ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದ ಮುಂಬರುವ ಒಡಿಐ ಹಾಗೂ ಟಿ20ಐ ಸರಣಿಗಳಿಗೆ ಭಾರತ ತಂಡವನ್ನು (India's Squads for Australia Tour) ಬಿಸಿಸಿಐ ಶನಿವಾರ ಪ್ರಕಟಿಸಿದೆ. ಭಾರತ ಏಕದಿನ ತಂಡದ ನಾಯಕತ್ವವನ್ನು ಶುಭಮನ್ ಗಿಲ್‌ಗೆ (Shubman Gill) ನೀಡಲಾಗಿದ್ದು, ರೋಹಿತ್ ಶರ್ಮಾ (Rohit sharma) ಅವರನ್ನು ನಾಯಕತ್ವದಿಂದ ಕೈ ಬಿಡಲಾಗಿದೆ. ಇನ್ನು ಭಾರತ ಟಿ20ಐ ತಂಡದ ನಾಯಕತ್ವದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಮುಂದುವರಿಸಲಾಗಿದೆ. ಭಾರತದ ಏಕದಿನ ತಂಡಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಉಪ ನಾಯಕನಾಗಿ ನೇಮಿಸಲಾಗಿದೆ. ಬಿಸಿಸಿಐ ತನ್ನ ಅಧೀಕೃತ ಹೇಳಿಕೆಯಲ್ಲಿ ಈ ಮಹತ್ವದ ಮಾಹಿತಿಯನ್ನು ನೀಡಿದೆ.
ಭಾರತ ಏಕದಿನ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಹಿರಿಯ ಆಟಗಾರರಾಗಿ ಸ್ಥಾನವನ್ನು ಪಡೆದಿದ್ದಾರೆ. ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರನ್ನು ಏಕದಿನ ತಂಡದಿಂದ ಕೈ ಬಿಡಲಾಗಿದ್ದು, ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದ ಮೊಹಮ್ಮದ್ ಸಿರಾಜ್, ಏಕದಿನ ತಂಡಕ್ಕೆ ಮರಳಿದ್ದಾರೆ. ಇನ್ನು ಗಾಯಾಳು ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ನಿತೀಶ್ ಕುಮಾರ್ ರೆಡ್ಡಿಗೆ ಭಾರತ ಏಕದಿನ ತಂಡದಲ್ಲಿ ಚೊಚ್ಚಲ ಅವಕಾಶವನ್ನು ನೀಡಲಾಗಿದೆ. ಏಷ್ಯಾ ಕಪ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾಗಿದ್ದರು.
IND vs WI: ವಿಂಡೀಸ್ ಬ್ಯಾಟಿಂಗ್ ವೈಫಲ್ಯ, ಇನಿಂಗ್ಸ್ ಅಂತರದಲ್ಲಿ ಮೊದಲನೇ ಟೆಸ್ಟ್ ಗೆದ್ದ ಭಾರತ!
ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ಸಮಯದಲ್ಲಿ ಗಾಯಕ್ಕೆ ತುತ್ತಾಗಿದ್ದ ರಿಷಭ್ ಪಂತ್ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಇದರ ಸಲುವಾಗಿ ಧ್ರುವ್ ಜುರೆಲ್ ಅವರನ್ನು ಏಕದಿನ ತಂಡಕ್ಕೆ ವಿಕೆಟ್ ಕೀಪರ್ ಆಗಿ ಆರಿಸಲಾಗಿದೆ. ಆದರೆ, ಸಂಜು ಸ್ಯಾಮ್ಸನ್ ಅವರನ್ನು ಮತ್ತೊಮ್ಮೆ ಏಕದಿನ ತಂಡಕ್ಕೆ ಪರಿಗಣಿಸಿಲ್ಲ. ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಮೀಸಲು ಆಟಗಾರನಾಗಿದ್ದ ಯಶಸ್ವಿ ಜೈಸ್ವಾಲ್‌ಗೆ ಇದೀಗ ಒಡಿಐ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ.
ಆಸ್ಟ್ರೇಲಿಯಾ ಹಾಗೂ ಭಾರತ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಅಕ್ಟೋಬರ್ 19 ರಂದು ಆರಂಭವಾಗಲಿದೆ. ಮೊದಲನೇ ಪಂದ್ಯ 19 ರಂದು ಪರ್ತ್‌ನಲ್ಲಿ ನಡೆದರೆ, ಎರಡು ಮತ್ತು ಮೂರನೇ ಪಂದ್ಯಗಳು ಕ್ರಮವಾಗಿ ಅ 23 ಮತ್ತು 25 ರಂದು ಅಡಿಲೇಡ್ ಮತ್ತು ಸಿಡ್ನಿಯಲ್ಲಿ ನಡೆಯಲಿವೆ. ಒಡಿಐ ಸರಣಿಯ ಬಳಿಕ ಉಭಯ ತಂಡಗಳು ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಕಾದಾಟ ನಡೆಸಲಿವೆ.
ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪ ನಾಯಕ), ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹ್ಮಮದ್ ಸಿರಾಜ್, ಅರ್ಷದೀಪ್ ಸಿಂಗ್, ಪ್ರಸಿಧ್ ಕೃಷ್ಣ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್
ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಯ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್ (ಉಪ ನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್.