ನವದೆಹಲಿ: ಆಸ್ಟ್ರೇಲಿಯಾ ಅಂಡರ್-19 ತಂಡಕ್ಕೆ (Australia U-19 Squad) ಭಾರತೀಯ ಮೂಲದ ನೀಲ್ ಪಟೇಲ್ (Neel Patel) ಅವರು ಆಯ್ಕೆಯಾಗಿದ್ದಾರೆ. ಸೆಪ್ಟಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾ ಕಿರಿಯರ ತಂಡ, ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಇಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಎರಡು ನಾಲ್ಕು ದಿನಗಳ ಪಂದ್ಯಗಳನ್ನು ಆಡಲಿದೆ. ಹಾಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ, 16 ಸದಸ್ಯರ ಅಂಡರ್-19 ತಂಡವನ್ನು ಆಗಸ್ಟ್ 3 ರಂದು ಪ್ರಕಟಿಸಿದೆ. ಈ ಎಲ್ಲಾ ಪಂದ್ಯಗಳು ರಾಜ್‌ಕೋಟ್ ಹಾಗೂ ಅಹಮದಾಬಾದ್‌ನಲ್ಲಿ ನಡೆಯಲಿವೆ.
ನ್ಯೂ ಸೌಥ್ ವೇಲ್ಸ್ ವಿಶ್ವವಿದ್ಯಾಲಯದ ಕ್ರಿಕೆಟ್ ಕ್ಲಬ್ ಪರ ಆಡುವ ನೀಲ್ ಪಟೇಲ್, ಏಕೈಕ ಕ್ಯಾಲೆಂಡರ್ ವರ್ಷದಲ್ಲಿ ಸಿಡ್ನಿ ಪ್ರೀಮಿಯರ್ ಕ್ರಿಕೆಟ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1000 ರನ್‌ಗಳನ್ನು ಕಲೆ ಹಾಕಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ತಮ್ಮ 16ನೇ ವಯಸ್ಸಿನಲ್ಲಿ ಬರೆದಿದ್ದಾರೆ. ಈ ವರ್ಷದ ಆರಂಭದಲ್ಲಿ ಜಿಂಬಾಬ್ವೆಯಲ್ಲಿ ನಡೆದಿದ್ದ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದ ಕೇವಲ ಇಬ್ಬರು ಬೈರಾಮ್ ಹಾಗೂ ಬಾರ್ಟನ್ ಈ ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ.
ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ 17ರ ವಯಸ್ಸಿನ ಬೈರಾಮ್ 10 ವಿಕೆಟ್‌ಗಳನ್ನು ಕಬಳಿಸಿದ್ದರೆ, ಬಾರ್ಟನ್ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರ ಹೊರತಾಗಿಯೂ ಆಸ್ಟ್ರೇಲಿಯಾ ತಂಡ, ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 27 ರನ್‌ಗಳಿಂದ ಸೋಲು ಅನುಭವಿಸಿತ್ತು.
ʻಮಗ ಡಾಕ್ಟರ್ ಆಗಬೇಕೆಂದು ಅಪ್ಪ ಕನಸು ಕಂಡಿದ್ದರುʼ: ಜಸ್‌ಪ್ರೀತ್ ಬುಮ್ರಾ ಸ್ಥಾನಕ್ಕೆ ಆಯ್ಕೆಯಾದ ಆಕಿಬ್ ನಬಿ ಯಾರು?
ಭಾರತ ಪ್ರವಾಸ ಯುವ ಆಟಗಾರರ ಬೆಳವಣಿಗೆಗೆ ಮಹತ್ವದ ಅವಕಾಶ: ಸೋನ್ಯಾ ಥಾಂಪ್ಸನ್
"ನಮ್ಮ ಪ್ರತಿಭಾ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ಆಸ್ಟ್ರೇಲಿಯಾದ ಅತ್ಯುತ್ತಮ ಯುವ ಆಟಗಾರರಿಗೆ ಮತ್ತಷ್ಟು ಬೆಳೆಯಲು ಈ ಅವಕಾಶವನ್ನು ನೀಡುತ್ತಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ. ಭಾರತ ಪ್ರವಾಸ ಕೈಗೊಂಡು, ಸವಾಲಿನ ಪರಿಸ್ಥಿತಿಗಳಲ್ಲಿ ಉನ್ನತ ಮಟ್ಟದ ಎದುರಾಳಿಗಳ ವಿರುದ್ಧ ಆಡುವುದು ಆಟಗಾರರಿಗೆ ಅಮೂಲ್ಯ ಅನುಭವವಾಗಲಿದೆ. ಇದು ಎಲ್ಲಾ ಮಾದರಿಗಳಲ್ಲೂ ಅವರ ತಾಂತ್ರಿಕ ಸಾಮರ್ಥ್ಯ ಮತ್ತು ಮಾನಸಿಕ ದೃಢತೆಯನ್ನು ಪರೀಕ್ಷಿಸುವ ಉತ್ತಮ ಅವಕಾಶವಾಗಲಿದೆ," ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ರಾಷ್ಟ್ರೀಯ ಅಭಿವೃದ್ಧಿ ವಿಭಾಗದ ಮುಖ್ಯಸ್ಥೆ ಸೋನ್ಯಾ ಥಾಂಪ್ಸನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಅಭಿವೃದ್ಧಿ ತಂಡಮ ವಾರ್ಷಿಕ ಎಂಆರ್‌ಎಫ್ ಅಕಾಡೆಮಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಶನಿವಾರ ಚೆನ್ನೈಗೆ ಆಗಮಿಸಿದೆ. 12 ಸದಸ್ಯರ ಈ ತಂಡದಲ್ಲಿ ವಿವಿಧ ರಾಜ್ಯ ತಂಡಗಳ ಪ್ರಮುಖ ಆಟಗಾರರು ಹಾಗೂ ಇತ್ತೀಚೆಗೆ ಆಸ್ಟ್ರೇಲಿಯಾ ಟಿ20 ತಂಡಕ್ಕೆ ಪದಾರ್ಪಣೆ ಮಾಡಿದ ಜೋಯೆಲ್ ಡೇವಿಸ್ ಕೂಡ ಸ್ಥಾನ ಪಡೆದಿದ್ದಾರೆ. ಕ್ರಿಕೆಟ್ ಡಾಟ್ ಕಾಮ್ ಡಾಟ್ ಎಯು ವರದಿ ಪ್ರಕಾರ, ಈ ಪ್ರವಾಸವು ಆಸ್ಟ್ರೇಲಿಯಾದ ಯುವ ಆಟಗಾರರಿಗೆ ಭಾರತೀಯ ಪರಿಸ್ಥಿತಿಗಳಲ್ಲಿ ಆಡುತ್ತಾ ತಮ್ಮ ಕೌಶಲವನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಲು ಉತ್ತಮ ಅವಕಾಶ ಒದಗಿಸಲಿದೆ.
ಆಸ್ಟ್ರೇಲಿಯಾ ಅಂಡರ್-19 ತಂಡ: ಕೇಸಿ ಬಾರ್ಟನ್, ಹೇಡನ್ ಬಾರ್ಬುಲೋವಿ, ಎಲಿ ಬ್ರೇನ್, ವಿಲ್ ಬೈರಮ್, ಬ್ಲೇಕ್ ಕ್ಯಾಟಲ್, ಜ್ಯಾಕ್ ಕ್ಜೋಸ್ನೆಕ್, ಸ್ಪೆನ್ಸರ್ ಗ್ರೀನ್, ಕಾನರ್ ಗ್ರೆಗೊರಿ, ಚಾರ್ಲಿ ಹೆಂಡರ್ಸನ್, ಝೆಡ್ ಹಾಲಿಕ್, ಮ್ಯಾಥ್ಯೂ ಲಾಫ್, ನೀಲ್ ಪಟೇಲ್, ಜೇಕಬ್ ಪಿಯೆಟ್ಜ್, ಪ್ಯಾಟ್ರಿಕ್ ಸುಲ್ಲಿವನ್, ಥಿಯೋ ಸಿಂಗೋಸ್, ಥಾಮಸ್ ವಾಸಿಯೊ