ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs SL ನಡುವಣ ಮೊದಲನೇ ಏಕದಿನ ಪಂದ್ಯ ದೆಹಲಿಯಿಂದ ವಿಶಾಖಪಟ್ಟಣಂಗೆ ಸ್ಥಳಾಂತರ!

ಡಿಸೆಂಬರ್ 13ರಂದು ನಡೆಯಬೇಕಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೆಹಲಿಯಿಂದ ವಿಶಾಖಪಟ್ಟಣಕ್ಕೆ ಸ್ಥಳಾಂತರಿಸಿದೆ. ಪಂದ್ಯ ನಡೆಯುವ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದಿಂದ ಅಡಚಣೆ ಉಂಟಾಗುವ ಸಾಧ್ಯತೆ ಹಾಗೂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನವೀಕರಣ ಕಾಮಗಾರಿಗಳಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಭಾರತ vs ಶ್ರೀಲಂಕಾ ಮೊದಲನೇ ಏಕದಿನ ಪಂದ್ಯ ವಿಶಾಖಪಟ್ಟಣಂಗೆ ಸ್ಥಳಾಂತರ.

ನವದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ (IND vs SL) ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ದೆಹಲಿಯಿಂದ ವಿಶಾಖಪಟ್ಟಣಕ್ಕೆ ಸ್ಥಳಾಂತರಿಸಿರುವುದನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧಿಕೃತವಾಗಿ ಖಚಿತಪಡಿಸಿದೆ. ಡಿಸೆಂಬರ್ 13, 2026ರಂದು ನಡೆಯಬೇಕಿದ್ದ ಈ ಪಂದ್ಯ ಇದೀಗ ವಿಶಾಖಪಟ್ಟಣದ ಎಸಿಎ–ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಬಿಸಿಸಿಐಗೆ ಪತ್ರ ಬರೆದು ಪಂದ್ಯಕ್ಕೆ ಹವಾಮಾನ ವೈಪರೀತ್ಯದಿಂದ ಅಡಚಣೆ ಉಂಟಾಗುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಇದರ ಜೊತೆಗೆ, ದೆಹಲಿಯ ಕ್ರೀಡಾಂಗಣದಲ್ಲಿ ನವೀಕರಣ ಕಾಮಗಾರಿಗಳು ನಡೆಯುತ್ತಿರುವುದನ್ನೂ ಮಂಡಳಿಯ ಗಮನಕ್ಕೆ ತಂದಿತ್ತು. ಈ ಹಿನ್ನೆಲೆಯಲ್ಲಿ ಪಂದ್ಯವನ್ನು ಬೇರೆ ನಗರಕ್ಕೆ ಸ್ಥಳಾಂತರಿಸುವಂತೆ ಡಿಡಿಸಿಎ ಮನವಿ ಮಾಡಿತ್ತು.

Virat Kohli' s Birthday: 38ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ವಿರಾಟ್‌ ಕೊಹ್ಲಿಯ 38 ಐತಿಹಾಸಿಕ ದಾಖಲೆಗಳು!

ಈ ಕುರಿತು ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ, “2026ರ ಡಿಸೆಂಬರ್ 13ರಂದು ನಡೆಯಲಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದ ಆತಿಥ್ಯ ವಹಿಸುವ ಸ್ಥಳವನ್ನು ದೆಹಲಿಯಿಂದ ವಿಶಾಖಪಟ್ಟಣಕ್ಕೆ ಬದಲಾಯಿಸಲಾಗಿದೆ. ಸಂಭಾವ್ಯ ಹವಾಮಾನ ವೈಪರೀತ್ಯ ಹಾಗೂ ಕ್ರೀಡಾಂಗಣದಲ್ಲಿ ಪ್ರಸ್ತಾಪಿತವಾಗಿರುವ ನವೀಕರಣ ಕಾಮಗಾರಿಗಳನ್ನು ಗಮನದಲ್ಲಿಟ್ಟುಕೊಂಡು ಡಿಡಿಸಿಎ ಮಾಡಿದ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಂದ್ಯವು ವಿಶಾಖಪಟ್ಟಣದ ಎಸಿಎ–ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ,” ಎಂದು ತಿಳಿಸಿದೆ.



ಬೆಂಗಳೂರಿನಲ್ಲಿ ಎರಡನೇ ಏಕದಿನ ಪಂದ್ಯ

ಭಾರತ ತಂಡ 2026ರ ಕ್ಯಾಲೆಂಡರ್ ವರ್ಷದ ಕೊನೆಯ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಸರಣಿಯ ಮೊದಲ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ನಂತರ ಎರಡನೇ ಪಂದ್ಯಕ್ಕಾಗಿ ಉಭಯ ತಂಡಗಳು ಬೆಂಗಳೂರಿಗೆ ಪ್ರಯಾಣಿಸಲಿವೆ. ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದಕ್ಕೂ ಮೊದಲು ಅಕ್ಟೋಬರ್‌ನಲ್ಲಿ ಡಿಡಿಸಿಎ ಪ್ರತಿಕ್ರಿಯಿಸಿ, ಭಾರತ–ಶ್ರೀಲಂಕಾ ಸರಣಿಯ ಆರಂಭಿಕ ಏಕದಿನ ಪಂದ್ಯವನ್ನು ದೆಹಲಿಯಲ್ಲಿ ಆಯೋಜಿಸುವುದು ತನ್ನ ಗುರಿಯಾಗಿತ್ತು ಎಂದು ಸ್ಪಷ್ಟಪಡಿಸಿತ್ತು. ಆದರೆ ನಿರೀಕ್ಷಿತ ರೀತಿಯಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ.

ವಿರಾಟ್‌ ಕೊಹ್ಲಿಯನ್ನು ಹೊರಗಿಟ್ಟು ಸಾರ್ವಕಾಲಿಕ ಶ್ರೇಷ್ಠ ಐವರು ಒಡಿಐ ಕ್ರಿಕೆಟಿಗರನ್ನು ಆರಿಸಿದ ಎಸ್‌ ಬದ್ರಿನಾಥ್‌!

ವಿರಾಟ್ ಕೊಹ್ಲಿಗೆ ತವರಿನಲ್ಲಿ ಕೊನೆಯ ಪಂದ್ಯ ಆಡುವ ಅವಕಾಶ ಕೈತಪ್ಪುತ್ತಾ?

ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮುಂಬರುವ ಏಕದಿನ ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆಯಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾ ವಿರುದ್ಧ ಡಿಸೆಂಬರ್ 13ರಂದು ದೆಹಲಿಯಲ್ಲಿ ನಡೆಯಬೇಕಿದ್ದ ಮೊದಲ ಏಕದಿನ ಪಂದ್ಯ ಕೊಹ್ಲಿಗೆ ತವರಿನ ಮೈದಾನದಲ್ಲಿ ಭಾರತ ತಂಡದ ಪರ ಆಡುವ ಕೊನೆಯ ಅವಕಾಶವಾಗುವ ಸಾಧ್ಯತೆಯಿತ್ತು.

ಆದರೆ ಇದೀಗ ಬಿಸಿಸಿಐ ಮೊದಲ ಏಕದಿನ ಪಂದ್ಯವನ್ನು ದೆಹಲಿಯಿಂದ ವಿಶಾಖಪಟ್ಟಣಕ್ಕೆ ಸ್ಥಳಾಂತರಿಸಿರುವುದರಿಂದ ಕೊಹ್ಲಿ ತವರಿನ ಅಭಿಮಾನಿಗಳ ಎದುರು ಕೊನೆಯ ಪಂದ್ಯ ಆಡುವ ಅವಕಾಶ ಪಡೆಯುತ್ತಾರೆಯೇ ಎಂಬ ಪ್ರಶ್ನೆ ಎದುರಾಗಿದೆ. 38ರ ವಯಸ್ಸಿನ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳುವ ಮುನ್ನ ದೆಹಲಿಯಲ್ಲಿ ಮತ್ತೊಂದು ಏಕದಿನ ಪಂದ್ಯ ಆಡುವ ಅವಕಾಶ ಸಿಗುತ್ತದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. 2027ರಲ್ಲಿ ದೆಹಲಿಗೆ ಏಕದಿನ ಪಂದ್ಯವೊಂದರ ಆತಿಥ್ಯ ನೀಡಬೇಕೇ ಎಂಬ ಅಂತಿಮ ನಿರ್ಧಾರ ಬಿಸಿಸಿಐ ಕೈಯಲ್ಲಿದೆ.