಪ್ಪಿಸಿದರು. ಅವರು 85ನೇ ಓವರ್‌ನಲ್ಲಿ ಜೋಫ್ರಾ ಆರ್ಚರ್‌ಗೆ ಔಟ್‌ ಆದರು. ನಂತರ ಜೊತೆಯಾದ ಶಾರ್ದುಲ್‌ ಠಾಕೂರ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಜೋಡಿ ಕೆಲ ಕಾಲ ಆಂಗ್ಲರ ಮಾರಕ ದಾಳಿಯನ್ನು ಮೆಟ್ಟಿ ನಿಂತು, 48 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಅತ್ಯುತ್ತಮ ಬ್ಯಾಟ್‌ ಮಾಡುತ್ತಿದ್ದ ಶಾರ್ದುಲ್‌ ಠಾಕೂರ್‌ 41 ರನ್‌ಗಳಿಸಿ ಅರ್ಧಶತಕದಂಚಿನಲ್ಲಿ ಔಟ್‌ ಆದರು.



ಗಾಯದಲ್ಲಿಯೇ ಅರ್ಧಶತಕ ಬಾರಿಸಿದ ರಿಷಭ್‌ ಪಂತ್‌

ಮೊದಲನೇ ದಿನ 37 ರನ್‌ ಗಳಿಸಿ ಗಾಯಕ್ಕೆ ತುತ್ತಾಗಿದ್ದ ರಿಷಭ್‌ ಪಂತ್‌, ಎರಡನೇ ದಿನ ಬ್ಯಾಟಿಂಗ್‌ಗೆ ಬಂದ ಎಲ್ಲರ ಗೌರವಕ್ಕೆ ಪಾತ್ರರಾದರು. ಗುರುವಾರ ನೋವು ನಿವಾರಕಗಳನ್ನು ತೆಗೆದುಕೊಂಡು ಆಡಿದ್ದ ಪಂತ್‌, ಅಗತ್ಯ ಫುಟ್‌ವರ್ಕ್‌ ಇಲ್ಲದೆ ಬ್ಯಾಟ್‌ ಬೀಸಿದರು. ಅವರು 75 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಮೂರು ಬೌಂಡರಿಗಳೊಂದಿಗೆ 54 ರನ್‌ಗಳನ್ನು ಗಳಿಸಿದರು. ಆ ಮೂಲಕ ಈ ಸರಣಿಯಲ್ಲಿ ಮತ್ತೊಂದು ಅರ್ಧಶತಕವನ್ನು ಪೂರ್ಣಗೊಳಿಸಿದರು. ಅಂತಿಮವಾಗಿ ಅವರು ಜೋಫ್ರಾ ಆರ್ಚರ್‌ಗೆ ಶರಣಾದರು.

ಬೆನ್‌ ಸ್ಟೋಕ್ಸ್‌ 5 ವಿಕೆಟ್‌ ಸಾಧನೆ

ಇಂಗ್ಲೆಂಡ್‌ ತಂಡದ ಎರಡನೇ ದಿನ ಮಿಂಚಿನ ಬೌಲಿಂಗ್‌ ದಾಳಿ ನಡೆಸಿದ ಬೆನ್‌ ಸ್ಟೋಕ್ಸ್‌, 5 ವಿಕೆಟ್‌ಗಳ ಸಾಧನೆ ಮಾಡಿದರು. ಇವರು ಬೌಲ್‌ ಮಾಡಿದ 24 ಓವರ್‌ಗಳಲ್ಲಿ 72 ರನ್‌ ನೀಡಿ 5 ವಿಕೆಟ್‌ ಕಿತ್ತರು. ಇವರಿಗೆ ಸಾಥ್‌ ನೀಡಿದ ಜೋಫ್ರಾ ಆರ್ಚರ್‌ 26.1 ಓವರ್‌ಗಳಿಗೆ 73 ರನ್‌ ನೀಡಿದರೂ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು.