ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs NZ: ಗಾಯಕ್ವಾಡ್‌, ಇಶಾನ್‌ ಇನ್‌; 4ನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಐದು ಪಂದ್ಯಗಳ ಏಕದಿನ ಸರಣಿ ನಿರ್ಣಾಯಕ ಹಂತಕ್ಕೆ ಬಂದಿದೆ. ಕಳೆದ ಮೂರನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇದೀಗ ಕೊನೆಯ ಎರಡು ಪಂದ್ಯಗಳಿಗೆ ನಾಯಕ ಶುಭಮನ್‌ ಗಿಲ್‌ ಹಾಗೂ ಕೆಎಲ್‌ ರಾಹುಲ್‌ ಸೇರಿದಂತೆ ಟೆಸ್ಟ್‌ ಆಟಗಾರರು ಅಲಭ್ಯರಾಗಿದ್ದಾರೆ. ಹಾಗಾಗಿ ನಾಲ್ಕನೇ ಪಂದ್ಯಕ್ಕೆ ತಂಡದಲ್ಲಿ ಹಲವು ಬದಲಾವಣೆಗಳನ್ನು ನಾವು ನಿರೀಕ್ಷಿಸಬಹುದಾಗಿದೆ.

ನಾಲ್ಕನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ.

ನವದೆಹಲಿ: ಹ್ಯಾಮಿಲ್ಟನ್‌ನಲ್ಲಿ ಮಳೆಯಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು (IND vs NZ) ವಶಪಡಿಸಿಕೊಳ್ಳುವ ಭಾರತದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಇದೀಗ ಸರಣಿಯ ಅಂತಿಮ ಎರಡು ಪಂದ್ಯಗಳಿಗೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ನಾಯಕ ಶುಭಮನ್ ಗಿಲ್ (Shubaman Gill), ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ (KL Rahul) ಹಾಗೂ ವೇಗಿ ಅನ್ಶುಲ್ ಕಾಂಬೋಜ್ ತಂಡದಿಂದ ಹೊರಗುಳಿಯಲಿದ್ದಾರೆ. ನವೆಂಬರ್ 13ರಂದು ನಡೆಯಲಿರುವ ನಾಲ್ಕನೇ ಏಕದಿನ ಪಂದ್ಯ ಹಾಗೂ ನವೆಂಬರ್ 15ರಂದು ನಡೆಯಲಿರುವ ಐದನೇ ಪಂದ್ಯಕ್ಕೂ ಮುನ್ನ ಈ ಮೂವರು ಆಟಗಾರರು ಏಕದಿನ ತಂಡದ ಶಿಬಿರವನ್ನು ತೊರೆದು ಟೆಸ್ಟ್ ಸರಣಿಯ ಸಿದ್ಧತೆಗಾಗಿ ಇತರ ಟೆಸ್ಟ್ ಆಟಗಾರರನ್ನು ಸೇರಿಕೊಳ್ಳಲಿದ್ದಾರೆ.

ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ನಾಲ್ಕನೇ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಆ ಮೂಲಕ ಅವರು ಮೊದಲ ಬಾರಿ ಏಕದಿನ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಪ್ರವಾಸಿ ಭಾರತ ತಂಡ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

4, 5ನೇ ಏಕದಿನ ಪಂದ್ಯಗಳಿಗೆ ಭಾರತ ತಂಡದಲ್ಲಿನ ಬದಲಾವಣೆಗಳ ಸಂಪೂರ್ಣ ಮಾಹಿತಿ

ರೋಹಿತ್ ಶರ್ಮಾ ನಾಯಕತ್ವದ ಅವಧಿ ಮುಕ್ತಾಯಗೊಂಡ ಬಳಿಕ ಶುಭಮನ್ ಗಿಲ್ ಅವರನ್ನು ಏಕದಿನ ತಂಡದ ನಾಯಕನನ್ನಾಗಿ ನೇಮಿಸಲಾಗಿತ್ತು. ಕಳೆದ ವರ್ಷ ಶ್ರೇಯಸ್ ಅಯ್ಯರ್ ಅವರನ್ನು ತಂಡದ ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ಗಿಲ್ ಅಲಭ್ಯತೆಯಿಂದಾಗಿ ಅವರಿಗೆ ನಾಯಕತ್ವದ ಅವಕಾಶ ಒಲಿದು ಬಂದಿದೆ.

ಋತುರಾಜ್, ಇಶಾನ್ ಕಿಶನ್‌ಗೆ ಅವಕಾಶ?

ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ಶುಭಮನ್ ಗಿಲ್ ಮತ್ತು ಕೆಎಲ್ ರಾಹುಲ್ ಅನುಪಸ್ಥಿತಿ ಎರಡು ಪ್ರಮುಖ ಕೊರತೆಗಳನ್ನು ಸೃಷ್ಟಿಸಿದೆ. ಹೀಗಾಗಿ ಋತುರಾಜ್ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ನಿರೀಕ್ಷೆಯಿದೆ. ಕಳೆದ ಒಂದು ವರ್ಷದಲ್ಲಿ ಈ ಇಬ್ಬರೂ ಆಟಗಾರರು ಭಾರತದ ಪರ ಹಲವು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಇನ್ನು ಸರಣಿಯ ಅಂತಿಮ ಎರಡು ಪಂದ್ಯಗಳಲ್ಲಿ ಇಶಾನ್ ಕಿಶನ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ನಿರ್ವಹಿಸಲಿದ್ದಾರೆ.

ಆದರೆ ಇವರಿಬ್ಬರು ಯಾವ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಋತುರಾಜ್ ಹಾಗೂ ಇಶಾನ್ ಇಬ್ಬರೂ ಆರಂಭಿಕ ಬ್ಯಾಟರ್‌ಗಳಾಗಿ ಮತ್ತು ಮಧ್ಯಮ ಕ್ರಮಾಂಕದಲ್ಲೂ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

IND vs NZ: ನಾಲ್ಕನೇ ಒಡಿಐಗೆ ಭಾರತಕ್ಕೆ 3 ಬದಲಾವಣೆ ಸೂಚಿಸಿದ ಅಂಬಾಟಿ ರಾಯುಡು, ಮುರಳಿ ಕಾರ್ತಿಕ್!

ಕೆಎಲ್ ರಾಹುಲ್ ಸಾಮಾನ್ಯವಾಗಿ ಐದನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುತ್ತಿದ್ದರಿಂದ, ಅವರ ಸ್ಥಾನದಲ್ಲಿ ಇಶಾನ್ ಕಿಶನ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಮತ್ತೊಂದೆಡೆ ಋತುರಾಜ್ ಗಾಯಕ್ವಾಡ್ ಆರಂಭಿಕರಾಗಿ ಕಣಕ್ಕಿಳಿಯಬಹುದು. ಆದರೆ ಇವರಿಬ್ಬರ ಬ್ಯಾಟಿಂಗ್ ಕ್ರಮಾಂಕ ಬದಲಾದರೂ ಅಚ್ಚರಿಯಿಲ್ಲ.

ಮೊಹಮ್ಮದ್‌ ಸಿರಾಜ್‌ಗೆ ಮರಳುವ ಅವಕಾಶ

ವೇಗಿ ಅನ್ಶುಲ್ ಕಾಂಬೋಜ್ ತಂಡದಿಂದ ಹೊರಗುಳಿಯುತ್ತಿರುವುದರಿಂದ ಅನುಭವಿ ವೇಗಿ ಮೊಹಮ್ಮದ್ ಸಿರಾಜ್ ಮತ್ತೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಮತ್ತೊಂದೆಡೆ ಆಕಿಬ್ ನಬಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಎಂಟನೇ ಸ್ಥಾನಕ್ಕೆ ಬಡ್ತಿ ಪಡೆಯುವ ಸಾಧ್ಯತೆಯಿದೆ. ಹೀಗಾಗಿ ಸ್ಪಿನ್ನರ್ ಕುಲ್ದೀಪ್ ಯಾದವ್ ಮತ್ತೊಮ್ಮೆ ಬೆಂಚ್ ಕಾಯಬೇಕಾಗಬಹುದು. ಯುವ ಆಟಗಾರ ತಿಲಕ್ ವರ್ಮಾ ಅವರಿಗೂ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶಕ್ಕಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಬಹುದು.‌

ನ್ಯೂಜಿಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಆಡುವ ಹನ್ನೊಂದರ ಬಳಗ

  1. ರೋಹಿತ್ ಶರ್ಮಾ
  2. ಋತುರಾಜ್ ಗಾಯಕ್ವಾಡ್
  3. ವಿರಾಟ್ ಕೊಹ್ಲಿ
  4. ಶ್ರೇಯಸ್ ಅಯ್ಯರ್ (ನಾಯಕ)
  5. ಇಶಾನ್ ಕಿಶನ್ (ವಿಕೆಟ್ ಕೀಪರ್)
  6. ಅಕ್ಷರ್ ಪಟೇಲ್
  7. ನಮನ್ ಧೀರ್
  8. ಆಕಿಬ್ ನಬಿ
  9. ಗುರ್ನೂರ್‌ ಬ್ರಾರ್
  10. ಮೊಹಮ್ಮದ್ ಸಿರಾಜ್
  11. ಅರ್ಷದೀಪ್ ಸಿಂಗ್