ಲಖನೌ: ಇಲ್ಲಿನ ಏಕನಾ ಕ್ರೀಡಾಂಗಣದಲ್ಲಿ ನಡೆಯಬೇಕಿರುವ ನಾಲ್ಕನೇ ಟಿ20 ಪಂದ್ಯದಿಂದ (IND vs SA) ಭಾರತ ತಂಡದ ಉಪ ನಾಯಕ ಶುಭಮನ್ ಗಿಲ್ (Shubman Gill) ಹೊರ ನಡೆದಿದ್ದಾರೆ. ಅವರು ಸದ್ಯ ಪಾದದ ಗಾಯದಿಂದ ಬಳಲುತ್ತಿದ್ದಾರೆ. ಈ ಕಾರಣದಿಂದಾಗಿ ಅವರು ನಾಲ್ಕನೇ ಕದನದಿಂದ ಹೊರಗುಳಿದಿದ್ದಾರೆ. ತರಬೇತಿ ಸಮಯದಲ್ಲಿ ಅವರು ಗಾಯಕ್ಕೆ ತುತ್ತಾಗಿದ್ದರು. ಅಂದ ಹಾಗೆ ಈ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಒಂದು ವೇಳೆ ಗಿಲ್ ಅಲಭ್ಯರಾದರೆ, ಅವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಇನಿಂಗ್ಸ್ ಆರಂಭಿಸಬಹುದು.
ತರಬೇತಿಯ ಸಮಯದಲ್ಲಿ ಅವರ ಕಾಲಿನ ಬೆರಳಿಗೆ ಗಾಯವಾಗಿದೆ. ಇದು ಮುಂಬರುವ ಪಂದ್ಯಗಳಲ್ಲಿ ಅವರು ಆಡುವುದನ್ನು ತಡೆಯುತ್ತದೆ ಎಂದು ತಂಡದ ಮೂಲಗಳು ಪಿಟಿಐಗೆ ತಿಳಿಸಿವೆ. ಗಿಲ್ ಬದಲಿಗೆ ಸಂಜು ಸ್ಯಾಮ್ಸನ್ ಆರಂಭಿಕನಾಗಿ ಆಡಬಹುದು. ತಂಡದ ಆಡಳಿತ ಮಂಡಳಿಯು ಅವರ ಗಾಯದ ಬಗ್ಗೆ ಬಹಳ ಜಾಗರೂಕವಾಗಿದೆ ಮತ್ತು ಅವರು ಸಾಧ್ಯವಾದಷ್ಟು ಬೇಗ ಚೇತರಿಸಿಕೊಳ್ಳಬೇಕೆಂದು ಬಯಸುತ್ತದೆ.
IND vs SA 4th T20I: ಏಕನಾ ಕ್ರೀಡಾಂಗಣದಲ್ಲಿ ದಟ್ಟ ಮಂಜು, ತಡವಾಗಲಿರುವ ಟಾಸ್!
ತಂಡದ ಮೂಲ ಹೇಳಿದ್ದೇನು?
"ಹೌದು, ಅವರು ಬ್ಯಾಟ್ ಮಾಡುವಾಗ ಕಾಲಿನ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಅದು ಗಂಭೀರವಾಗಿ ಕಾಣುತ್ತಿಲ್ಲ, ಆದರೆ ಹೆಚ್ಚಿನ ಪರೀಕ್ಷೆಗಳು ಮತ್ತು ಸ್ಕ್ಯಾನ್‌ಗಳು ಸ್ಪಷ್ಟ ಚಿತ್ರಣವನ್ನು ಒದಗಿಸುತ್ತವೆ. ಉತ್ತರ ಭಾರತದ ಹವಾಮಾನವನ್ನು ಸಹ ಪರಿಗಣಿಸಬೇಕಾಗುತ್ತದೆ, ಏಕೆಂದರೆ ಇದು ಚೇತರಿಕೆಯ ಸಮಯವನ್ನು ಹೆಚ್ಚು ಸಮಯ ತೆಗೆದುಕೊಳ್ಳಬಹುದು," ಎಂದು ತಂಡದ ಮೂಲವೊಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದೆ.
IND vs SA: ವಿರಾಟ್ ಕೊಹ್ಲಿಯ ದೊಡ್ಡ ದಾಖಲೆ ಮುರಿಯುವ ಸನಿಹದಲ್ಲಿರುವ ಅಭಿಷೇಕ್ ಶರ್ಮಾ!
2-1 ಮನ್ನಡೆ ಸಾಧಿಸಿರುವ ಭಾರತ
ಭಾರತ ತಂಡ ಮೊದಲನೇ ಪಂದ್ಯವನ್ನು 101 ಅಂತರದಲ್ಲಿ ಗೆದ್ದು, ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಶುಭಾರಂಭ ಕಂಡಿತ್ತು. ನಂತರ ಎರಡನೇ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದು ಸರಣಿಯಲ್ಲಿ1-1 ಸಮಬಲ ಕಾಯ್ದುಕೊಂಡಿತ್ತು. ನಂತರ ಮೂರನೇ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿದ್ದ ಟೀಮ್ ಇಂಡಿಯಾ 7 ವಿಕೆಟ್‌ಗಳಿಂದ ಗೆದ್ದು, ಸರಣಿಯಲ್ಲಿ 2-1 ಮುನ್ನಡೆಯನ್ನು ಪಡೆದಿದೆ. ಇದೀಗ ಇನ್ನುಳಿದ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದರೆ, ಸರಣಿಯನ್ನು ವಶಪಡಿಸಿಕೊಳ್ಳಲಿದೆ. ಇದರ ನಡುವೆ ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಗಾಯದ ಕಾರಣ ಟಿ20ಐ ಸರಣಿಯ ಇನ್ನಿಳಿದ ಎರಡು ಪಂದ್ಯಗಳಿಂದ ಹೊರ ನಡೆದಿದ್ದು, ಅವರ ಸ್ಥಾನಕ್ಕೆ ಶಹಬಾಝ್ ಅಹ್ಮದ್ ಬಂದಿದ್ದಾರೆ.