ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಆರ್‌ಸಿಬಿ ನಾಯಕನಾಗಿ ರಜತ್‌ ಪಾಟಿದಾರ್‌ರ ದೊಡ್ಡ ಗುಣವನ್ನು ಬಹಿರಂಗಪಡಿಸಿದ ದಿನೇಶ್‌ ಕಾರ್ತಿಕ್‌!

Dinesh karthik Praised Rajat Patidar: 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಚಾಂಪಿಯನ್‌ ಆದ ಬಳಿಕ ಆರ್‌ಸಿಬಿ ಮೆಂಟರ್‌ ದಿನೇಶ್‌ ಕಾರ್ತಿಕ್‌, ನಾಯಕ ರಜತ್‌ ಪಾಟಿದಾರ್‌ ಅವರ ದೊಡ್ಡ ಗುಣವನ್ನು ಬಹಿರಂಗಪಡಿಸಿದ್ದಾರೆ.

ರಜತ್‌ ಪಾಟಿದಾರ್‌ರನ್ನು ಶ್ಲಾಘಿಸಿದ ದಿನೇಶ್‌ ಕಾರ್ತಿಕ್‌.

ಅಹಮದಾಬಾದ್‌: ಹದಿನೆಂಟನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ (RCB) ಚೊಚ್ಚಲ ಚಾಂಪಿಯನ್‌ ಆದ ಬಳಿಕ ಮೆಂಟರ್‌ ದಿನೇಶ್‌ ಕಾರ್ತಿಕ್‌ (Dinesh Karthik), ತಮ್ಮ ನಾಯಕ ರಜತ್‌ ಪಾಟಿದಾರ್‌ (Rajat Patidar) ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಆರ್‌ಸಿಬಿ ತಂಡದ ನಾಯಕನಾದ ಬಳಿಕವೂ ರಜತ್‌ ಪಾಟಿದಾರ್‌ ತಮ್ಮ ವರ್ತನೆಯಲ್ಲಿ ಯಾವುದೇ ರೀತಿಯಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ಅವರು ಆಟಗಾರನಾಗಿ ಹೇಗಿದ್ದರೋ, ನಾಯಕನಾಗಿಯೋ ಅದೇ ಮನೋಭಾವವನ್ನು ಹೊಂದಿದ್ದಾರೆ. 2025ರ ಐಪಿಎಲ್‌ ಟೂರ್ನಿಗೂ ಮುನ್ನ ರಜತ್‌ ಪಾಟಿದಾರ್‌ ಅವರನ್ನು ಆರ್‌ಸಿಬಿ ತಂಡಕ್ಕೆ ನಾಯಕನ್ನಾಗಿ ನೇಮಿಸಲಾಗಿತ್ತು. ಅದರಂತೆ ರಜತ್‌ ಪಾಟಿದಾರ್‌ ನಾಯಕನಾಗಿ ತಮ್ಮ ಮೊದಲ ಸೀಸನ್‌ನಲ್ಲಿ ಆರ್‌ಸಿಬಿಗೆ ಚೊಚ್ಚಲ ಕಪ್‌ ಗೆದ್ದುಕೊಟ್ಟಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ನಾಯಕನಾಗುವುದಕ್ಕೂ ಮುನ್ನ ರಜತ್‌ ಪಾಟಿದಾರ್‌ ಅವರ ನಾಯಕತ್ವದಲ್ಲಿ ಮಧ್ಯ ಪ್ರದೇಶ ತಂಡ 2024-25ರ ಸಾಲಿನ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಆರ್‌ಸಿಬಿಗೆ ರಜತ್‌ ಪಾಟಿದಾರ್‌ ನಾಯಕನಾಗಲು ಪ್ರಮುಖ ಕಾರಣವಾಗಿತ್ತು. ಅಲ್ಲದೆ, 2022ರಿಂದ ಇಲ್ಲಿಯವರೆಗೂ ಆರ್‌ಸಿಬಿಗೆ ರಜತ್‌ ಪಾಟಿದಾರ್‌ ಪ್ರಮುಖ ಆಟಗಾರರಾಗಿದ್ದಾರೆ.

IPL 2025: ಕೊಹ್ಲಿಯನ್ನು ಟ್ರೋಲ್, ಟೀಕೆ ಮಾಡಿದವರ ವಿರುದ್ಧ ರಾಜೀವ್ ಶುಕ್ಲಾ ವಾಗ್ದಾಳಿ

ರಜತ್‌ ಪಾಟಿದಾರ್‌ರ ದೊಡ್ಡ ಗುಣವನ್ನು ರಿವೀಲ್‌ ಮಾಡಿದ ಕಾರ್ತಿಕ್

ಆರ್‌ಸಿಬಿ ಪಯಣದ ಎರಡನೇ ಎಪಿಸೋಡ್‌ನಲ್ಲಿ ಮಾತನಾಡಿದ ದಿನೇಶ್‌ ಕಾರ್ತಿಕ್‌, "ರಜತ್‌ ಪಾಟಿದಾರ್‌ ಅವರು ನನ್ನ ಜೀವನದಲ್ಲಿ ನನಗೆ ಕಣ್ಣು ತೆರೆಸಿದ್ದಾರೆ. ಯಾರಾದರೂ ಅಧಿಕಾರಕ್ಕೆ ಬಂದರೆ, ಅವರು ಶಕ್ತಿಶಾಲಿಯಾಗಿ ಕಾಣುತ್ತಾರೆ, ಇದು ಸಾಮಾನ್ಯ ಸಂಗತಿ. ಆದರೆ, ರಜತ್‌ ಪಾಟಿದಾರ್‌ ಈ ವಿಷಯದಲ್ಲಿ ಹಾಗಿಲ್ಲ. ಅವರು ನಾಯಕನಾದ ಬಳಿಕವೂ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಹಾಗೂ ಅವರ ವಿಭಿನ್ನ ವರ್ತನೆಯನ್ನು ನಾವು ನೋಡಿಯೇ ಇಲ್ಲ. ಆಟಗಾರನಾಗಿ ಹೇಗಿದ್ದರೋ, ನಾಯಕನಾಗಿಯೂ ಅವರು ಹಾಗೆಯೇ ಇದ್ದಾರೆ," ಎಂದು ಗುಣಗಾನ ಮಾಡಿದ್ದಾರೆ.‌

18 ವರ್ಷಗಳ ಬಳಿಕ ಕಪ್‌ ಗೆದ್ದ ಆರ್‌ಸಿಬಿ

ಮಂಗಳವಾರ ನಡೆದಿದ್ದ ಫೈನಲ್‌ ಹಣಾಹಣಿಯಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 6 ರನ್‌ಗಳಿಂದ ರೋಚಕ ಗೆಲುವು ಪಡೆದಿತ್ತು. ಆ ಮೂಲಕ ಸತತ 18 ವರ್ಷಗಳ ಬಳಿಕ ಆರ್‌ಸಿಬಿ ತಂಡ ಚೊಚ್ಚಲ ಕಪ್‌ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ಪಾಲಿನ 20 ಓವರ್‌ಗಳಿಗೆ 190 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ ಪಂಜಾಬ್‌ ಕಿಂಗ್ಸ್‌, ಶಶಾಂಕ್‌ ಸಿಂಗ್‌ ಏಕಾಂಗಿಯಾಗಿ ಹೋರಾಟದ ಹೊರತಾಗಿಯೂ 184 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಕೇವಲ 6 ರನ್‌ಗಳಿಂದ ಸೋಲು ಅನುಭವಿಸಿತು.

IPL 2025: ʼಈ ಸಲ ಕಪ್‌ ನಮ್ದೆʼ ಖುಷಿ ಹೊರಹಾಕಿದ ಸಿಎಂ ಸಿದ್ದರಾಮಯ್ಯ

ಕ್ರಿಕೆಟ್‌ ಡೈರೆಕ್ಟರ್‌ ಹೇಳಿದ್ದೇನು?

ಆರ್‌ಸಿಬಿ ತಂಡದ ಕ್ರಿಕೆಟ್‌ ಡೈರೆಕ್ಟರ್‌ ಬೊಬಾಟ್‌ ಕೂಡ ರಜತ್‌ ಪಾಟಿದಾರ್‌ ಅವರನ್ನು ಗುಣಗಾನ ಮಾಡಿದ್ದಾರೆ. "ಅವರು ಶಾಂತ ಸ್ವಭಾವದವರಾಗಿದ್ದು ತಂಡವನ್ನು ತುಂಬಾ ಬುದ್ದಿವಂತಿಕೆಯಿಂದ ಮುನ್ನಡೆಸಿದ್ದಾರೆ. ನಮ್ಮ ತಂಡ ಅವರನ್ನು ಹೊಂದಿರುವ ಒಳ್ಳೆಯದು. ವಿರಾಟ್‌ ಕೊಹ್ಲಿ, ಜಿತೇಶ್‌ ಶರ್ಮಾ, ಕೃಣಾಲ್‌ ಪಾಂಡ್ಯ ಹಾಗೂ ಜಾಶ್‌ ಹೇಝಲ್‌ವುಡ್‌ ಅವರನ್ನು ರಜತ್‌ ಪಾಟಿದಾರ್‌ ಚೆನ್ನಾಗಿ ನಿರ್ವಹಿಸಿದ್ದಾರೆ," ಎಂದು ಶ್ಲಾಘಿಸಿದ್ದಾರೆ.

"ತವರಿನ ಹೊರಗೆ ಗೆಲ್ಲುವುದು ಯಾವಾಗಲೂ ಸವಾಲುದಾಯಕವಾಗಿರುತ್ತದೆ. ನಮ್ಮ ಸಮಯ ಬಂದಾಗಿದೆ ಎಂದು ನಾವು ನಮ್ಮ ಹುಡುಗರಿಗೆ ಹೇಳಿದ್ದೆವು. ಪಂದ್ಯಗಳನ್ನು ಗೆಲ್ಲಲು ಆರಂಭಿಸಿದ ಬಳಿಕ ನಮ್ಮ ವಿಶ್ವಾಸ ಕೂಡ ಹೆಚ್ಚಾಯಿತು. ಮುಂಬೈ ಹಾಗೂ ಚೆನ್ನೈನಲ್ಲಿನ ಗೆಲುವು ತುಂಬಾ ನೆರವು ನೀಡಿದೆ. ಈ ಸೀಸನ್‌ನಲ್ಲಿ ಹೆಚ್ಚು ಆಟಗಾರರು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿರುವುದು ಒಳ್ಳೆಯ ಸಂಗತಿ," ಎಂದು ಬೊಬಾಟ್‌ ತಿಳಿಸಿದ್ದಾರೆ.