ಮುಂಬೈ: ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ (INDW vs NZW) ತಂಡಗಳು ಕಾದಾಟ ನಡೆಸಿದವು. ಸೆಮಿಫೈನಲ್ ನಿಮಿತ್ತ ಈ ಪಂದ್ಯ ಉಭಯ ತಂಡಗಳಿಗೆ ಅತ್ಯಂತ ನಿರ್ಣಾಯಕವಾಗಿದೆ. ಈ ಪಂದ್ಯದಲ್ಲಿ ಗೆದ್ದರೆ ಭಾರತ ತಂಡ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ಇದರ ನಡುವೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ, ಕಿವೀಸ್ ವರುದ್ಧ ತಮ್ಮ ಏಕದಿನ ಕ್ರಿಕೆಟ್ ವೃತ್ತಿ ಬದುಕಿನ 14ನೇ ಶತಕ ಸಿಡಿಸಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಗಳಿಸಿದ್ದ ಮೇಗ್ ಲ್ಯಾನಿಂಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಕೇವಲ 88 ಎಸೆತಗಳಲ್ಲಿ ಶತಕ ಪೂರೈಸಿದ್ದು, ಈ ಇನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಒಳಗೊಂಡಿವೆ.
ಈ ಟೂರ್ನಿಯ ಆರಂಭದಲ್ಲಿ ನಿಧಾನಗತಿಯ ಇನಿಂಗ್ಸ್ ಆಡಿದ್ದ ಉಪ ನಾಯಕಿ ಸ್ಮೃತಿ ಮಂಧಾನಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಕ್ರಮವಾಗಿ 80 ಮತ್ತು 88 ರನ್ ಗಳಿಸುವ ಮೂಲಕ ಮತ್ತೆ ಲಯಕ್ಕೆ ಮರಳಿದ್ದರು. ಅದಾಗ್ಯೂ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಹಂತದಲ್ಲಿ ವಿಕೆಟ್ ಒಪ್ಪಿಸಿ ನಿರಾಶೆಗೊಂಡಿದ್ದರು.
ಮಹಿಳಾ ವಿಶ್ವಕಪ್ ಸೆಮಿ; ಒಂದು ಸ್ಥಾನಕ್ಕೆ 5 ತಂಡಗಳ ಮಧ್ಯೆ ಪೈಪೋಟಿ
ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದಿದ್ದ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಅವರು ನಿಧಾನಗತಿಯಲ್ಲಿ ಇನಿಂಗ್ಸ್ ಆರಂಭಿಸಿದರು. ಇನ್ನೊಂದು ಬದಿಯಲ್ಲಿ ಪ್ರತಿಕ್ ರಾವಲ್ ಅವರಿಂದ ಸಾಥ್ ದೊರಕಿದ ಬಳಿಕ ತಮ್ಮ ಆಟವನ್ನು ಚುರುಕುಗೊಳಿಸಿದರು. ಕಿವೀಸ್ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಮಂಧಾನ, 49 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಈ ಮೂಲಕ ಭಾರತ ದೊಡ್ಡ ಮೊತ್ತ ಕಲೆಹಾಕಲು ಉತ್ತಮ ಅಡಿಪಾಯ ಹಾಕಿ ಕೊಟ್ಟಿದ್ದರು.
ಜೀವದಾನ ಪಡೆದಿದ್ದ ಸ್ಮೃತಿ ಮಂಧಾನಾ
77 ರನ್ ಗಳಿಸಿ ಬ್ಯಾಟ್ ಮಾಡುತ್ತಿರುವಾಗ ಭಾರತದ ಉಪನಾಯಕಿ ಎಲ್‌ಬಿಡಬ್ಲ್ಯು ತುತ್ತಾಗಿದ್ದರು. ಈ ವೇಳೆ ಮಂಧಾನಾ ರಿವ್ಯೂ ತೆಗೆದುಕೊಳ್ಳಲು ಹಿಂಜರಿದ್ದರು. ಆದರೆ, ಪ್ರತಿಕ್ ರಾವಲ್ ರಿವ್ಯೂಗೆ ಹೋಗಲು ಮನವೊಲಿಸಿದರು ಮತ್ತು ಬಾಲ್ ಪ್ಯಾಡ್‌ಗಳಿಗೆ ಬಡಿಯುವ ಮೊದಲು ಸ್ನಿಕೊ ಇನ್‌ಸೈಡ್ ಎಡ್ಜ್ ತೋರಿಸಿದ ಕಾರಣ ಅವರಿಗೆ ತಮ್ಮ ಆಟ ಮುಂದುವರರಿಸಲು ಜೀವದಾನ ದೊರಕಿದಂತಾಯಿತು. ಬಳಿಕ ಜೆಸ್ ಕೆರ್ ಎಸೆತದಲ್ಲಿ ಸಿಂಗಲ್ ಗಳಿಸುವ ಮೂಲಕ ಶತಕದ ಗಡಿ ದಾಟಿದರು.
ಮಹಿಳಾ ವಿಶ್ವಕಪ್‌ನಲ್ಲಿ ಇದು ಅವರ ಮೂರನೇ ಶತಕವಾಗಿದ್ದು, ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಜೊತೆ ಸರಿಸಮನಾದ ಸಾಧನೆ ಮಾಡಿದರು. ಭಾರತ ತಂಡದ ಉಪನಾಯಕಿಯಾಗಿ ಈ ವರ್ಷದಲ್ಲಿ ಅವರು ತಮ್ಮ ಐದನೇ ಶತಕವನ್ನ ಬಾರಿಸಿದ್ದಾರೆ. ಹೀಗೆ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸುತ್ತಿದ್ದ ಮಂಧಾನಾ, 34ನೇ ಓವರ್‌ನಲ್ಲಿ ಸೂಜಿ ಬೇಟ್ಸ್ ಅವರ ಎಸೆತವನ್ನು ದೊಡ್ಡ ಹೊಡೆತ ಹೊಡೆಯುವಲ್ಲಿ ವಿಫಲವಾಗಿ ಕ್ಯಾಚ್ ಕೊಟ್ಟು ಔಟ್ ಆಗಿ 109 ರನ್ ಗಳಿಸಿ ಪೆವಿಲಿಯನ್ ಕಡೆ ನಡೆದರು.