ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (IPL 2026) ಸಾಲಿನ ಇನ್ನುಳಿದ ಭಾಗಕ್ಕೆ ಗಾಯಾಳು ಆಯುಷ್ ಮ್ಹಾತ್ರೆ (Ayush Mhatre) ಅವರ ಸ್ಥಾನಕ್ಕೆ ಚೆನ್ನೈ ಸೂಪರ್ ಕಿಂಗ್ಸ್, ಆಕಾಶ್ ಮಧ್ವಾಲ್ (Akash Madhwal) ಅವರನ್ನು ಸೇರಿಸಿಕೊಂಡಿದೆ. ಹತ್ತೊಂಬತ್ತನೇ ಆವೃತ್ತಿಯಲ್ಲಿ ಆಯುಷ್ ಮ್ಹಾತ್ರೆ ತಮ್ಮ ಪ್ರಭಾವಶಾಲಿ ಬ್ಯಾಟಿಂಗ್ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಅವರು ಆಡಿದ್ದ ಆರು ಪಂದ್ಯಗಳಲ್ಲಿ ಎರಡು ಅರ್ಧಶತಕಗಳನ್ನು ಬಾರಿಸಿ ಅದ್ಭುತ ಫಾರ್ಮ್‌ನಲ್ಲಿದ್ದರು. ಆದರೆ, ಅವರು ಗಾಯಕ್ಕೆ ತುತ್ತಾಗಿ ಟೂರ್ನಿಯ ಇನ್ನುಳಿದ ಭಾಗದಿಂದ ಹೊರ ನಡೆದಿರುವುದು ಐದು ಬಾರಿ ಚಾಂಪಿಯನ್ಸ್‌ಗೆ ಭಾರಿ ಹೊಡೆ ಬಿದ್ದಿದೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಸಂದರ್ಭದಲ್ಲಿ ಆಯುಷ್ ಮ್ಹಾತ್ರೆ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು. ಗಾಯ ಗಂಭೀರವಾಗಿದೆ ಎಂದು ಸ್ಕ್ಯಾನ್ ವರದಿಗಳು ದೃಢಪಡಿಸಿದ ಬಳಿಕ ಅವರನ್ನು ಟೂರ್ನಿಯಿಂದ ಹೊರಗೆ ಕಳುಹಿಸಲಾಗಿದೆ. ಇದರಿಂದ ಸಿಎಸ್‌ಕೆ ತಂಡದ ಅಗ್ರ ಕ್ರಮಾಂಕಕ್ಕೆ ಭಾರಿ ಹಿನ್ನಡೆಯಾಗಿದೆ.
ಈ ಸಮಯದಲ್ಲಿ ಬದಲಾವಣೆಗಳನ್ನು ಮಾಡಬೇಕಾದ ಅನಿವಾರ್ಯತೆ ಸಿಎಸ್‌ಕೆ ತಂಡಕ್ಕೆ ಉಂಟಾಗಿದೆ. ಇದರ ಜೊತೆಗೆ ಗಾಯದ ಸಮಸ್ಯೆ ಬೌಲಿಂಗ್ ವಿಭಾಗಕ್ಕೂ ಹೊಡೆತ ನೀಡಿದೆ. ಖಲೀಲ್ ಅಹ್ಮದ್ ಗಂಭೀರವಾದ ಕ್ವಾಡ್ರಿಸೆಪ್ಸ್ ಸ್ನಾಯು ಸೆಳೆತದ ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಇದೇ ವೇಳೆ, ವಿದೇಶಿ ವೇಗದ ಬೌಲರ್ ನೇಥನ್ ಎಲ್ಲಿಸ್ ಕೂಡ ಲಭ್ಯವಿಲ್ಲದ ಕಾರಣ, ಸಿಎಸ್‌ಕೆ ವೇಗದ ಬೌಲಿಂಗ್ ವಿಭಾಗ ಒತ್ತಡದಲ್ಲಿದೆ.
RCB vs GT: ಗುಜರಾತ್ ಟೈಟನ್ಸ್ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್!
ಆಕಾಶ್ ಮಧ್ವಾಲ್ ಅವರು ಆಗಮನದಿಂದ ಸಿಎಸ್‌ಕೆ ತಂಡದ ಬೌಲಿಂಗ್ ವಿಭಾಗಕ್ಕೆ ನೆರವು ಸಿಗಬಹುದು. ಅವರು 2023 ಮತ್ತು 2024ರ ಐಪಿಎಲ್ ಟೂರ್ನಿಗಳಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಇದಾದ ಬಳಿಕ 2025ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿದ್ದರು. ರೋಹಿತ್ ನಾಯಕತ್ವದ ಅಡಿಯಲ್ಲಿ ಮಧ್ವಾಲ್ ಡೆತ್ ಓವರ್‌ಗಳಲ್ಲಿ ಕೀ ಬೌಲರ್ ಆಗಿದ್ದರು.
2023ರ ಐಪಿಎಲ್ ಟೂರ್ನಿಯಲ್ಲಿ ಆಕಾಶ್ ಮಧ್ವಾಲ್ ಅವರು ಆಡಿದ್ದ 8 ಪಂದ್ಯಗಳಿಂದ 14 ವಿಕೆಟ್‌ಗಳನ್ನು ಕಬಳಿಸಿದ್ದರು ಹಾಗೂ ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ನೆರವು ನೀಡಿದ್ದರು. ಅದರಲ್ಲಿಯೂ ವಿಶೇಷವಾಗಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಅವರು 5 ರನ್‌ಗೆ 5 ವಿಕೆಟ್ ಕಿತ್ತಿದ್ದರು. ಇದು ಐಪಿಎಲ್ ಟೂರ್ನಿಯ ಪ್ಲೇಆಫ್ಸ್‌ನಲ್ಲಿ ಮೂಡಿಬಂದ ಬೆಸ್ಟ್ ಬೌಲಿಂಗ್ ಸ್ಪೆಲ್ ಆಗಿದೆ.
ಒಟ್ಟಾರೆಯಾಗಿ ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಮಧ್ವಾಲ್ ಅವರು ಆಡಿದ್ದ 17 ಪಂದ್ಯಗಳಿಂದ ಒಂದು ಐದು ವಿಕೆಟ್ ಸಾಧನೆ ಸೇರಿದಂತೆ 23 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2020ರ ವರೆಗೂ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಆಕಾಶ್ ಮಧ್ವಾಲ್, ಬಳಿಕ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅವರು ಸಿವಿಲ್ ಇಂಜಿನಿಯರ್ ಆಗಿದ್ದು, ಕ್ರಿಕೆಟ್‌ನಲ್ಲಿ ಅಪಾರ ಆಸಕ್ತಿ ಹಾಗೂ ಪ್ರತಿಭೆಯನ್ನು ಹೊಂದಿದ್ದರು. ಅವರು ತಮ್ಮ ಬೌಲಿಂಗ್‌ನಲ್ಲಿ ಅಪಾರ ಪ್ರತಿಭೆಯನ್ನು ಹೊಂದಿದ್ದು ಡೆತ್ ಓವರ್‌ಗಳಲ್ಲಿನ ನಿಯಂತ್ರಣ ಹಾಗೂ ನಿಯಮಿತವಾಗಿ ಯಾರ್ಕರ್ ಬೌಲ್ ಮಾಡುವ ಅವರ ಸಾಮರ್ಥ್ಯವನ್ನು ಕರಗತ ಮಾಡಿಕೊಂಡಿದ್ದಾರೆ.