ನವದೆಹಲಿ: ಬಹುನಿರೀಕ್ಷಿತ 2026ರ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳು ಮುಖಾಮುಖಿಯಾಗುವುದು ಅನುಮಾನ. ಈಗಾಗಲೇ ದ್ವಿಪಕ್ಷೀಯ ಸರಣಿಗಳಿಂದ ಹಿಂದೆ ಸರಿದಿರುವ ಸಾಂಪ್ರದಾಯಿಕ ಎದುರಾಳಿಗಳು ಐಸಿಸಿ ಹಾಗೂ ಎಸಿಸಿ ಟೂರ್ನಿಗಳಲ್ಲಿ ಮಾತ್ರ ಆಡುತ್ತಿವೆ. ಅದರಂತೆ ಫೆಬ್ರವರಿ 15 ರಂದು ಈ ಎರಡೂ ತಂಡಗಳ ಪಂದ್ಯ ಕೊಲಂಬೊದಲ್ಲಿ ನಡೆಸಲು ನಿಗದಿಯಾಗಿದೆ. ಆದರೆ, ಪಾಕಿಸ್ತಾನ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡ, ಟೀಮ್ ಇಂಡಿಯಾ ವಿರುದ್ಧ ಆಡಲು ನಿರಾಕರಿಸಿದೆ. ಆದರೂ ಮುಂದಿನ ದಿನಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ನಿಲುವನ್ನು ಬದಲಿಸಲಿದೆ ಎಂದು ಸ್ಪಿನ್ ದಿಗ್ಗಜ ಆರ್ ಅಶ್ವಿನ್ (R Ashwin) ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಭಾರತ ಹಾಗೂ ಪಾಕಿಸ್ತಾನ ಪಂದ್ಯ ರದ್ದಾದರೆ, ಐಸಿಸಿ ಸುಮಾರು 2200 ಕೋಟಿ ರು. ಗಳ ನಷ್ಟವನ್ನು ಎದುರಿಸಬೇಕಾಗುತ್ತದೆ. ಈ ನಷ್ಟ ಸಂಭವಿಸಿದ್ದಲ್ಲಿ ಐಸಿಸಿ ಪಾಕಿಸ್ತಾನಕ್ಕೆ ಲಭ್ಯವಾಗುವ ವಾರ್ಷಿಕ ಆದಾಯದ ಪಾಲನ್ನು ತಡೆಹಿಡಿಯುವ ಸಾಧ್ಯತೆಯೂ ಇದೆ. ಈ ಪರಿಸ್ಥಿತಿ ಐಸಿಸಿಗೆ ಸಾಧ್ಯವಾಗದಂತಿದ್ದು, ಪಾಕಿಸ್ತಾನಕ್ಕೂ ಸಹ ಅನುಕೂಲಕರವಲ್ಲ. ಈ ಹಿನ್ನೆಲೆಯಲ್ಲಿ ಐಸಿಸಿ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಧ್ಯಮ ಮಾರ್ಗವನ್ನು ಕಂಡುಕೊಳ್ಳುತ್ತವೆ ಎಂಬ ನಂಬಿಕೆಯನ್ನು ಆರ್.ಅಶ್ವಿನ್ ವ್ಯಕ್ತಪಡಿಸಿದ್ದಾರೆ.
IND vs AFG: ಅಫ್ಘಾನಿಸ್ತಾನ ತಂಡಕ್ಕೆ 5 ಪೆನಾಲ್ಟಿ ರನ್ ಕೊಟ್ಟ ಭಾರತ! ಇದಕ್ಕೆ ಕಾರಣವೇನು?
ಭಾರತ vs ಪಾಕಿಸ್ತಾನ ಪಂದ್ಯ ನಡೆಯಲಿದೆ: ಅಶ್ವಿನ್ ಭವಿಷ್ಯ
"ನೂರು ಪ್ರತಿಶತ ಭಾರತ–ಪಾಕಿಸ್ತಾನ ಪಂದ್ಯ ನಡೆಯುತ್ತದೆ. ಅದು ನಡೆಯುತ್ತದೆ ಎಂಬ ಭಾವನೆ ನನಗಿದೆ. ಮುಂದಿನ 3–4 ದಿನಗಳಲ್ಲಿ ಈ ನಿರ್ಧಾರಗಳು ಬದಲಾಗಬಹುದು. ಇದು ನನ್ನ ಊಹೆ ಮತ್ತು ನಾನು ಭಾರತ–ಪಾಕಿಸ್ತಾನ ಮುಖಾಮುಖಿಯನ್ನು ನೋಡಲು ಬಯಸುತ್ತೇನೆ. ಏಕೆಂದರೆ ಇದರಲ್ಲಿ ಬಹಳಷ್ಟು ವ್ಯಾಪಾರಿಕ ನಿರ್ಧಾರಗಳು ಒಳಗೊಂಡಿವೆ. ಪಾಕಿಸ್ತಾನಕ್ಕೆ ಇನ್ನೊಂದು ಸಮಸ್ಯೆಯೂ ಇದೆ. ಪ್ರಸಾರಕರಿಗೆ ಉಂಟಾಗುವ ನಷ್ಟಕ್ಕೆ ಪರಿಹಾರ ನೀಡಬೇಕಾಗಬಹುದು, ಇದರಿಂದ ಆರ್ಥಿಕ ನಷ್ಟವೂ ಎದುರಾಗುತ್ತದೆ. ಆದ್ದರಿಂದ ಅವರು ಒಪ್ಪಂದದ ಮಾರ್ಗವನ್ನು ಹುಡುಕಲೇಬೇಕು ಎಂದು ನಾನು ಭಾವಿಸುತ್ತೇನೆ. ಇದರಲ್ಲಿ ಒಳಗೊಂಡಿರುವ ಆರ್ಥಿಕ ಅಂಶಗಳಿಂದ ಇತರ ಐಸಿಸಿ ಸದಸ್ಯ ರಾಷ್ಟ್ರಗಳಿಗೂ ನಷ್ಟ ಉಂಟಾಗಲಿದೆ. ಐಸಿಸಿ ಸಭೆಯಲ್ಲಿ, ಪಾಕಿಸ್ತಾನದ ಕಾರಣದಿಂದ ನಮಗೆ ಈ ನಷ್ಟಗಳು ಆಗುತ್ತಿವೆ ಎಂದು ಇತರ ಸದಸ್ಯರು ದೂರಬಹುದು. ಪಿಎಸ್‌ಎಲ್ ಕೂಡ ನಡೆಯಬೇಕಿದೆ. ಪಿಎಸ್‌ಎಲ್‌ನಲ್ಲಿಯೂ ಆಟಗಾರರು ‘ನಾವು ಬರೋದಿಲ್ಲ’ ಎಂದು ಹೇಳುವ ಸಾಧ್ಯತೆ ಇದೆ,” ಎಂದು ಆರ್. ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ ‘ಆಶ್ ಕಿ ಬಾತ್’ನಲ್ಲಿ ತಿಳಿಸಿದ್ದಾರೆ.
ಭಾರತ ವಿರುದ್ಧ ಪಾಕ್ ಪಂದ್ಯ ಬಹಿಷ್ಕರಿಸಿದ್ದಕ್ಕೆ ಕೋಚ್ ಗೌತಮ್ ಗಂಭೀರ್ ಪ್ರತಿಕ್ರಿಯೆ
ಪಾಕಿಸ್ತಾನಕ್ಕೆ ಯಾವುದೇ ಸಮಂಜಸ ಕಾರಣ ಇಲ್ಲ
ಈ ಹಿಂದೆ ಪ್ರಯಾಣ ಭದ್ರತಾ ಸಮಸ್ಯೆಗಳ ಹಿನ್ನೆಲೆಯಲ್ಲಿ ಕೆಲವು ತಂಡಗಳು ಐಸಿಸಿ ಟೂರ್ನಿಗಳನ್ನು ಬಹಿಷ್ಕರಿಸಿರುವ ಉದಾಹರಣೆಗಳಿವೆ ಎಂದು ಅಶ್ವಿನ್ ಹೇಳಿದರು. ಆದರೆ ಈ ಬಾರಿ ಪಾಕಿಸ್ತಾನ ಪಂದ್ಯದಿಂದ ಹಿಂದೆ ಸರಿಯುತ್ತಿರುವ ಕಾರಣ ಭಿನ್ನವಾಗಿದ್ದು, ಪಂದ್ಯವನ್ನು ಬಹಿಷ್ಕರಿಸಲು ಅವರಿಗೆ ಯಾವುದೇ ಸಮಂಜಸವಾದ ಆಧಾರ ಅಥವಾ ಸೂಕ್ತವಾದ ಕಾರಣ ಇಲ್ಲವೆಂದು ಅವರು ಅಭಿಪ್ರಾಯಪಟ್ಟರು.
“1996ರ ಐಸಿಸಿ ವಿಶ್ವಕಪ್ ಮತ್ತು 2003ರ ವಿಶ್ವಕಪ್ ಸಂದರ್ಭಗಳನ್ನೂ ನಾವು ಗಮನಿಸಬಹುದು. ಆಗ ಕೆಲವು ತಂಡಗಳು ಭದ್ರತಾ ಕಾರಣಗಳಿಂದ ಶ್ರೀಲಂಕಾಕ್ಕೆ ಪ್ರಯಾಣಿಸಲು ನಿರಾಕರಿಸಿದ್ದವು. 2003ರ ವಿಶ್ವಕಪ್‌ನಲ್ಲಿಯೂ ಭದ್ರತೆ ಹಾಗೂ ಪ್ರಯಾಣ ಸಂಬಂಧಿತ ಸಮಸ್ಯೆಗಳ ಕಾರಣದಿಂದ ಕೆಲವು ಪಂದ್ಯಗಳನ್ನು ಕೈಬಿಡಲಾಗಿತ್ತು. ಆದರೆ ಅವುಗಳೆಲ್ಲಾ ಸ್ಥಳಗಳಿಗೆ ಸಂಬಂಧಿತ ಸಮಸ್ಯೆಗಳಾಗಿದ್ದವು. ಈಗಿನ ಪರಿಸ್ಥಿತಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಟಸ್ಥ ವೇದಿಕೆಯಲ್ಲಿ ಪಂದ್ಯ ಆಡಬೇಕಾಗಿದೆ. ಇಲ್ಲಿ ಸ್ಥಳದ ಕುರಿತಾಗಿಯೂ ಯಾವುದೇ ಸಮಸ್ಯೆ ಇಲ್ಲ. ಇಂತಹ ಸಂದರ್ಭದಲ್ಲೂ ನಿರ್ದಿಷ್ಟ ಪ್ರತಿಸ್ಪರ್ಧಿಯ ವಿರುದ್ಧ ಆಡಲು ನಿರಾಕರಿಸುವುದು ಅನೇಕ ಅಂಶಗಳಲ್ಲಿ ಸ್ವೀಕಾರಾರ್ಹವಲ್ಲ. ಉತ್ತಮ ವಿವೇಕ ಗೆದ್ದು, ಈ ಪಂದ್ಯಗಳು ನಡೆಯುತ್ತವೆ ಎಂಬ ಆಶಯ ನನಗಿದೆ,” ಎಂದು ಅಶ್ವಿನ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.